ಚಿಕ್ಕಮಗಳೂರು: ದೇಶದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಮೊಬೈಲ್ ಆ್ಯಪ್ ಮೂಲಕ ಆರ್ಥಿಕ ಗಣತಿ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಕಚೇರಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಗುರುವಾರ ನಡೆದ ಗಣತಿದಾರರ ಕಾರ್ಯಾಗಾರದಲ್ಲಿ ಮೊಬೈಲ್ ಆ್ಯಪ್ ತಂತ್ರಾಂಶ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಭಾರತ ಸರ್ಕಾರ ಈಗಾಗಲೇ 6 ಆರ್ಥಿಕ ಗಣತಿಗಳನ್ನು ಪೂರೈಸಿದೆ. 7ನೇ ಆರ್ಥಿಕ ಗಣತಿಯನ್ನು ವಿಶೇಷವಾಗಿ ಪ್ರಾರಂಭಿಸುವ ಉದ್ದೇಶದಿಂದ ಮೊಬೈಲ್ ಆ್ಯಪ್ ತಂತ್ರಾಂಶದ ಮೂಲಕ ಗಣತಿ ಕೈಗೊಳ್ಳಲು ನಿರ್ಧರಿಸಿದೆ ಎಂದು ಹೇಳಿದರು.
ಈಗಾಗಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗಣತಿಗೆ ಚಾಲನೆ ಸಿಕ್ಕಿದ್ದು, ಕಾರಣಾಂತರಗಳಿಂದ ನಮ್ಮ ಜಿಲ್ಲೆಯಲ್ಲಿ 6 ತಿಂಗಳು ವಿಳಂಬವಾಗಿದೆ. ಸದ್ಯ ಗಣತಿ ಕಾರ್ಯವನ್ನು ಮಾ.15ರ ಒಳಗೆ ಸಂಪೂರ್ಣಗೊಳಿಸಬೇಕಿದೆ. ಇದೊಂದು ಕೇವಲ ಆರ್ಥಿಕ ಸಮೀಕ್ಷೆಯಾಗಿದ್ದು, ಜಿಲ್ಲೆಯ ಎಲ್ಲಾ ಸಂಘಟಿತ ಮತ್ತು ಅಸಂಘಟಿತ ವಲಯದ ವ್ಯಕ್ತಿಗಳ ಆದಾಯ ಮತ್ತು ಉದ್ಯಮ ಪಟ್ಟಿಗಳ ಕುರಿತು ಮಾಹಿತಿ ಕಲೆಹಾಕಬೇಕಿದೆ ಎಂದರು.
ಇದೊಂದು ಮಹತ್ವದ ಗಣತಿ ಕಾರ್ಯವಾಗಿದ್ದು, ಗಣತಿದಾರರು ಮನೆ ಮನೆಗೆ ತೆರಳಿ ದತ್ತಾಂಶಗಳನ್ನು ಸರಿಯಾದ ರೀತಿಯಲ್ಲಿ ಕಲೆಹಾಕಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಸಾಮಾನ್ಯ ಸೇವಾ ಕೇಂದ್ರದಡಿಯಲ್ಲಿ ಗಣತಿದಾರರನ್ನು ನೇಮಿಸಲಾಗಿದ್ದು, ಜಿಲ್ಲೆಯಲ್ಲಿರುವ ಒಟ್ಟು 1117 ಗ್ರಾಮಗಳಲ್ಲಿ ಹಾಗೂ 9 ನಗರ ಪ್ರದೇಶಗಳ ವ್ಯಾಪ್ತಿಯಲ್ಲಿನ ಮನೆ, ಉದ್ಯಮಗಳಲ್ಲಿನ ಆರ್ಥಿಕ ದತ್ತಾಂಶಗಳನ್ನು ಮೊಬೈಲ್ ಆ್ಯಪ್ ಮೂಲಕ ಸಂಗ್ರಹಿಸುವಂತೆ ತಿಳಿಸಿದರು.
ಈ ವೇಳೆ ಮನೆಗಳಿಗೆ ಭೇಟಿ ನೀಡುವ ಗಣತಿದಾರರಿಗೆ ಸಾರ್ವಜನಿಕರು ಅಗತ್ಯ ಮಾಹಿತಿ ನೀಡುವುದರ ಮೂಲಕ ಸಹಕರಿಸುವಂತೆ ಕೋರಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಹನುಮಂತಪ್ಪ, ಜಿಲ್ಲಾ ಸಾಂಖೀಕ ಸಂಗ್ರಹಣಾಧಿಕಾರಿ ಕರೇಗೌಡ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಸಿದ್ದರಾಜು ಮತ್ತು ಪಿಎಸ್‌ಐ ರಮ್ಯಾ ಇತರರು ಉಪಸ್ಥಿತರಿದ್ದರು.