Advertisement

ಮೊಬೈಲ್‌ ತಂದ ಸಂಚಕಾರ: ಜಿಪಂ ಸಭೆ ಬಹಿಷ್ಕಾರ

11:53 AM Mar 04, 2018 | Team Udayavani |

ಕಲಬುರಗಿ: ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರು ಮೊಬೈಲ್‌ ನಲ್ಲಿ ಕಾಲಹರಣ ಮಾಡ್ತಾರೆ. ನಮ್ಮ ಸಮಸ್ಯೆಗಳನ್ನು ಕೇಳಿ ಕ್ರಮ ಕೈಗೊಳ್ಳದೇ ಇದ್ದರೆ ಸಭೆ ನಡೆದರೆಷ್ಟು? ಇಂತಹ ಸಿಇಒ ಇದ್ದರೆಷ್ಟು, ಬಿಟ್ಟರೆಷ್ಟು ಎಂದು ಆಕ್ರೋಶಗೊಂಡ ಜಿಪಂ ಸದಸ್ಯರು ಪಕ್ಷಬೇಧ ಮರೆತು 10ನೇ ಜಿಪಂ ಸಾಮಾನ್ಯ ಸಭೆಯನ್ನು ಬಹಿಷ್ಕಾರ ಮಾಡಿ ಹೊರ ನಡೆದ ಘಟನೆ ಶನಿವಾರ ನಡೆಯಿತು.

Advertisement

ನಗರದ ನೂತನ ಜಿಪಂ ಸಭಾಂಗಣದಲ್ಲಿ ಜಿಪಂ ಅಧ್ಯಕ್ಷೆ ಸುವರ್ಣಾ ಮಲಾಜಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಅಹರಾಹ್ನ 12:00ಕ್ಕೆ ಆರಂಭವಾದ ಸಾಮಾನ್ಯ ಸಭೆ ಆರಂಭದಲ್ಲಿ ತೊಗರಿ ಕಾಟ ಶುರುವಾಯಿತು.

ಕಪ್ಪು ಪಟ್ಟಿ ಪ್ರದರ್ಶನ: ಸದಸ್ಯ ಅರುಣಕುಮಾರ ಪಾಟೀಲ ತೊಗರಿ ಖರೀದಿಯಲ್ಲಿ ರಾಜ್ಯ ಸರಕಾರ ರೈತರೊಂದಿಗೆ ನಡೆದುಕೊಳ್ಳುತ್ತಿರುವ ರೀತಿಯಿಂದ ಬೇಸತ್ತು ಕಪ್ಪು ಪಟ್ಟಿ ಪ್ರದರ್ಶನ ಮಾಡಿದರು. ಸೂಸೂತ್ರವಾಗಿ ನೋಂದಣಿ ಆಗಿರುವ ಎಲ್ಲ ರೈತರ ತೊಗರಿ ಖರೀದಿಸುವಂತೆ ಆಗ್ರಹಿಸಿದರು. ಈ ವೇಳೆ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರ ಮಧ್ಯೆ ಜಟಾಪಟಿಯೂ ನಡೆಯಿತು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಹಾಯಕ ನಿರ್ದೇಶಕ ಮಾಧವಾಚಾರ್ಯ ಅವರು, ನೋಂದಾಯಿತ ರೈತರ ತೊಗರಿ ಖರೀದಿಸುವಂತೆ ಕೋರಿ ಜಿಲ್ಲಾಧಿ ಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದು, ಅನುಮತಿ ದೊರೆತ ನಂತರ ಖರೀದಿಸಲಾಗುವುದು ಎಂದು ಸ್ಪಷ್ಟಪಡಿಸಿದರು 

ಸಭೆ ಬಹಿಷ್ಕಾರ: ಈ ಗಲಾಟೆ ತಣ್ಣಗಾಗುತ್ತಿದ್ದಂತೆ ಸದಸ್ಯ ಅರವಿಂದ ಚವ್ಹಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕರ್ತವ್ಯಲೋಪ ಮತ್ತು ಕಾರ್ಯವೈಖರಿ ವಿರುದ್ಧ ಕಿಡಿಕಾರಿದರು. ಇಲಾಖೆಯಲ್ಲಿನ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ವಿ. ರಾಮನ್‌ ದುರಾಡಳಿತ, ಅಸಭ್ಯ ವರ್ತನೆ ಹಾಗೂ ಸಿಬ್ಬಂದಿಯೊಂದಿಗಿನ ಅನುಚಿತ ವರ್ತನೆ ಖಂಡಿಸಿದರು. ಅಲ್ಲದೆ, ಕೂಡಲೇ ಕ್ರಮ ಕೈಗೊಂಡು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆಯಲ್ಲಿ ಸಿಇಒ ಅವರು ಮೊಬೈಲ್‌ ನಲ್ಲಿ ತಲ್ಲಿನರಾಗಿದ್ದರು. ಈ ಹಂತದಲ್ಲಿಯೇ ಎದ್ದು ನಿಂತ ಸದಸ್ಯೆ ವಿಜಯಲಕ್ಷ್ಮೀ ರಾಗಿ ಅವರು, ನಿರ್ಮಿತಿ ಕೇಂದ್ರದಲ್ಲಿ ಡಿಎಸ್‌ಆರ್‌ ದರದಂತೆ ಖರೀದಿ ನಡೆದಿಲ್ಲ 23,500 ರೂ.ನಂತೆ ಖರೀದಿ ಮಾಡಲಾಗುತ್ತಿದೆ ಎಂದು ದೂರಿದರು.

Advertisement

ಈ ವೇಳೆಯಲ್ಲಿ ಸಿಇಒ ಅವರು ಉಭಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದರಲ್ಲದೆ, ಸದಸ್ಯರ ದೂರಿಗೆ ಸ್ಪಂದಿಸದೇ ಮೊಬೈಲ್‌ನಲ್ಲಿ ಮುಳಗಿದ್ದರು. ಇದರಿಂದ ಸಿಟ್ಟಿಗೆದ್ದ ಸದಸ್ಯರು ಪಕ್ಷಬೇಧ ಮರೆತು ಸಿಇಒ ವಿರುದ್ಧ ಗುಡುಗಿದರು. ಅಲ್ಲದೆ, ಸಿಇಒ ಹೆಪ್ಸಿಬಾ ಅವರ ನಿರ್ಲಕ್ಷ್ಯದಿಂದಾಗಿ ಅಭಿವೃದ್ಧಿಯಾಗುತ್ತಿಲ್ಲ. ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ. ಅವರು ತಪ್ಪು ಮಾಡಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಿಇಒ ಅವರು ಹಿಂದೇಟು ಹಾಕುತ್ತಿದ್ದಾರೆ.

ಇದರಿಂದಾಗಿ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಎಂದು ಸದಸ್ಯರಾದ ಸಂಜೀವನ ಯಾಕಾಪುರ, ಶಿವಾನಂದ ಬಿರಾದಾರ, ಸಿದ್ರಾಮ ಪ್ಯಾಟಿ, ಇತರರು ಆರೋಪಿಸಿ ಸಭೆ ಬಹಿಷ್ಕಾರ ಮಾಡಿ ಹೊರ ನಡೆದರು. ಜಿಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಮುಖ್ಯ ಯೋಜನಾ ಧಿಕಾರಿ ಪ್ರವೀಣ ಪ್ರಿಯಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು ರಾಮನ್‌ ವಿರುದ್ದ  ಲೈಂಗಿಕ ಕಿರುಕುಳ ಆರೋಪ
ಸಭೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಸಿ.ವಿ.ರಾಮನ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಸಭೆಯಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಉಂಟು ಮಾಡಿ ಕೊನೆಗೆ ಎಲ್ಲ ಸದಸ್ಯರು ಒಕ್ಕೂರಲಿನಿಂದ ಸಭೆ ಬಹಿಷ್ಕರಿಸುವ ಮಟ್ಟಕ್ಕೂ ಹೋಯಿತು. 

ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಅರವಿಂದ ಚೌವ್ಹಾಣ ಎತ್ತಿದ ಆಕ್ಷೇಪಕ್ಕೆ, ಧನಿ ಗೂಡಿಸಿದ ಸದಸ್ಯ ಸಿದ್ದರಾಮ ಪ್ಯಾಟಿ ಅವರು ರಾಮನ್‌, ಭ್ರಷ್ಟಾಚಾರವಷ್ಟೆಯಲ್ಲ, ಸಿಡಿಪಿಒ ರಾಮನ್‌ ಅವರು ಇಲಾಖೆಯ ಕೆಲ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಕೂಡಲೇ ಅವರನ್ನು ಅಮಾನತು ಮಾಡಿ, ನಿಸ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರು, ರಾಮನ್‌ ಅವರು ಏಕಕಾಲದಲ್ಲಿ ಮೂರು ಹುದ್ದೆಗಳಲ್ಲಿ ಪ್ರಭಾರಿ ಇದ್ದರು. ಹೆಚ್ಚುವರಿ ಅಧಿಕಾರಿಗಳು ಇಲ್ಲದಿದ್ದರಿಂದ ಅವರನ್ನು ವರ್ಗಾವಣೆ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಅಧಿಕಾರಿಗಳು ಬಂದಿದ್ದಾರೆ. ಅವರನ್ನು ಶೀಘ್ರ ವರ್ಗಾವಣೆ ಮಾಡಲಾಗುವುದು ಎಂದರು. ಈ ಮಾತಿಗೆ ಒಪ್ಪದ ಸದಸ್ಯರು, ಕೂಡಲೇ ಅವರನ್ನು ಅಮಾನತು ಮಾಡುವಂತೆ ಒತ್ತಾಯಿಸಿದರು. ಆಗಲ್ಲ.. 2-3 ದಿನಗಳಾಗುತ್ತದೆ ಎಂದು ಸಿಇಒ ಹೇಳಿದಾಗ ಸದಸ್ಯರು ಪಕ್ಷಬೇಧ ಮರೆತು ಸಿಟ್ಟಿನಿಂದು ಹೊರನಡೆದರು.

Advertisement

Udayavani is now on Telegram. Click here to join our channel and stay updated with the latest news.

Next