Advertisement

ಟ್ರಿಣ್‌ ಟ್ರಿಣ್‌ನಲ್ಲೇ ಝಣ ಝಣ ಕಾಂಚಾಣ

12:08 PM Oct 05, 2019 | Team Udayavani |

ಹೊಸದಿಲ್ಲಿ: ನಿಮ್ಮ ಫೋನ್‌ ರಿಂಗ್‌ ಆಗುತ್ತಿದೆಯೇ? ಎರಡು ಬಾರಿ ರಿಂಗ್‌ ಆಯಿತೇ? ಬೇಗ ಹೋಗಿ ಫೋನ್‌ ಅಟೆಂಡ್‌ ಮಾಡಿ… ಇಲ್ಲದಿದ್ದರೆ ಕರೆ ಕಟ್‌ ಆಗಿ, ಮತ್ತೆ ಮತ್ತೆ ಮಿಸ್ಡ್ ಕಾಲ್‌ ಆಗುವ ಎಲ್ಲ ಸಾಧ್ಯತೆಗಳು ಎದುರಾಗಲಿವೆ…

Advertisement

ಹೌದು, ಈಗಾಗಲೇ ಜಿಯೋ ನೆಟ್‌ವರ್ಕ್‌ನಲ್ಲಿ “ರಿಂಗಣ’ ಅವಧಿಯನ್ನು 45 ಸೆಕೆಂಡ್‌ಗಳಿಂದ 30 ಸೆಕೆಂಡ್‌ಗಳಿಗೆ ಇಳಿಕೆ ಮಾಡಲಾಗಿದೆ. ಈಗ ಇದೇ ಮಾರ್ಗವನ್ನು ಏರ್‌ಟೆಲ್‌ ಮತ್ತು ವೊಡಾಫೋನ್‌ಗಳೂ ತುಳಿದಿವೆ. ಅಷ್ಟೇ ಅಲ್ಲ, ಇವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರಿಂಗಣ ಅವಧಿಯನ್ನು 25 ಸೆಕೆಂಡ್‌ಗಳಿಗೆ ಇಳಿಕೆ ಮಾಡುವುದಾಗಿ ಹೇಳಿಕೊಂಡಿವೆ. ಏರ್‌ಟೆಲ್‌ ಈಗಾಗಲೇ ಟ್ರಾಯ್‌ಗೆ ಪತ್ರವನ್ನೂ ಬರೆದಿದೆ.

ಏನಿದು ರಿಂಗಣ ಅವಧಿ?
ನಮ್ಮ ಮೊಬೈಲ್‌ಗೆ ಕರೆಯೊಂದು ಬಂದಾಗ, ನಮ್ಮ ಫೋನ್‌ ರಿಂಗಣಿಸುವ ಅವಧಿ. ಸದ್ಯ ಇದು 45 ಸೆಕೆಂಡ್‌ (ಮುಕ್ಕಾಲು ನಿಮಿಷ) ಇದೆ. ಈ ಅವಧಿಯಲ್ಲಿ ನೀವು ಕರೆ ಸ್ವೀಕರಿಸಬಹುದಿತ್ತು. ಇದನ್ನು 25 ಸೆಕೆಂಡ್‌ಗಳಿಗೆ ಇಳಿಸಿದ ಸಂದರ್ಭದಲ್ಲಿ ಮಿಸ್ಡ್ ಕಾಲ್‌ ಆಗುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಏಕೆಂದರೆ ನಿಮಗೆ ಕರೆ ರಿಂಗಣವಾಗಿದ್ದು ಕೇಳಿಸಿ, ಫೋನ್‌ ಬಳಿ ಹೋಗಿ ಕರೆ ಸ್ವೀಕಾರ ಮಾಡುವ ಸಮಯ ಕಡಿಮೆಯಾಗಿಬಿಡುತ್ತದೆ.

ಕರೆ ಕಟ್‌ ಆದರೇನು?
ವಿಶೇಷವೆಂದರೆ ಇದೇ. ಸದ್ಯ ನಿಮ್ಮ ಮೊಬೈಲ್‌ ನೆಟ್‌ವರ್ಕ್‌(ಏರ್‌ಟೆಲ್‌)ನಿಂದ ಬೇರೊಂದು ನೆಟ್‌ವರ್ಕ್‌(ಜಿಯೋ)ಗೆ ಕರೆ ಮಾಡಿದ ತತ್‌ಕ್ಷಣವೇ ನಿಮ್ಮ ಸೇವಾದಾರ ಕಂಪೆನಿಯಿಂದ ಕರೆ ಹೋದ ನೆಟ್‌ವರ್ಕ್‌ಗೆ ನಿಮಿಷಕ್ಕೆ 6 ಪೈಸೆ ಸಂದಾಯ ವಾಗುತ್ತದೆ. ಇದಕ್ಕೆ “ಇಂಟರ್‌ಕನೆಕ್ಟ್ ಯೂಸೇಜ್‌ ಶುಲ್ಕ’ (ಐಯುಸಿ) ಎಂದು ಕರೆಯಲಾಗುತ್ತದೆ. ಪ್ರತಿ ಮಿಸ್ಡ್ ಕಾಲ್‌ಗ‌ೂ ಇಷ್ಟು ಹಣ ಸಿಕ್ಕೇ ಸಿಗುತ್ತದೆ. ಇದರಿಂದಲೇ ಕಂಪೆನಿಗಳು ದಿನಕ್ಕೆ ಕೋಟ್ಯಂತರ ರೂ. ಗಳಿಸುತ್ತವೆ.

ಜಿಯೋ ತಂತ್ರದ ವಿರುದ್ಧ ದೂರು
ಜಿಯೋ ಕಂಪೆನಿಯ ಈ ತಂತ್ರಗಾರಿಕೆ ಬಗ್ಗೆ ಏರ್‌ಟೆಲ್‌ ಟ್ರಾಯ್‌ ಗಮನಕ್ಕೂ ತಂದಿತ್ತು. ಆದರೆ ಇದುವರೆಗೆ ಟ್ರಾಯ್‌ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ. ಅಷ್ಟೇ ಅಲ್ಲ, ಇದು ಸರಿಯೋ ತಪ್ಪೋ ಎಂದೂ ಹೇಳಿರಲಿಲ್ಲ. ಹೀಗಾಗಿ ಏರ್‌ಟೆಲ್‌, ವೊಡಾಫೋನ್‌, ಐಡಿಯಾ ಕಂಪೆನಿಗಳೂ ಇದೇ ಮಾರ್ಗ ತುಳಿಯಲು ಮುಂದಾಗಿವೆ. ಈ ದೂರಿಗೆ ತಿರುಗೇಟು ನೀಡಿದ್ದ ಜಿಯೋ, ಜಗತ್ತಿನ ನಾನಾ ದೇಶಗಳಲ್ಲಿ ರಿಂಗಿಂಗ್‌ ಅವಧಿ 15ರಿಂದ 20 ಸೆಕೆಂಡ್‌ಗಳಷ್ಟಿದೆ. ಅದನ್ನೇ ನಾವೂ ಅನುಸರಿಸಿದ್ದೇವೆ ಎಂದು ಹೇಳಿತ್ತು.

Advertisement

ಗ್ರಾಹಕರಿಗೆ ಮಿಸ್ಡ್ಕಾಲ್‌ ಒತ್ತಡ
ಕಂಪೆನಿಗಳ ಹಪಾಹಪಿಯಿಂದ ಆಗಿರುವ ಈ ಬದಲಾವಣೆ ಸಾಮಾನ್ಯ ಗ್ರಾಹಕರಿಗೆ ಒಂದರ್ಥದಲ್ಲಿ ಹೊರೆಯಾಗುವುದಂತೂ ಖಂಡಿತ. ರಿಂಗಣಾವಧಿ ಕಡಿತವಾಗುವುದರಿಂದ ಮಿಸ್ಡ್ ಕಾಲ್‌ಗ‌ಳು ಹೆಚ್ಚಾಗುತ್ತವೆ. ಮತ್ತೆ ಮತ್ತೆ ಫೋನ್‌ ಮಾಡಬೇಕಾದ ಅನಿವಾರ್ಯಕ್ಕೂ ಒಳಗಾಗುವ ಸಾಧ್ಯತೆ ಉಂಟಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next