ಮೊಬೈಲ್ ಕೇವಲ ಸಂವಹನ ಸಾಧನವಾಗಿ ಉಳಿದಿಲ್ಲ. ಹಾಗಾಗಿ, ಅದರ ಬಳಕೆಗೆ ನಿರ್ಬಂಧ ಹೇರಬಹುದೇ? ಎಂದು ಪ್ರಶ್ನಿಸುವುದು “ನಾನ್‌ಸೆನ್ಸ್’ ಆಗುವುದಿಲ್ಲವೇನೋ! ಮೊಬೈಲ್ ಮೂಲಕವೇ ಅಂತರ್ಜಾಲ ಬಳಕೆ ವ್ಯಾಪಕವಾಗಿರುವ ಹೊತ್ತಲ್ಲಿ, ಎಲ್ಲ ಬಗೆಯ ಜ್ಞಾನವೂ ಬೆರಳ ತುದಿಗೆ ಲಭ್ಯವಿದೆ…
ಯಾವುದೇ ಕಾಲೇಜು ಕ್ಯಾಂಪಸ್ ಆಗಲಿ, “Use of mobile phone is strictly prohibited’ ಅನ್ನೋ ಒಂದು ಫಲಕ ಇದ್ದೇ ಇರುತ್ತೆ. ಅದನ್ನು ನೋಡಿದಾಗೆಲ್ಲಾ, ಎರಡು ವರ್ಷಗಳ ಹಿಂದೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯ ಪ್ರಾಧ್ಯಾಪಕರೊಬ್ಬರು ಹೇಳಿದ ಮಾತುಗಳು ನೆನಪಾಗುತ್ತವೆ. ಉಪನ್ಯಾಸ ನೀಡುವ ವೇಳೆಯಲ್ಲಿ ತಮ್ಮ ಮೊಬೈಲ್‌ಗೆ ಬಂದ ಕರೆ ಸ್ವೀಕರಿಸಿದ ಅವರು, “ನೀವೇನಾದ್ರೂ ನಿಮ್ಮ ಮೊಬೈಲ್ ಸ್ವಿಚ್ಡ್ ಆಫ್ ಮಾಡ್ಕೊಂಡಿದ್ರೆ, ದಯವಿಟ್ಟು ಆನ್ ಮಾಡಿ. ನಾನಂತೂ ನನ್ನ ಮೊಬೈಲ್‌ನ ಸ್ವಿಚ್ ಆಫ್ ಮಾಡೋದಿಲ್ಲ. ನೀವೆಲ್ಲ ಮೊಬೈಲ್ ಇಟ್ಟುಕೊಂಡಿರುವುದು ಅದನ್ನು ಉಪಯೋಗಿಸಲೋ ಅಥವಾ ಹೀಗೆ ಸ್ವಿಚ್ ಆಫ್ ಮಾಡಿಟ್ಟುಕೊಳ್ಳಲೋ?’ ಎಂದು ಪ್ರಶ್ನಿಸಿದ್ದರು. “ಮೊಬೈಲ್ ನಮಗೆ ಅತ್ಯಗತ್ಯವೆಂದು ಖರೀದಿಸಿದ ಮೇಲೆ ಅದನ್ನು ಸಾಧ್ಯವಾದಷ್ಟು ಬಳಸಬೇಕಲ್ಲವೇ?’ ಎಂದು ಹೇಳಿ ನಾವೆಲ್ಲ ಹುಬ್ಬೇರಿಸುವಂತೆ ಮಾಡಿದ್ದರು.
ಅದುವರೆಗೂ, “ಪ್ಲೀಸ್ ಸ್ವಿಚ್ ಆಫ್ ಯುವರ್ ಮೊಬೈಲ್’ ಎನ್ನುವ ಸೂಚನೆಗಷ್ಟೇ ಕಿವಿಯಾಗಿದ್ದ ನಮಗೆ, ಆ ಪ್ರೊಫೆಸರ್‌ರ ಅಭಿಪ್ರಾಯ ಭಿನ್ನವೆನಿಸಿತು. ಸ್ವತಃ ಉಪನ್ಯಾಸಕನಾಗಿರುವ ನಾನು, ತರಗತಿಯಲ್ಲಿ ವಿದ್ಯಾರ್ಥಿಗಳು ಕದ್ದು ಮುಚ್ಚಿ ಮೊಬೈಲ್ ಬಳಸುವುದನ್ನು ಕಂಡರೆ ಗದರುತ್ತೇನೆ. ಹಾಗೆ ಗದರುವಾಗೆಲ್ಲಾ ಐಐಎಸ್ಸಿ ಪ್ರೊಫೆಸರ್ ಮಾತು ನೆನಪಾಗುತ್ತದೆ. ಆದರೂ ಕಾಲೇಜಿನ ನಿಯಮದ ಪ್ರಕಾರ ಗದರುವುದು ಅನಿವಾರ್ಯ. ವಿದ್ಯಾರ್ಥಿಗಳಿಗೆ ಮೊಬೈಲ್ ಬಳಸಬೇಡಿ ಎಂದು ಹಿತವಚನ ಹೇಳುವ ನಾನೇ, ಟೈಮ್ ನೋಡಲು ಆಗಾಗ ಮೊಬೈಲ್ ಮೊರೆ ಹೋಗುತ್ತೇನೆ! ಜೇಬಿಗೆ ಮೊಬೈಲ್ ಬಂದಿಳಿದ ನಂತರ ಕೈಗೆ ವಾಚು ಕಟ್ಟುವ ಅಭ್ಯಾಸವೇ ತಪ್ಪಿತು. ಈಗ ಮತ್ತೆ ವಾಚು ಕಟ್ಟುವುದನ್ನು ರೂಢಿಸಿಕೊಳ್ಳೋಣವೆಂದರೂ ಮನಸ್ಸು ಒಪ್ಪದು. ಮೊಬೈಲ್ ಇರುವಾಗ ವಾಚ್ ಯಾಕೆ ಅಂತ ಕಾಮನ್‌ಸೆನ್ಸೂ ಬುದ್ಧಿವಾದ ಹೇಳುತ್ತೆ.
ಮೊಬೈಲ್ ಬಳಕೆ ಮತ್ತದಕ್ಕೆ ಹೇರುವ ನಿರ್ಬಂಧದ ಕುರಿತು ಇಷ್ಟೆಲ್ಲ ಪೀಠಿಕೆ ಹಾಕಲು ಒಂದಿಷ್ಟು ಸಕಾರಣಗಳಿವೆ. ನೂತನ ತಂತ್ರಜ್ಞಾನಗಳ ಆವಿಷ್ಕಾರವಾದಂತೆ, ಮೊಬೈಲ್ ಕೇವಲ ಸಂವಹನ ಸಾಧನವಾಗಿ ಉಳಿದಿಲ್ಲ. ಹಾಗಾಗಿ, ಅದರ ಬಳಕೆಗೆ ನಿರ್ಬಂಧ ಹೇರಬಹುದೇ? ಎಂದು ಪ್ರಶ್ನಿಸುವುದು “ನಾನ್‌ಸೆನ್ಸ್’ ಆಗುವುದಿಲ್ಲವೇನೋ! ಮೊಬೈಲ್ ಮೂಲಕವೇ ಅಂತರ್ಜಾಲ ಬಳಕೆ ವ್ಯಾಪಕವಾಗಿರುವ ಹೊತ್ತಲ್ಲಿ, ಎಲ್ಲ ಬಗೆಯ ಜ್ಞಾನವೂ ಬೆರಳ ತುದಿಗೆ ಲಭ್ಯವಿದೆ. ಅಂತರ್ಜಾಲದಲ್ಲಿ ಲಭ್ಯವಿರುವ ಕಲಿಕಾ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಂಡರೆ, ಪಾಠ ಮಾಡೋಕೆ ಉಪನ್ಯಾಸಕರೇ ಬೇಡ. ಅಷ್ಟೇ ಅಲ್ಲ, ತರಗತಿಯಲ್ಲಿ ಅಧ್ಯಾಪಕರು ಹೇಳುವ ಯಾವುದೇ ವಿಷಯದ ಸತ್ಯಾಸತ್ಯತೆ ಕುರಿತು ಅನುಮಾನ ಬಂದರೆ ಕೂಡಲೇ ಗೂಗಲ್ ಮಾಡಿಯೋ ಅಥವಾ ಮತ್ತಿನ್ಯಾವುದೋ ಜಾಲತಾಣದಲ್ಲೋ ಪರಿಶೀಲಿಸಲೂಬಹುದು.
ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 25ಕ್ಕೂ ಹೆಚ್ಚು ವರ್ಷಗಳಿಂದ ಬೋಧಿಸುತ್ತಿರುವ ಪ್ರಾಧ್ಯಾಪಕರೊಬ್ಬರು, ಹೊಸದಾಗಿ ಎಂಜಿನಿಯರಿಂಗ್‌ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದ ಮಾತು ಇಲ್ಲಿ ಉಲ್ಲೇಖಾರ್ಹ. “ಪದವಿ ಮುಗಿಸಿದ ಮೇಲೆ ನೀವು ಉತ್ತಮ ಎಂಜಿನಿಯರ್‌ಗಳಾಗದಿದ್ದರೆ, ಕಾಲೇಜಿನಲ್ಲಿ ಅದಿರ್ಲಿಲ್ಲ, ಇದಿರ್ಲಿಲ್ಲ. ಅದ್ಕೆ ನಾವು ಕಲಿಯಬೇಕಾದ್ದನ್ನ ಕಲೀಲಿಲ್ಲ ಅಂತೆಲ್ಲ ದೂರುವ ಹಾಗಿಲ್ಲ. ಯಾಕಂದ್ರೆ, ನೀವು ಬೇಕಿದ್ರೆ ಎಂಐಟಿ(Massachusetts Institute of Technology) ಪೊÅಫೆಸರ್‌ಗಳ ಪಾಠವನ್ನೂ ನೋಡಿ-ಕೇಳಿ ಕಲಿಯಬಹುದು. ಅದೂ ಬೇಡ ಅಂದ್ರೆ ಐಐಟಿ ಪೊÅಫೆಸರ್‌ಗಳ ವಿಡಿಯೋ ಲೆಕ್ಚರ್‌ಗಳನ್ನ NPTEL (National Programme on Technology Enhanced Learning)ನಲ್ಲಿ ರೆಫರ್ ಮಾಡಬಹುದು. ನಿಮ್ಮ ಕೈಯಲ್ಲಿ ಮೊಬೈಲ್ ಇರೋದು ಯಾಕೆ? ಕಾಲೇಜ್ ಕ್ಯಾಂಪಸ್‌ನಲ್ಲಿ ಬಿಟ್ಟಿ ವೈಫೈ ಸಿಗಲ್ವಾ? ನೀವೇನಾದ್ರೂ ಒಳ್ಳೆ ಎಂಜಿನಿಯರ್‌ಗಳಾದ್ರೆ ಅದೂ ನಿಮ್ಮಿಂದಲೇ, ಕೆಟ್ಟು ಕೆರ ಹಿಡಿದ್ರೂ ಅದಕ್ಕೂ ನೀವೇ ಕಾರಣ ನೆನಪಿಟ್ಕೊಳಿ’ ಅಂತ ಲಘುವಾಗಿಯೇ ಎಚ್ಚರಿಸಿದ್ದರು. “ಜೆರಾಕ್ಸ್’ ಸೌಲಭ್ಯವೂ ಕೈಗೆಟುಕದ ಕಾಲದಲ್ಲಿ ಎಂಜಿನಿಯರಿಂಗ್ ಮುಗಿಸಿದ ಅವರಲ್ಲಿ, ಈಗಿನ ತಂತ್ರಜ್ಞಾನವನ್ನು ಬಳಸಿಕೊಂಡರೆ ವಿದ್ಯಾರ್ಥಿಗಳೇ ಏಕಲವ್ಯರಾಗಬಹುದೆಂಬ ಕುರಿತು ಯಾವುದೇ ಅನುಮಾನವಿರಲಿಲ್ಲ.
ಮೊಬೈಲ್ ಬಳಕೆಯೂ ಸೇರಿದಂತೆ ಯಾವುದೇ ತಂತ್ರಜ್ಞಾನ ಅಥವಾ ಸಾಧನಗಳಿಗೆ ಅವುಗಳದ್ದೇ ಆದ ಸಾಧಕ-ಬಾಧಕಗಳಿರುತ್ತವೆ. ದುರ್ಬಳಕೆಯನ್ನಷ್ಟೇ ಮುಂದೆ ಮಾಡಿ ಹೇರಲ್ಪಡುವ ನಿಷೇಧಗಳನ್ನು ಉಪಯೋಗದ ದೃಷ್ಟಿಯಿಂದ ಸಡಿಲಿಸಲು ಸಾಧ್ಯವೇ? ಇದೇ ವೇಳೆ, ನಿರ್ಬಂಧ ಹೇರುವ ಬದಲು ಮೊಬೈಲ್‌ನಂಥ ಸಾಧನಗಳನ್ನು ಯಾವೆಲ್ಲ ಕಾರಣಗಳಿಗೆ ಹೆಚ್ಚು ಬಳಸಬೇಕು ಮತ್ತು ಯಾವ ಸಂದರ್ಭಗಳಲ್ಲಿ ಬಳಸಬಾರದು ಎಂಬುದರ ಕುರಿತು ಅರಿವು ಮೂಡಿಸುವ ಪ್ರಯತ್ನಗಳಾಗಬೇಕಿದೆ.
ಸುರತ್ಕಲ್‌ನ ಎನ್‌ಐಟಿಯ ವರ್ಚುವಲ್ ಲ್ಯಾಬ್
ಅಂತರ್ಜಾಲದಲ್ಲಿ ಕೇವಲ ಮಾಹಿತಿ, ಆಡಿಯೋ ಲೆಕ್ಚರ್‌ಗಳಷ್ಟೇ ಸಿಗುವುದಲ್ಲ. ಸಮರ್ಪಕ ಮೂಲಸೌಕರ್ಯಗಳಿಲ್ಲದ ವಿದ್ಯಾರ್ಥಿಯೊಬ್ಬ “virtual lab’ ಸೌಲಭ್ಯ ಬಳಸಿಕೊಂಡು ತಾನಿರುವ ಸ್ಥಳದಿಂದಲೇ, ಸುಸಜ್ಜಿತ ಕಾಲೇಜೊಂದರ ಲ್ಯಾಬ್‌ನಲ್ಲಿರುವ ಉಪಕರಣಗಳ ಮೂಲಕ ಪ್ರಯೋಗಗಳನ್ನು ಮಾಡಿ ಫಲಿತಾಂಶ ಪಡೆಯಲೂ ಸಾಧ್ಯವಿದೆ. ಸುರತ್ಕಲ್‌ನಲ್ಲಿರುವ ಎನ್‌ಐಟಿಕೆ ಕೂಡ ತಮ್ಮೊಂದಿಗೆ ಕೈಜೋಡಿಸುವ ಕಾಲೇಜುಗಳ ವಿದ್ಯಾರ್ಥಿಗಳಿಗೆ “virtual lab’ ಸೌಲಭ್ಯ ಕಲ್ಪಿಸುತ್ತಿದೆ.
ಎಚ್.ಕೆ. ಶರತ್, ಹಾಸನ