ಶಿವಮೊಗ್ಗ: ರಕ್ತಹೀನತೆಯಿಂದ ಬಳಲುತ್ತಿರುವ ಮಕ್ಕಳು, ಕಿಶೋರಿಯರು, ಗರ್ಭಿಣಿಯರು, ತಾಯಂದಿರು ಹಾಗೂ ನವಜಾತ ಶಿಶುಗಳ ಪೋಷಣೆ ಮತ್ತು ನಿರಂತರ ಅನುಪಾಲನೆಯ ಸದುದ್ದೇಶದಿಂದ ಜಿಲ್ಲೆಯ ಎಲ್ಲಾ ಅಂಗನವಾಡಿಗಳ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕಿಯರಿಗೆ ಮೊಬೈಲ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಅವರು ಶನಿವಾರ ಜಿಲ್ಲಾಡಳಿತ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕಿಯರಿಗೆ ಸಾಂಕೇತಿಕವಾಗಿ ಮೊಬೈಲ್ ವಿತರಿಸಿ ಮಾತನಾಡಿದರು.
ಕೇಂದ್ರ ಪುರಸ್ಕೃತ ಪೋಷಣ ಅಭಿಯಾನಯೋಜನೆಯಡಿ ದೇಶದ ಪ್ರಧಾನ ಮಂತ್ರಿಗಳು ರೂಪಿಸಿರುವ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಭಾಗವಾಗಿ ಮೊಬೈಲ್ ವಿತರಿಸಲಾಗುತ್ತಿದೆ. ಇದರಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದಅನುಷ್ಠಾನಗೊಳಿಸಲಾಗುವ ಎಲ್ಲಾ ಕಾರ್ಯಕ್ರಮಗಳ ಅನುಪಾಲನೆ ಹಾಗೂ ಮಾಹಿತಿ ಪಡೆದುಕೊಳ್ಳಲು ಅನುಕೂಲವಾಗಲಿದೆ. ಪ್ರಸ್ತುತ ಜಿಲ್ಲೆಯಲ್ಲಿ 2525 ಮೊಬೈಲ್ ಹಂಚಿಕೆಯಾಗಿದೆ. ಜಿಲ್ಲೆಯಲ್ಲಿ ಇರುವ 2439 ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರಿಗೆ ಹಾಗೂ 86 ಮೇಲ್ವಿಚಾರಕಿಯರಿಗೆ ಶೀಘ್ರವೇ ಮೊಬೈಲ್ ನೀಡಲಾಗುವುದು. ಅಲ್ಲದೇ ಅಪೌಷ್ಟಿಕತೆ, ರಕ್ತಹೀನತೆ ಹಾಗೂ ಶಿಶು ಮತ್ತು ತಾಯಿ ಮರಣ ಪ್ರಮಾಣವನ್ನು ನಿಯಂತ್ರಿಸುವುದು ಕೂಡ ಈ ಕಾರ್ಯಕ್ರಮದ ಭಾಗವಾಗಿರಲಿದೆ. ಜಿಲ್ಲಾದ್ಯಂತ ಸೀಮಂತ, ಪೌಷ್ಟಿಕ ಆಹಾರ ಶಿಬಿರ, ಅನ್ನಪ್ರಾಶನ, ಸುಪೋಷಣ್ ದಿನ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಸೆಪ್ಟೆಂಬರ್‌ನಲ್ಲಿ ಜಿಲ್ಲಾದ್ಯಂತ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಾಡಲಾಗಿದ್ದು, ಅದರಲ್ಲಿ ಅಪೌಷ್ಟಿಕ ಮಕ್ಕಳ ಗುರುತಿಸುವಿಕೆ, ನ್ಯೂಟ್ರಿ ಗಾರ್ಡನ್, ಪೋಷಣ್ ಪಂಚಾಯತ್, ಪೋಷಣ್ ರಥ ಹಾಗೂ ಪೌಷ್ಟಿಕ ಆಹಾರ ಶಿಬಿರ ಮಾಡಲಾಗಿದ್ದು, ಒಟ್ಟು 9233 ಚಟುವಟಿಕೆಗಳ ಮೂಲಕ 9,07,267 ಜನರನ್ನು ತಲುಪಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಕೋವಿಡ್‌ನಂತಹ ಸಂದಿಗ್ಧ ಸಂದರ್ಭದಲ್ಲಿಯೂ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಹೃದಯವಂತಿಕೆ ಶ್ಲಾಘನೀಯ. ಕಾರ್ಯಕರ್ತೆಯರು ಸಲ್ಲಿಸುತ್ತಿರುವ ಸೇವೆ ಇನ್ನಷ್ಟು ರಚನಾತ್ಮಕವಾಗಿ, ಪರಿಣಾಮಕಾರಿಯಾಗಲು ಮೊಬೈಲ್ ವಿತರಣೆ ಸಹಕಾರಿಯಾಗಲಿದೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕಿಯರಿಗೆ ಸಾಂಕೇತಿಕವಾಗಿ ಮೊಬೈಲ್ ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಶಾಸಕ ಕೆ.ಬಿ. ಅಶೋಕನಾಯ್ಕ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ್, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್.ವೈಶಾಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಜಿ.ಜಿ. ಸುರೇಶ್ ಮುಂತಾದವರು ಉಪಸ್ಥಿತರಿದ್ದರು.