Advertisement

ಜೈಲುಗಳಲ್ಲಿ ಇನ್ನು ಸಿಬಂದಿಗೂ ಮೊಬೈಲ್‌ ನಿಷೇಧ!

12:09 AM Oct 20, 2021 | Team Udayavani |

ಬೆಂಗಳೂರು:  ಜೈಲುಗಳಲ್ಲಿ ನಡೆಯುವ ಎಲ್ಲ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕಾರಾಗೃಹ ಮತ್ತು ಸುಧಾರಣ ಸೇವೆಗಳ ಇಲಾಖೆ ಮುಂದಾಗಿದೆ.

Advertisement

ಬೆಂಗಳೂರಿನ ಕೇಂದ್ರ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಪ್ರಾಯೋಗಿಕವಾಗಿ ಈ ಪ್ರಕ್ರಿಯೆ ಆರಂಭವಾಗಿದ್ದು, ಜೈಲಿನ ಮುಖ್ಯ ಅಧೀಕ್ಷಕರು, ಅಧೀಕ್ಷಕರಿಗೆ ಮಾತ್ರ ಮೊಬೈಲ್‌ ಬಳಕೆಗೆ ಅವಕಾಶವಿರಲಿದೆ.  ಕಾರಾಗೃಹದ ಮುಂಭಾಗದಲ್ಲೇ “ಮೊಬೈಲ್‌, ಲ್ಯಾಪ್‌ಟಾಪ್‌ ಮತ್ತು ಇತರ ಎಲೆಕ್ಟ್ರಾನಿಕ್‌ ವಸ್ತುಗಳ ಸಹಿತ ನಿಷೇಧಿತ ವಸ್ತುಗಳನ್ನು ಜೈಲಿನ ಒಳಗೆ ಕೊಂಡೊಯ್ಯುವಂತಿಲ್ಲ’ ಎಂಬ ಸೂಚನೆ ಫ‌ಲಕ ಹಾಕಲಾಗಿದೆ. ಇದೇ ಮಾದರಿಯ ಕ್ರಮಗಳನ್ನು ದಾವಣಗೆರೆ, ಮೈಸೂರು, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ ಸಹಿತ ರಾಜ್ಯದ ಎಲ್ಲ ಕಾರಾಗೃಹಗಳಲ್ಲಿಯೂ ಅಳವಡಿಸಲಾಗುತ್ತದೆ ಎಂದು  ಹಿರಿಯ ಅಧಿಕಾರಿಯೊಬ್ಬರು  ತಿಳಿಸಿದ್ದಾರೆ.

ಬುಲೆಟ್‌ಪ್ರೂಫ್ ಗಾಜು
ವಿಚಾರಣಾಧೀನ ಅಥವಾ ಸಜಾ ಕೈದಿಗಳ ಭೇಟಿಗೆ ಬರುವವರು ಕೈದಿಗಳನ್ನು ದೈಹಿಕವಾಗಿ ಮುಟ್ಟಿ ಮಾತಾಡಲು ಅವಕಾಶ ನಿರಾಕರಿಸಲಾಗಿದೆ. ಅದಕ್ಕಾಗಿ ಈ ವಿಭಾಗದಲ್ಲಿ ಬುಲೆಟ್‌ಪ್ರೂಫ್ ಗಾಜು ಅಳವಡಿಸಲಾಗಿದ್ದು, ದೂರವಾಣಿ ಸಂಪರ್ಕ ನೀಡಲಾಗಿದೆ. ಈ ಅಂತರದಲ್ಲಿಯೇ ಕೈದಿಗಳ ಸಂಬಂಧಿಗಳು ಮಾತನಾಡಬೇಕಾಗಿದೆ. ಒಮ್ಮೆಲೆ 10 ಕೈದಿಗಳಿಗೆ ಸಾಧ್ಯವಾಗುವಂತೆ ಇದನ್ನು ಸಿದ್ಧಪಡಿಸಲಾಗಿದೆ ಎಂದು ಜೈಲಿನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಬಾಂಗ್ಲಾ ಹಿಂದುಗಳ ರಕ್ಷಣೆಗೆ ಸಿಎಎ ಬೇಕು: ಕಾಂಗ್ರೆಸ್‌ ನಾಯಕ ಮಿಲಿಂದ್‌ ದೇವ್ರಾ!

ಯಾಕೆ ಈ ಮಾರ್ಪಾಡು?
ನಾನಾ ರೀತಿಯ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ವಾಸ ಅನುಭವಿಸುತ್ತಿರುವ ಸಜಾಕೈದಿಗಳು ಮತ್ತು ವಿಚಾರಣಾಧೀನ ಕೈದಿಗಳು ಜೈಲಿನಲ್ಲಿದ್ದೇ ಗಾಂಜಾ, ಗುಟ್ಕಾ ಸೇವನೆ, ಮೊಬೈಲ್‌ ಬಳಸಿಕೊಂಡು ಹೊರಗೆ ನಡೆಯುವ ಅಪರಾಧ ಪ್ರಕರಣಗಳಲ್ಲಿ ಪರೋಕ್ಷವಾಗಿ ಭಾಗಿಯಾಗುತ್ತಿದ್ದಾರೆ. ಮೊಬೈಲ್‌ ಮೂಲಕ ಜೀವ ಬೆದರಿಕೆ, ಕೊಲೆ, ಕೊಲೆ ಯತ್ನ, ವಂಚನೆ  ಎಸಗುತ್ತಿದ್ದಾರೆ ಎಂಬುದು ಬೆಳಕಿಗೆ ಬಂದಿತ್ತು. ಇತ್ತೀಚೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಸಿಮ್‌ ಕಾರ್ಡ್‌ಗಳು, ಮೊಬೈಲ್‌, ಗಾಂಜಾ ವಶಕ್ಕೆ ಪಡೆದುಕೊಂಡಿದ್ದರು.

Advertisement

ಇದರ ಬೆನ್ನಲ್ಲೇ ಪರಪ್ಪನ ಅಗ್ರಹಾರ ಕಾರಾಗೃಹದ ಮುಖ್ಯ ಅಧೀಕ್ಷಕ ರಂಗನಾಥ್‌ ಈ ಹೊಸ ಆದೇಶ ಹೊರಡಿಸಿದ್ದಾರೆ.

ಜೈಲಿನ ಒಳಗೆ ಪ್ರವೇಶಿಸುವ ಮೊದಲು ಎಲ್ಲರೂ  ಮೊಬೈಲ್‌, ಸಿಮ್‌ ಕಾರ್ಡ್‌ಗಳು, ಚಾರ್ಜರ್‌ಗಳು, ಲ್ಯಾಪ್‌ಟಾಪ್‌, ನಗದು ಮತ್ತಿತರ ನಿಷೇಧಿತ ವಸ್ತುಗಳನ್ನು ಕಡ್ಡಾಯವಾಗಿ ಕೆಎಸ್‌ಐಎಸ್‌ಎಫ್ ಕಚೇರಿಯಲ್ಲಿ ಇಡಬೇಕು. ಖಾಸಗಿ ವಾಹನಗಳಿಗೆ ಒಳಗಡೆ ಪ್ರವೇಶವಿಲ್ಲ. ಜೈಲಿಗೆ ಭೇಟಿ ನೀಡುವವರೂ ಮೊಬೈಲ್‌ಗ‌ಳನ್ನು ಕಚೇರಿಯಲ್ಲಿ ಇಡುವುದು ಕಡ್ಡಾಯ. ಜೈಲಿನ ಸಿಬಂದಿ ಮತ್ತು ಅಧಿಕಾರಿಗಳು ಜೈಲು ಪ್ರವೇಶಿಸಬೇಕಾದರೆ ಮೂರು ಹಂತಗಳಲ್ಲಿ ಕಡ್ಡಾಯವಾಗಿ ತಪಾಸಣೆಗೆ ಒಳಪಡಬೇಕಾಗುತ್ತದೆ.

-ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next