Advertisement

Parappana Agrahara Prison: ಪರಪ್ಪನ ಅಗ್ರಹಾರ ಜೈಲಲ್ಲಿ ಮತ್ತೆ ಮೊಬೈಲ್‌ಗ‌ಳು ಪತ್ತೆ

08:27 AM Sep 16, 2024 | Team Udayavani |

ಬೆಂಗಳೂರು: ನಟ ದರ್ಶನ್‌ಗೆ ವಿಶೇಷ ಆತಿಥ್ಯ ನೀಡಿದ ಆರೋಪದ ಬಳಿಕವೂ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳು ಕಡಿವಾಣ ಬಿದ್ದಿಲ್ಲ. ಜೈಲಿನ ಮುಖ್ಯಅಧೀಕ್ಷಕರು ಸೇರಿ ಎಲ್ಲಾ ಅಧಿಕಾರಿ ಸಿಬ್ಬಂದಿ ಕಳ್ಳಾಟ ಮತ್ತೆ ಮುಂದುವರಿದಿದ್ದು, ಅದಕ್ಕೆ ಪೂರಕವೆಂಬಂತೆ ಆಗ್ನೇಯ ವಿಭಾಗ ಪೊಲೀಸರ ದಾಳಿ ವೇಳೆ ವಿಲ್ಸನ್‌ಗಾರ್ಡನ್‌ ನಾಗನ ಬ್ಯಾರಕ್‌ನಲ್ಲಿ 18 ಮೊಬೈಲ್‌ಗ‌ಳು ಪತ್ತೆಯಾಗಿವೆ.

Advertisement

ನಟ ದರ್ಶನ್‌ ಮತ್ತು ರೌಡಿಶೀಟರ್‌ ವಿಲ್ಸನ್‌ ಗಾರ್ಡನ್‌ ನಾಗನಿಗೆ ವಿಶೇಷ ಆತಿಥ್ಯ ನೀಡಿದ ಸಂಬಂಧ ದಾಖಲಾಗಿರುವ ಪ್ರಕರಣ ಹಿನ್ನೆಲೆಯಲ್ಲಿ ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ನೇತೃತ್ವದ ಸುಮಾರು 45ಕ್ಕೂ ಅಧಿಕಾರಿಗಳ ತಂಡ ಜೈಲಿನ ಮೇಲೆ ದಾಳಿ ನಡೆಸಿದ್ದು, ರಾತ್ರಿ 7 ಗಂಟೆವರೆಗೂ ತಪಾಸಣೆ ನಡೆಸಿತ್ತು. ಈ ವೇಳೆ ವಿಲ್ಸನ್‌ ಗಾರ್ಡನ್‌ ನಾಗ ಹಾಗೂ ಆತನ ಸಹಚರರನ್ನು ಇರಿಸಲಾ ಗಿರುವ ಹೈಸೆಕ್ಯೂರಿಟಿ ಬ್ಯಾರಕ್‌ನಲ್ಲಿ ಐಫೋನ್‌ಗಳು ಸೇರಿ 18ಕ್ಕೂ ಹೆಚ್ಚು ಆ್ಯಂಡ್ರೈಡ್‌ ಮೊಬೈಲ್‌ಗ‌ಳು, ಚಾಕು, ಸಿಗರೆಟ್‌, ಪೆನ್‌ಡ್ರೈವ್‌, ಕುರ್ಚಿಗಳು ಪತ್ತೆಯಾಗಿವೆ.

ಬಟ್ಟೆ, ದಿಬ್ಬುಗಳಲ್ಲಿತ್ತು ಮೊಬೈಲ್‌ಗ‌ಳು: ವಿಲ್ಸನ್‌ ಗಾರ್ಡನ್‌ ನಾಗ, ಆತನ ಸಹಚರರು ಹಾಗೂ ಇತರೆ ವಿಚಾರಣಾಧೀನ ಕೈದಿಗಳಿರುವ ಬ್ಯಾರಕ್‌ನ ಶೋಧದ ವೇಳೆ, ಕೈದಿಗಳು ಬಳಸುವ ದಿಬ್ಬುಗಳು, ಬಟ್ಟೆಗಳ ಬ್ಯಾಗ್‌ಗಳಲ್ಲಿ ಐಫೋನ್‌ ಸೇರಿ ದುಬಾರಿ ಮೌಲ್ಯದ ಆ್ಯಂಡ್ರೈಡ್‌ ಮೊಬೈಲ್‌ಗ‌ಳು ಪತ್ತೆಯಾಗಿವೆ. ಮತ್ತೂಂದು ಸ್ಫೋಟಕ ವಿಚಾರವೆಂದರೆ, ಜೈಲಿನಲ್ಲಿ ಅತ್ಯಾಧುನಿಕ ಮೊಬೈಲ್‌ ಜಾಮರ್‌ ಅಳವಡಿಸಿದ್ದರೂ ದಾಳಿಯಲ್ಲಿ ಪತ್ತೆಯಾದ ಮೊಬೈಲ್‌ಗ‌ಳಲ್ಲಿ ನೆಟ್‌ವರ್ಕ್‌ ಇರುವುದು ಪತ್ತೆಯಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಮಾನವ ಸಹಿತ ಇರುವ ಟವರ್‌ ಬ್ಲಾಕಿಂಗ್‌ ಸಿಸ್ಟಂಗಳನ್ನು ಜೈಲಿನ ಮುಖ್ಯಸ್ಥರ ಸೂಚನೆ ಮೇರೆಗೆ ಕೆಲ ಸಿಬ್ಬಂದಿ ಅಥವಾ ಕೈದಿಗಳು ಆಫ್ ಮಾಡುತ್ತಾರೆ. ಸಾಮಾನ್ಯವಾಗಿ ಪ್ರತಿದಿನ ಸಂಜೆ 4 ಗಂಟೆಯಿಂದ 7 ಗಂಟೆವರೆಗೆ ಈ ಟವರ್‌ ಬ್ಲಾಕಿಂಗ್‌ ಸಿಸ್ಟಂ ಅನ್ನು ಆಫ್ ಮಾಡುತ್ತಾರೆ ಎಂಬುದು ಗೊತ್ತಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ದರ್ಶನ್‌ ಪ್ರಕರಣ ಬೆಳಕಿಗೆ ಬಂದಾಗ ಖುದ್ದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರು ಭೇಟಿ ನೀಡಿ, ಜೈಲಿನ ಮುಖ್ಯಸ್ಥರು ಸೇರಿ ಎಲ್ಲಾ ಹಂತದ ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ, ಮುಖ್ಯ ಅಧೀಕ್ಷಕ ಸೇರಿ 10ಕ್ಕೂ ಅಧಿಕಾರಿ- ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದರು. ಆದರೂ ವಿಲ್ಸನ್‌ಗಾರ್ಡನ್‌ ನಾಗ ಮತ್ತು ಸಹಚರರು ರಾಜ ರೋಷವಾಗಿ ಮೊಬೈಲ್‌ ಬಳಕೆ ಮಾಡುತ್ತಿರುವುದು ಜೈಲಿನ ಮುಖ್ಯ ಅಧೀಕ್ಷಕ ಸೇರಿ ಅಧಿಕಾರಿ-ಸಿಬ್ಬಂದಿಯ ಕರ್ತವ್ಯ ಲೋಪ ಕಂಡು ಬಂದಿದೆ.

ಜೈಲು ವಾರ್ಡನ್‌, ಅಧಿಕಾರಿಗಳಿಗೆ ನಾಗನಿಂದ ಪ್ರತಿ ವಾರವೂ ಲಂಚ?: ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿ‌ಶೀಟರ್‌ ವಿಲ್ಸನ್‌ಗಾರ್ಡನ್‌ ನಾಗ ಜೈಲಿನ ವಾರ್ಡನ್‌ ನಿಂದ ಮುಖ್ಯ ಅಧೀಕ್ಷಕರವರೆಗೂ ಪ್ರತಿ ವಾರ ಲಂಚ ನೀಡುತ್ತಾನೆ. ಅದನ್ನು ತನ್ನ ಯುವಕರ ಮೂಲಕ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಳ್ಳುತ್ತಾನೆ. ಈ ವಿಡಿಯೋ ತೋರಿಸಿಯೇ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿ-ಸಿಬ್ಬಂದಿಗೆ ಬ್ಲ್ಯಾಕ್‌ಮೇಲ್‌ ಮಾಡಿ ತಾನೂ ಸೇರಿ ತನ್ನ ತಂಡಕ್ಕೆ ವಿಶೇಷ ಆತಿಥ್ಯ ಪಡೆದುಕೊಳ್ಳುತ್ತಿದ್ದಾನೆ. ಜತೆಗೆ ಪ್ರತಿವಾರ ಲಂಚ ನೀಡುತ್ತಿದ್ದಾನೆ ಎಂದು ಹೇಳಲಾಗಿದೆ.

Advertisement

ದರ್ಶನ್‌ಗೆ ವಿಶೇಷ ಆತಿಥ್ಯ ನೀಡಿದ ಪ್ರಕರಣ ಸಂಬಂಧ ದಾಳಿ ನಡೆಸಿದಾಗ 15ಕ್ಕೂ ಹೆಚ್ಚು ಆ್ಯಂಡ್ರೈಡ್‌ ಮೊಬೈಲ್‌ಗ‌ಳು ಪತ್ತೆಯಾಗಿದ್ದು, ಈ ಸಂಬಂಧ ವಿಚಾರಣಾಧೀನ ಕೈದಿಗಳು ಹಾಗೂ ಜೈಲಿನ ಅಧಿಕಾರಿಗಳ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಪ್ರತ್ಯೇಕ ಎಫ್ಐಆರ್‌ ದಾಖಲಾಗಿದೆ. ಸಾರಾ ಫಾತೀಮಾ, ಆಗ್ನೇಯ ವಿಭಾಗದ ಡಿಸಿಪಿ

Advertisement

Udayavani is now on Telegram. Click here to join our channel and stay updated with the latest news.

Next