ಕಾಣಿಯೂರು: ಕೋಟಿ ಚೆನ್ನಯರ ಆರಾಧ್ಯಮೂರ್ತಿ ಎಣ್ಮೂರು ಗ್ರಾಮದ ಕೆಮ್ಮಲೆ ಶ್ರೀನಾಗಬ್ರಹ್ಮ ದೇವಸ್ಥಾನ ಐತಿಹಾಸಿ ಕ್ಷೇತ್ರ. ಇಲ್ಲಿಗೆ ಜಿಲ್ಲೆಯ ಜನರಲ್ಲದೆ ಹೊರಜಿಲ್ಲೆಯ ಸಾವಿರಾರು ಭಕ್ತರು ಆಗಮಿಸಿ ಶ್ರೀದೇವರ ದರ್ಶನ ಪಡೆಯುತ್ತಾರೆ. ಇದರ ಸಮೀಪವೇ ಕೋಟಿ-ಚೆನ್ನಯರ ಅಂತ್ಯವಾದ ಸ್ಥಳ ಎಣ್ಮೂರು ಗರಡಿಯೂ ಇದೆ. ಭಕ್ತರು ಆಗಮಿಸುವ ಇಲ್ಲಿ ಯಾವುದೇ ಮೊಬೈಲ್ ನೆಟ್‌ವರ್ಕ್ ಇಲ್ಲದೇ ಇರುವುದರಿಂದ ಸಂಪರ್ಕ ಕಷ್ಟ ಸಾಧ್ಯವಾಗಿದೆ.
ಇಂದಿನ ಡಿಜಿಟಲ್ ಯುಗದಲ್ಲಿ ಹಳ್ಳಿ-ಹಳ್ಳಿಗೂ ಇಂಟರ್‌ನೆಟ್ ಕಲ್ಪಿಸುವ ಡಿಜಿಟಲ್ ಇಂಡಿಯಾ ಮೊದಲಾದ ಕಲ್ಪನೆಗೆ ಇದು ದೊಡ್ಡ ಹಿನ್ನಡೆ. ಕೆಮ್ಮಲೆಯಲ್ಲಿ ಹಾಗೂ ಅದರ ಸುತ್ತಮುತ್ತ ಯಾವುದೇ ಸಂಸ್ಥೆಯ ಮೊಬೈಲ್ ನೆಟ್‌ವರ್ಕ್ ಸಿಗುತ್ತಿಲ್ಲ.ಈ ಭಾಗದ ಜನತೆ ಇಂಟರ್‌ನೆಟ್ ಸಂಪರ್ಕ ಬೇಕಾದರೆ ದೂರದ ಎಡಮಂಗಲಕ್ಕೆ ಹೋಗಬೇಕಿದೆ. ಕೊರೊನಾ ಸಮಯದಲ್ಲಿ ಈ ಭಾಗದ ವಿದ್ಯಾರ್ಥಿಗಳು ಆನ್ಲೈನ್ ತರಗತಿಗಾಗಿ ಇಂಟರ್‌ನೆಟ್ ಸಂಪರ್ಕ ಹುಡುಕಿಕೊಂಡು ದೂರದ ಎಡಮಂಗಲ, ನಿಂತಿಕಲ್ಲಿಗೆ ಹೋಗುತ್ತಿದ್ದರು.
ಐತಿಹಾಸಿಕ ತಾಣ, ಶ್ರದ್ಧಾ ಕೇಂದ್ರಗಳು ಇಲ್ಲಿವೆ :
ಕೆಮ್ಮಲೆ ನಾಗಬ್ರಹ್ಮ ಸನ್ನಿಧಿ ಸೇರಿದಂತೆ ದೈವಸ್ಥಾನಗಳು, ಎಣ್ಮೂರಿನಲ್ಲಿರುವ ಕೋಟಿ-ಚೆನ್ನಯರ ಸಮಾಧಿ ಸ್ಥಳ, ಕೋಟಿ-ಚೆನ್ನಯರ ಅಕ್ಕ ಕಿನ್ನಿದಾರು ಅವರ ಮನೆ ಹೀಗೆ ಪರಿಸರದಲ್ಲಿ ಹತ್ತಾರು ಐತಿಹಾಸಿಕ ಕುರುಹುಗಳು ಇಲ್ಲಿವೆ. ಇಂತಹ ಐತಿಹಾಸಿಕ ಕ್ಷೇತ್ರದಲ್ಲಿ ನೆಟ್‌ವರ್ಕ್ ಇಲ್ಲದೇ ಇರುವುದು ಕ್ಷೇತ್ರಕ್ಕೆ ಬರುವ ಭಕ್ತರಿಗೆ ಹಾಗೂ ಇಲ್ಲಿನ ಊರಿನವರಿಗೆ ದೊಡ್ಡ ಸಮಸ್ಯೆಯಾಗಿದೆ. ಕೂಡಲೇ ಇಲ್ಲಿ ಮೊಬೈಲ್ ಟವರ್ ನಿರ್ಮಿಸಬೇಕೆಂಬುದು ಇಲ್ಲಿನವರ ಆಗ್ರಹವಾಗಿದೆ.
ವಿವಿಧೆಡೆಯಿಂದ ಭಕ್ತರು ಕೆಮ್ಮಲೆಗೆ ಆಗಮಿಸುತ್ತಾರೆ.ಆದರೆ ಈ ಬಾಗದಲ್ಲಿ ಯಾವುದೇ ಮೊಬೈಲ್ ಸಿಗ್ನಲ್ ದೊರಕುತ್ತಿಲ್ಲ. ಕೂಡಲೇ ಈ ಭಾಗದಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಜನಪ್ರತಿನಿಧಿಗಳು, ಮೊಬೈಲ್ ಸಂಸ್ಥೆಯ ಮುಖ್ಯಸ್ಥರು ಗಮನಹರಿಸಬೇಕಾಗಿದೆ.
–ಗೋಪಾಲಕೃಷ್ಣ ಐಪಳ, ಕೋಶಾಧಿಕಾರಿ ಜೀರ್ಣೋದ್ಧಾರ ಸಮಿತಿ ಶ್ರೀಕ್ಷೇತ್ರ ಕೆಮ್ಮಲೆ