Advertisement

ಮೊಬೈಲ್‌ ರೀತಿ ವಾಟರ್‌ ಚಾರ್ಜಿಂಗ್‌ ಕಾಲ ಸನ್ನಿಹಿತ

09:23 AM Jul 22, 2019 | Team Udayavani |

ಉಡುಪಿ: ಮೊಬೈಲ್‌, ಪವರ್‌ ಬ್ಯಾಂಕನ್ನು ಚಾರ್ಜ್‌ ಮಾಡುವಂತೆ ನೀರಿನ ಮಟ್ಟವನ್ನು ಕಾಯ್ದು ಕೊಳ್ಳುವ ಕಾಲ ಸನ್ನಿಹಿತವಾಗಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅಭಿಪ್ರಾಯಪಟ್ಟರು.

Advertisement

ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ “ಉದಯವಾಣಿ’ ದಿನಪತ್ರಿಕೆಯು ಜಿಲ್ಲಾಡಳಿತ, ಜಿ.ಪಂ., ನಿರ್ಮಿತಿ ಕೇಂದ್ರ,ಎಂಜಿಎಂ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ ಮಳೆಕೊಯ್ಲು ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಮೊಬೈಲ್‌, ಪವರ್‌ ಬ್ಯಾಂಕ್‌ ಎಷ್ಟು ಚಾರ್ಜ್‌ ಆಗಿದೆ ಎಂದು ಕುತೂಹಲದಿಂದ ಗಮನಿಸುತ್ತಲೇ ಇರುತ್ತೇವೆ. ಇವುಗಳ ಚಾರ್ಜ್‌ ಖಾಲಿ ಆಗದಂತೆ ಯೋಜನೆ ಹಾಕಿಕೊಳ್ಳುತ್ತೇವೆ. ಮೊನ್ನೆ ಬೇಸಗೆಯಲ್ಲಿ ನೀರಿನ ತತ್ವಾರವಾದಾಗ ಬಜೆ ಅಣೆಕಟ್ಟಿನಲ್ಲಿ ನೀರಿನ ಮಟ್ಟವನ್ನು ಕ್ಷಣಕ್ಷಣಕ್ಕೂ ಗಮನಿಸುತ್ತಿದ್ದೆವು. ಮೊಬೈಲ್‌, ಪವರ್‌ ಬ್ಯಾಂಕ್‌ ಚಾರ್ಜ್‌ ಮಟ್ಟ ಗಮನಿಸುವಂತೆ ಈಗ ನಮ್ಮ ಪರಿಸರದ ನೀರಿನ ಬಗೆಗೂ ಗಮನಿಸ ಬೇಕಾದ ಕಾಲ ಬಂದಿದೆ ಎಂದರು.

ಪ್ರತಿ ಗ್ರಾಮದಲ್ಲಿ ಜಾಗೃತಿ
ಹೆಚ್ಚುತ್ತಿರುವ ಜನಸಂಖ್ಯೆ ಸೀಮಿತ ಪ್ರಾಕೃತಿಕ ಸಂಪನ್ಮೂಲದ ಬೇಡಿಕೆ ಮತ್ತು ಪರಿಣಾಮದ ಮೇಲೆ ಪ್ರಭಾವ ಬೀರುತ್ತದೆ. ಪ್ರತಿ ಹನಿ ನೀರನ್ನು ಸದ್ಬಳಕೆ ಮಾಡುವ ಯೋಜನೆ ಹಾಕಿಕೊಳ್ಳಬೇಕು. ಇದಕ್ಕಾಗಿಯೇ ಸರಕಾರ ಜಲಾಮೃತ ಯೋಜನೆ ರೂಪಿಸಿದೆ. ಜಿಲ್ಲಾ ಮಟ್ಟದ ಯೋಜನೆಯನ್ನು ವಾರಂಬಳ್ಳಿ ಗ್ರಾ.ಪಂ.ನಲ್ಲಿ ಆರಂಭಿಸಲಾಗಿದೆ. ಪ್ರತಿ ಗ್ರಾ.ಪಂ. ಕಟ್ಟಡದಲ್ಲಿ ಮಳೆ ನೀರು ಕೊಯ್ಲು ತಂತ್ರಜ್ಞಾನವನ್ನು ಅಳವಡಿಸಿ ಸಾರ್ವ ಜನಿಕರನ್ನು ಪ್ರೇರೇಪಿಸಲು ನಿರ್ಧರಿಸಲಾಗಿದೆ ಎಂದರು.

ಜಿ.ಪಂ. ಸರ್ವಕ್ರಮ: ದಿನಕರಬಾಬು
ಜಲ ಸಾಕ್ಷರತೆ ರೂಪಿಸಲು ಜಿ.ಪಂ. ಎಲ್ಲ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಹೇಳಿದರು.

ನೀರಿನ ಸಮಸ್ಯೆ ಕಡಿಮೆ ಮಾಡಲು ಎಲ್ಲ ಗ್ರಾ.ಪಂ.ಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ಜಿ.ಪಂ. ಸೂಚಿಸಿದೆ. ಜಿ.ಪಂ. ಸರ್ವ ಸಹಕಾರವನ್ನು ನೀಡುತ್ತದೆ. ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಆಗಲು “ಉದಯವಾಣಿ’ ಕಾರಣವಾಗಿದೆ. ಈಗ ನೀರಿನ ಸಮಸ್ಯೆ ನಿವಾರಿಸಲು “ಉದಯವಾಣಿ’ ಮುಂದಾಗಿರುವುದು ಶ್ಲಾಘನೀಯ ಎಂದು ದಿನಕರ ಬಾಬು ಹೇಳಿದರು. ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಕೋರಿದರು.

Advertisement

ಹೆಚ್ಚು ಮಳೆಯಾದರೂ ಬರ
ಅತಿ ಹೆಚ್ಚು ಮಳೆ ಸುರಿಯುವ ಉಡುಪಿಯಲ್ಲಿ ಈ ಬೇಸಗೆಯಲ್ಲಿ ಟ್ಯಾಂಕರ್‌ ನೀರು ಪೂರೈಕೆಗೆ 4-4.5 ಕೋ.ರೂ. ಖರ್ಚು ಮಾಡಬೇಕಾ ಯಿತು. ಇಲ್ಲಿ ದೊಡ್ಡ ಅಣೆಕಟ್ಟು ಕಟ್ಟಲು ಆಗುವುದಿಲ್ಲ. ನೀರನ್ನು ಸಂಗ್ರಹಿಸುವುದೊಂದೇ ಸುಲಭೋಪಾಯ. ಇದಕ್ಕೇನೂ ರಾಕೆಟ್‌ ವಿಜ್ಞಾನ ಬೇಕಾಗಿಲ್ಲ ಎಂದು ಜಿಲ್ಲಾ ಪಂಚಾಯತ್‌ ಸಿಇಒ ಸಿಂಧೂ ಬಿ.ರೂಪೇಶ್‌ ಹೇಳಿದರು.

ಅನಗತ್ಯ ಸಿಮೆಂಟ್‌ ಕಾಮಗಾರಿ ಬೇಡ
ನೈಸರ್ಗಿಕ ಸಂಪನ್ಮೂಲಗಳನ್ನು ಮಿತವಾಗಿ ಬಳಸಬೇಕು. ಮನೆಗಳ ಆವರಣದಲ್ಲಿ ಅನಗತ್ಯ ವಾಗಿ ಇಂಟರ್‌ಲಾಕ್‌, ಕಾಂಕ್ರೀಟ್‌ ಹಾಕ ಬಾರದು. ಇಂಥ ಸಣ್ಣ ಕೆಲಸವೂ ಪ್ರಕೃತಿಗೆ ದೊಡ್ಡ ಕೊಡುಗೆ ಎಂದು ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ| ಎಂ.ಜಿ. ವಿಜಯ್‌ ಹೇಳಿದರು.

ನಿರ್ಮಿತಿ ಕೇಂದ್ರದ ನಿರ್ದೇಶಕ ಅರುಣಕುಮಾರ್‌ ಮಾತನಾಡಿದರು. ಜಲತಜ್ಞ ಶ್ರೀಪಡ್ರೆ ಕಾರ್ಯಾಗಾರ ನಡೆಸಿಕೊಟ್ಟರು.

ಎಂಜಿಎಂ ಕಾಲೇಜು, ಪೂರ್ಣಪ್ರಜ್ಞ ಕಾಲೇಜು, ಉಪೇಂದ್ರ ಪೈ ಮೆಮೋರಿಯಲ್‌ ಕಾಲೇಜು, ಅಜ್ಜರಕಾಡು ಸರಕಾರಿ ಮಹಿಳಾ ಕಾಲೇಜು, ಶಾರದಾ ರೆಸಿಡೆನ್ಶಿಯಲ್‌ ಸ್ಕೂಲ್‌, ಹಿರಿಯಡಕ ಸರಕಾರಿ ಪದವಿ ಕಾಲೇಜು, ಕರ್ನಾಟಕ ಕಾನೂನು ವಿ.ವಿ., ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡರು. “ಉದಯವಾಣಿ’ ವ್ಯಾಪಾರ ಅಭಿವೃದ್ಧಿ ವಿಭಾಗದ ಡಿಜಿಎಂ ಸತೀಶ್‌ ಶೆಣೈ ಸ್ವಾಗತಿಸಿ, ಸಂಪಾದಕ ಅರವಿಂದ ನಾವಡ ವಂದಿಸಿದರು. ಹಿರಿಯ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್‌ ಕಾರ್ಯಕ್ರಮ ನಿರ್ವಹಿಸಿದರು. ಅತಿಥಿಗಳನ್ನು ಗಿಡ ನೀಡಿ ವಿಶೇಷವಾಗಿ ಸ್ವಾಗತಿಸಲಾಯಿತು.

ಸಸ್ಯಾರೋಪಣಕ್ಕೂ ಆದ್ಯತೆ
ಮಳೆ ನೀರು ಕೊಯ್ಲು ತಂತ್ರದ ಜತೆಗೆ ಮಣ್ಣಿನ ಸವಕಳಿ ತಪ್ಪಿಸಲು, ಗಿಡಮರಗಳನ್ನು ಬೆಳೆಸಲೂ ಜಿಲ್ಲಾಡಳಿತ ಒತ್ತು ನೀಡುತ್ತಿದೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊಸ ಮನೆ ಕಟ್ಟುವ ವರು ಮಳೆ ಕೊಯ್ಲು ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿ ಸಬೇಕು. ಇದು ಭಾರೀ ವೆಚ್ಚದಾಯಕ ಅಲ್ಲ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹೇಳಿದರು.

ನಾವು ಬರವನ್ನು ನಿರ್ವಹಿಸಿ ಈಗ ಮುಂಗಾರಿನಲ್ಲಿದ್ದೇವೆ. ಈಗ ಮಳೆ ನೀರನ್ನು ಸಮರ್ಥವಾಗಿ ಹಿಡಿದಿಟ್ಟುಕೊಳ್ಳುವ ಮೂಲಕ ಮುಂದೆ ಬರಬಹುದಾದ ಬರವನ್ನು ತಡೆಯಬೇಕು. “ಉದಯವಾಣಿ’ ಸುವರ್ಣ ಮಹೋತ್ಸವವನ್ನು ಜಲಜಾಗೃತಿ ಮೂಡಿಸುವ ಮೂಲಕ ಅರ್ಥಪೂರ್ಣಗೊಳಿಸುತ್ತಿದೆ ಎಂದರು.

ಜಲಭವಿಷ್ಯ ನಾವೇ ರೂಪಿಸಬೇಕಾಗಿದೆ
ಮಂಗಳೂರಿನಲ್ಲಿ ಕೆಲವು ದಿನಗಳ ಹಿಂದೆ ಮಳೆ ನೀರು ಕೊಯ್ಲು ಕಾರ್ಯಾಗಾರವನ್ನು ಆಯೋಜಿಸಿದಾಗ ಜನರು ಉತ್ಸಾಹದಿಂದ ಪಾಲ್ಗೊಂಡರಲ್ಲದೆ ತಮ್ಮ ಮನೆ, ಸಂಸ್ಥೆಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡರು. ಕಾರ್ಪೊರೇಟ್‌ ಸಂಸ್ಥೆಗಳು ಸರಕಾರಿ ಶಾಲೆಗಳಲ್ಲಿ ಮಳೆ ಕೊಯ್ಲು ವ್ಯವಸ್ಥೆಯನ್ನು ಪ್ರಾಯೋಜಿಸಿದವು. ಉದಯವಾಣಿಯು ನೀರಿನ ಕೊರತೆ ನಿವಾರಣೆ ಕುರಿತು ಸಮಗ್ರ ಯೋಜನೆ ರೂಪಿಸುತ್ತಿದ್ದು, ಅದರ ಭಾಗವಾಗಿ ಈ ಕಾರ್ಯಕ್ರಮ ವನ್ನು ಸಂಘಟಿಸಿದೆ. ಜನರು, ಸ್ವಯಂ ಸೇವಾ ಸಂಸ್ಥೆಗಳು, ಜಲತಜ್ಞರು, ಕಾರ್ಪೊರೇಟ್‌ ಸಂಸ್ಥೆಗಳು ಮುಂದಾಗಿ ಭವಿಷ್ಯವನ್ನು ರೂಪಿಸ ಬೇಕಿದೆ ಎಂದು ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ. ಸಿಇಒ ವಿನೋದ್‌ ಕುಮಾರ್‌ ಪ್ರಸ್ತಾವನೆಯಲ್ಲಿ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next