Advertisement

ಕುಗ್ರಾಮಗಳಲ್ಲಿ ಮೊಬೈಲ್‌ ನೆಟ್‌ವರ್ಕ್‌ಗಾಗಿ ಪರದಾಟ!

04:37 PM Apr 25, 2022 | Team Udayavani |

ಚಿಕ್ಕಮಗಳೂರು: ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ. ಮತ್ತೊಮ್ಮೆ ಪ್ರಯತ್ನಿಸಿ. ಇದು ಗ್ರಾಮೀಣ ಪ್ರದೇಶದ ಮೊಬೈಲ್‌ ಬಳಕೆದಾರರ ದಿನನಿತ್ಯದ ಗೋಳಾಟ. ಸಮಯಕ್ಕೆ ಸರಿಯಾಗಿ ಸಂಪರ್ಕ ಸಾಧ್ಯವಾಗದೆ ಪರದಾಡುವಂತಾಗಿದೆ.

Advertisement

ಚಿಕ್ಕಮಗಳೂರು ಜಿಲ್ಲೆ ಮಲೆನಾಡು, ಬಯಲುಸೀಮೆ ಹೊಂದಿದ್ದು, ಮಲೆನಾಡಿನಲ್ಲಿ ಅತ್ಯಂತ ಕುಗ್ರಾಮಗಳು ಇಂದಿಗೂ ಜೀವಂತವಾಗಿವೆ. ಆಸ್ಪತ್ರೆ ಸೇರಿದಂತೆ ಇತರೆ ಕೆಲಸ ಕಾರ್ಯಗಳಿಗೆ ಹತ್ತಾರು ಕಿಮೀ ಬರಬೇಕಾದ ಸ್ಥಿತಿ ಇದೆ. ಅನಾರೋಗ್ಯ ಸೇರಿದಂತೆ ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿ ಯಾರನ್ನಾದರೂ ಸಂಪರ್ಕಿಸಬೇಕೆಂದರೆ ಹರಸಾಹಸ ಪಡಬೇಕಿದೆ.

ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ಜಿಲ್ಲೆಯನ್ನು ಕಾಡುತ್ತಿದೆ. ಅದರಲೂ ಗ್ರಾಮೀಣ ಪ್ರದೇಶದ ಜನರು ಮೊಬೈಲ್‌ ನೆಟ್‌ ವರ್ಕ್‌ಗಾಗಿ ಕಾಡುಮೇಡು ಅಲೆಯಬೇಕಾದ ಸ್ಥಿತಿ ಇದೆ. ಗ್ರಾಮೀಣ ಪ್ರದೇಶಗಳಲ್ಲಿನ ಬಹುತೇಕ ಮೊಬೈಲ್‌ ಟವರ್‌ ಗಳು ಬಿಎಸ್‌ಎನ್‌ಎಲ್‌ ಟವರ್‌ಗಳನ್ನು ಹೊಂದಿದ್ದು, ಈ ಟವರ್‌ ಹೊಂದಿರುವ ಗ್ರಾಮಗಳ ಜನರ ಸ್ಥಿತಿಯಂತೂ ಹೇಳದಂತಾಗಿದೆ. ಕರೆಂಟ್‌ ಇದ್ರೆ ನೆಟ್‌ವರ್ಕ್‌. ಕರೆಂಟ್‌ ಇಲ್ಲದಿದ್ರೆ ನೆಟ್‌ವರ್ಕ್‌ ಸುಳಿಯುವುದಿಲ್ಲ.

ಖಾಸಗಿ ಮೊಬೈಲ್‌ ಕಂಪೆನಿಗಳ ಟವರ್‌ಗಳು ಬಹುತೇಕ ಪಟ್ಟಣ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ. ಗ್ರಾಮೀಣ ಪ್ರದೇಶಗಳು ಲಾಭದಾಯಕವಲ್ಲದ ಕಾರಣ ಖಾಸಗಿ ಕಂಪೆನಿಗಳು ಈ ಕಡೆ ಮುಖ ಮಾಡುವುದಿಲ್ಲ. ಒಂದು ವೇಳೆ ಟವರ್‌ಗಳು ಇದ್ದರೂ ತರಂಗಾಂತರಗಳ ವ್ಯಾಪ್ತಿ ಅತ್ಯಂತ ಕಡಿಮೆ ಇರುತ್ತದೆ. ಪಟ್ಟಣ ಪ್ರದೇಶ ಬಿಟ್ಟು ಒಂದರೆಡು ಕಿಮೀ ಸರಿಯುತ್ತಿದ್ದಂತೆ ನಾಟ್‌ ರೀಚಬಲ್‌…..

ಜಿಲ್ಲಾದ್ಯಂತ 200 ಬಿಎಸ್‌ಎನ್‌ಎಲ್‌ ಮೊಬೈಲ್‌ ಟವರ್‌ಗಳನ್ನು ಹೊಂದಿದ್ದು, ಇದರಲ್ಲಿ 150 3ಜಿ, 200 2ಜಿ ಸೇರಿದಂತೆ 350 ಟವರ್‌ ಹೊಂದಿದೆ. ಈ ಟವರ್‌ಗಳು ವಿದ್ಯುತ್‌ ಇದ್ದರೆ ಮಾತ್ರ ಚಾಲನೆಯಲ್ಲಿರುತ್ತವೆ. ಇಲ್ಲದಿದ್ದರೆ ಕಾರ್ಯವನ್ನು ಸ್ಥಗಿತಗೊಳಿಸುತ್ತವೆ. ಇದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸೇರಿದಂತೆ ಇತರರಿಗೆ ಭಾರೀ ತೊಂದರೆಯಾಗುತ್ತಿದೆ.

Advertisement

ಕರೆಂಟ್‌ ಇಲ್ಲದ ಸಮಯದಲ್ಲಿ ಜನರೇಟರ್‌ನಲ್ಲಿ ಟವರ್‌ ರನ್ನಿಂಗ್‌ನಲಿಡಲು ಸರ್ಕಾರದಿಂದ ಬಿಎಸ್‌ಎನ್‌ ಎಲ್‌ಗೆ ಯಾವುದೇ ಅನುದಾನವಿಲ್ಲ. ಇದರಿಂದ ವಿದ್ಯುತ್‌ ಆಧರಿಸಿ ಟವರ್‌ಗಳು ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ. ಖಾಸಗಿ ಕಂಪೆನಿಗಳ 300ಕ್ಕೂ ಹೆಚ್ಚು ಮೊವೈಲ್‌ ಟವರ್‌ಗಳು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಖಾಸಗಿ ಕಂಪನಿಗಳು ನಗರ ಪ್ರದೇಶವನ್ನೇ ಹೆಚ್ಚಾಗಿ ಕೇಂದ್ರೀಕರಿಸುವುದರಿಂದ ಗ್ರಾಮೀಣ ಪ್ರದೇಶದ ಜನರು ಟವರ್‌ಗಾಗಿ ಹುಡುಕಾಡಬೇಕಾಗಿದೆ. ಇನ್ನು ಟವರ್‌ಗಳು ಕೆಟ್ಟು ನಿಂತಲ್ಲಿ ಸರಿಪಡಿಸಲು ವಾರಗಟ್ಟಲೆ ಬೇಕಾಗುತ್ತಿದೆ. ಮೊಬೈಲ್‌ ಟವರ್‌ ಸಮಸ್ಯೆಯಿಂದ ಗ್ರಾಮೀಣ ಪ್ರದೇಶದ ಜನರ ಗೋಳು ಹೇಳದಂತಾಗಿದೆ.

ಈಗಾಗಲೇ ಬೇಸಿಗೆ ಕಾಲ ಆರಂಭವಾಗಿದೆ. ಕರೆಂಟ್‌ ಕಣ್ಣಾಮುಚ್ಚಾಲೆ ಆಟ ಆರಂಭವಾಗಿದ್ದು, ಲೋಡ್‌ ಶೆಡ್ಡಿಂಗ್‌ ನೆಪದಲ್ಲಿ ಕರೆಂಟ್‌ ತೆಗೆಯಲಾಗುತ್ತಿದೆ. ಗ್ರಾಮೀಣ ಪ್ರದೇಶದ ಬಹುತೇಕ ಟವರ್‌ಗಳು ಕರೆಂಟ್‌ ಅವಲಂಬಿಸಿರುವುದಿಂದ ಕೆಲ ಸಮಯ ಮಾತ್ರ ವರ್ಕ್ ನಲ್ಲಿರುತ್ತವೆ. ಉಳಿದಂತೆ ನೆಟ್‌ವರ್ಕ್‌ ಸಮಸ್ಯೆ. ಜನರೇಟರ್‌ನಿಂದ ಟವರ್‌ ಚಾಲನೆಯಲ್ಲಿಡಲು ಬಿಎಸ್‌ ಎನ್‌ಎಲ್‌ ಸಂಸ್ಥೆಗೆ ಸರ್ಕಾರದಿಂದ ಅನುದಾನ ಬರುತ್ತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ನೆಟ್‌ವರ್ಕ್‌ ಸಮಸ್ಯೆ ಪರಿಹರಿಸಲು ಸಿಂಗಲ್‌ ಫೇಸ್‌ ಕರೆಂಟ್‌ ನೀಡಿದರೂ ಸಾಕಾಗುತ್ತದೆ. ಒಟ್ಟಾರೆ ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ಪ್ರತಿನಿತ್ಯ ಕಾಡುತ್ತಿದ್ದು, ನೆಟ್‌ವರ್ಕ್‌ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕಿದೆ.

ಗ್ರಾಮೀಣ ಪ್ರದೇಶದ ಜನರು ಪ್ರತಿ ನಿತ್ಯ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ಎದುರಿಸುತ್ತಿದ್ದು, ಅನಾರೋಗ್ಯ ಸೇರಿದಂತೆ ಗಂಭೀರ ಪರಿಸ್ಥಿತಿ ಸಂದರ್ಭಗಳಲ್ಲಿ ಸರಿಯಾದ ಸಮಯಕ್ಕೆ ಯಾರನ್ನೂ ಸಂಪರ್ಕಿಸಲು ಸಾಧ್ಯವಾಗುವುದಿಲ್ಲ. ನೆಟ್‌ವರ್ಕ್‌ ಸಮಸ್ಯೆಯಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಾರೆ. ನೆಟ್‌ವರ್ಕ್‌ ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕಿದೆ. ಇಲ್ಲದಿದ್ದರೆ ಹಿಂದಿನಂತೆ ಲ್ಯಾಂಡ್‌ಫೋನ್‌ ಮೊರೆ ಹೋಗುವ ಪರಿಸ್ಥಿತಿ ಬರಬಹುದು. – ರಾಜೇಶ್‌ ದ್ಯಾವುಂಟ, ಕೆರೆ ಗ್ರಾಮದ ಗ್ರಾಮಸ್ಥ

ಸಂದೀಪ ಜಿ.ಎನ್. ಶೇಡ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next