Advertisement

ತುರ್ತು ಸಂದರ್ಭ ರಕ್ತ ಪೂರೈಕೆಗೆ ಮೊಬೈಲ್‌ ಆ್ಯಪ್‌

11:20 PM May 03, 2020 | Sriram |

ಕಡಬ: ದೇಶವೇ ಲಾಕ್‌ಡೌನ್‌ನಲ್ಲಿರುವಾಗ ತುರ್ತು ಸಂದರ್ಭಕ್ಕೆ ಬೇಕಾದ ರಕ್ತದ ಹಾಗೂ ರಕ್ತದಾನಿಗಳ ಕೊರತೆ ಎದುರಾಗಿರುವುದನ್ನು ಮನಗಂಡ ಮಂಗಳೂರಿನ ಯುವಕರ ತಂಡವೊಂದು ತಮ್ಮ ಮನೆಗಳಲ್ಲೇ ಕುಳಿತು ಜಿಲ್ಲೆಯ ಜನತೆಗೆ ಕೊಡುಗೆಯಾಗಿ “ರೆಡ್‌ ಡ್ರಾಪ್‌ ಮಂಗಳೂರು’ ಆ್ಯಪ್‌ ಆವಿಷ್ಕರಿಸಿದ್ದಾರೆ.

Advertisement

ರೋಗಿಗಳಿಗೆ ರಕ್ತ ಪೂರೈಕೆ ಮಾಡುವ ಸಲುವಾಗಿ “ರೆಡ್‌ ಡ್ರಾಪ್‌ ಕ್ಯಾಂಪೈನ್‌’ ಎಂಬ ಹೆಸರಿನಡಿ ಮಂಗಳೂರು ಧರ್ಮ ಪ್ರಾಂತದ ಭಾರತೀಯ ಕೆಥೋಲಿಕ್‌ ಯುವ ಸಂಚಾಲನ (ಐಸಿವೈಎಂ) ಕೇಂದ್ರೀಯ ಸಮಿತಿಯು 2016ರಿಂದ ನಗರದ 5 ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಮಂಗಳೂರು ಧರ್ಮಪ್ರಾಂತದ ಭಾರತೀಯ ಕೆಥೋಲಿಕ್‌ ಯುವ ಸಂಚಾಲನ (ಐಸಿವೈಎಂ) ಇದರ ನಿರ್ದೇಶಕ ವಂ| ರೊನಾಲ್ಡ್‌ ಪ್ರಕಾಶ್‌ ಡಿ’ಸೋಜಾ ಅವರ ಗುರುದೀಕ್ಷೆಯ 20 ವರ್ಷಗಳ ಸವಿನೆನಪಿಗಾಗಿ ಮೇ 1ರಂದು “ರೆಡ್‌ ಡ್ರಾಪ್‌ ಮಂಗಳೂರು’ (Red Drop Mangalore )ಆ್ಯಪ್‌ ಲೋಕಾರ್ಪಣೆಗೊಂಡಿತು.

ಐಸಿವೈಎಂ ನಿಯೋಜಿತ ನಿರ್ದೇಶಕ ವಂ| ಅಶ್ವಿ‌ನ್‌ ಲೋಹಿತ್‌ ಕಾಡೋಜಾ, ಐಸಿವೈಎಂ ಮಂಗಳೂರು ಕೇಂದ್ರೀಯ ಸಮಿತಿ ಅಧ್ಯಕ್ಷ ಲಿಯೊನ್‌ ಲೋಯ್ಡ ಸಲ್ಡಾನ್ಹಾ, ಜಾಕ್ಸನ್‌ ಡಿಕೋಸ್ತಾ, ವಂ| ರೊನಾಲ್ಡ್‌ ಡಿ’ಸೋಜಾ, ಐಸಿವೈಎಂ ಮಂಗಳೂರು ಕೇಂದ್ರೀಯ ಸಮಿ ತಿಯ ಕಾರ್ಯದರ್ಶಿ ವೀಣಾ ವಾಸ್‌ ಉಪಸ್ಥಿತರಿದ್ದರು. ಆ್ಯಪ್‌ ಅಭಿವೃದ್ಧಿಗೊಳಿಸಿದ ಜಾಕ್ಸನ್‌ ಡಿ’ಕೋಸ್ತಾ ಹಾಗೂ ಸಮಿತಿಯ ಸದಸ್ಯರನ್ನು ಅಭಿನಂದಿಸಲಾಯಿತು.

ವಿಶೇಷವಾಗಿ ದ.ಕ. ಜಿಲ್ಲೆಗಾಗಿಯೇ ವಿನ್ಯಾಸಗೊಳಿಸಲಾಗಿರುವ ಈ ಆ್ಯಪ್‌ ಈಗಾಗಲೇ ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಡೌನ್‌ಲೋಡ್‌ಗೆ ಲಭ್ಯವಿದ್ದು, ರಕ್ತದಾನಿಗಳು ಹಾಗೂ ರಕ್ತದ ಆವಶ್ಯಕತೆ ಇರುವವರು ಈ ಆ್ಯಪ್‌ಗೆ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ಡೌನ್‌ಲೋಡ್‌ ಲಿಂಕ್‌: https://play.google.com/store/apps/details?id=com.icym.reddrop

Advertisement
Advertisement

Udayavani is now on Telegram. Click here to join our channel and stay updated with the latest news.

Next