ಬೀದರ: ವಿಜಯ ದಶಮಿ ಹಿನ್ನೆಲೆಯಲ್ಲಿ ಕೇಂದ್ರ ಪುರಾತತ್ವ ಇಲಾಖೆ ಅಧೀನದಲ್ಲಿರುವ ನಗರದ ಓಲ್ಡ್ ಸಿಟಿಯ ಮಹಮದ್ ಗವಾನ್ ಮದರಸಾ ಆವರಣಕ್ಕೆ ಕೆಲ ಕಿಡಿಗೇಡಿಗಳು ಪ್ರವೇಶಿಸಿ ಪೂಜೆ ಸಲ್ಲಿಸಿದ ಘಟನೆ ನಡೆದಿದ್ದು, ಈ ದೃಶ್ಯ ವಿಡಿಯೋ ವೈರಲ್ ದಿಂದಾಗಿ ಸೌಹಾರ್ದತೆ ನೆಲದಲ್ಲಿ ಈಗ ತ್ವೇಷಮಯ ವಾತಾವರಣ ಸೃಷ್ಟಿಯಾಗಿದೆ. ಘಟನೆಗೆ ಸಂಬಂದಿಸಿದಂತೆ ನಾಲ್ಕು ಜನರನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಒಳಕೋಟೆ ಭವಾನಿ ದೇವಿ ಮೂರ್ತಿಯ ಮೆರವಣಿಗೆ ವೇಳೆ ಕೆಲವರು ಓಲ್ಡ್‌ಸಿಟಿ ಗವಾನ್ ಸ್ಮಾರಕದಲ್ಲಿ ಅಕ್ರಮವಾಗಿ ಪ್ರವೇಶಿಸಿ ಪೂಜೆ ಸಲ್ಲಿಸಿದ್ದಾರೆ. ಈ ದೃಶ್ಯವನ್ನು ಸೆರೆ ಹಿಡಿದು ವಿಡಿಯೋ ವೈರಲ್ ಮಾಡಲಾಗಿತ್ತು. ಇದು ಒಂದು ಕೋಮಿನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಂತಾಗಿದೆ ಎಂದು ಆರೋಪಿಸಿ ಉದ್ಯಮಿ ಸೈಯ್ಯದ್ ಮುಬಾಶಿರ್ ಅಲಿ ಎಂಬುವರು 9 ಜನ ಸೇರಿ 60 ಜನ ಅನಾಮಧೇಯರ ವಿರುದ್ಧ ಮಾರ್ಕೆಟ್ ಠಾಣೆಯಲ್ಲಿ ದೂರು ನೀಡಿದ್ದರು. ಅಷ್ಟೇ ಅಲ್ಲ ಧಾರ್ಮಿಕ ಸಾಮರಸ್ಯ ಕದಡಲು ಯತ್ನಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮುಸ್ಲಿಮ್ ಸಂಘಟನೆಗಳು ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದರು.
ಗುರುವಾರ ಮಂಜಾನೆ 1.30ರ ಸುಮಾರಿಗೆ ಕಿಡಿಗೇಡಿಗಳು ಮಹಮೂದ್ ಗವಾನ್ ಮದರಸಾ ಹಾಗೂ ಮಸೀದಿ ಬೀಗ ಒಡೆದು ಕಾನೂನು ಬಾಹಿರವಾಗಿ ಸ್ಮಾರಕ ಪ್ರದೇಶದೊಳಗೆ ಪ್ರವೇಶಿಸಿ ಶಾಂತಿ, ಸೌಹಾರ್ದತೆ ಕದಡುವ ಕೆಲಸ ಮಾಡಿದ್ದಾರೆ. ಗೋಡೆಗಳ ಮೇಲೆ ಅನುಪಯುಕ್ತ ವಸ್ತುಗಳನ್ನು ಎಸೆದು ಹಾನಿ ಮಾಡಲು ಪ್ರಯತ್ನಿಸಿದ್ದಾರಲ್ಲದೇ ದೇಶ ವಿರೊಧಿ ಘೋಷಣೆಗಳನ್ನು ಕೂಗಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ನರೇಶ ಗೌಳಿ, ಪ್ರಕಾಶ, ವಿನು, ಮನ್ನಾ, ಸಾಗರ ಬಂಟಿ, ಜಗದೀಶ ಗೌಳಿ, ಅರುಣ ಗೌಳಿ, ಗೋರಖ ಗೌಳಿ ಸೇರಿ 60 ಜನರು ಭಾಗಿಯಾಗಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಬಿಸಿಸಿಐನಲ್ಲಿ ಮುಗಿಯಿತಾ ಗಂಗೂಲಿ ಅಧಿಕಾರ? ಬಿಜೆಪಿ ನಾಯಕನ ಮನೆಯಲ್ಲಿ ಸಭೆ ನಡೆದಿದ್ಯಾಕೆ?
ಓಲ್ಡ್‌ಸಿಟಿಯಲ್ಲಿ ನಿರಂತರವಾಗಿ ಇಂತಹ ಘಟನೆಗಳು ನಡೆಯುತ್ತಿವೆ. ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಠಾಣೆ ಎದುರು ಪ್ರತಿಭಟನಾನಿರತ ಮುಸ್ಲಿಂ ಸಮುದಾಯದವರು ಆಗ್ರಹಿಸಿದರು. ಶುಕ್ರವಾರ ಮಧ್ಯಾಹ್ನದ ವೇಳೆಗೆ ಆರೋಪಿಗಳನ್ನು ಬಂಧಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ದೂರಿನ ಆಧಾರದ ಮೇಲೆ 9 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಘಟನೆ ಸಂಬಂಧ ಪೊಲೀಸರು 4 ಜನರನ್ನು ವಶಕ್ಕೆ ಪಡೆದಿದ್ದು, ಇನ್ನುಳಿದವರನ್ನು ಬಂಧನಕ್ಕೆ ಜಾಲ ಬೀಸಿದೆ.
ಐತಿಹಾಸಿಕ ಗವಾನ್ ಮದರಸಾದಲ್ಲಿ ಕೆಲ ಕಿಡಿಗೇಡಿಗಳು ಪೂಜೆ ಸಲ್ಲಿಸಿರುವ ಕೃತ್ಯವನ್ನು ಎಂಐಎಂ ಪ್ರಮುಖ ಓವೈಸಿ ಟ್ವಿಟರ್ ಮೂಲಕ ಖಂಡಿಸಿದ್ದಾರೆ. ಪೂಜೆ ಸಲ್ಲಿಸಲು ಹೇಗೆ ಅವಕಾಶ ಮಾಡಿಕೊಟ್ಟಿದೆ ಎಂದು ಜಿಲ್ಲಾ ಪೊಲೀಸರನ್ನು ಪ್ರಶ್ನಿಸಿದ್ದಾರಲ್ಲದೇ ಬಿಜೆಪಿ ಮುಸ್ಲಿಂ ಸಮುದಾಯವನ್ನು ಕೀಳಾಗಿ ಕಾಣುವ ಮತ್ತು ಇಂಥ ಘಟನೆಗಳಿಗೆ ಪ್ರಚೋದಿಸುವ ಕೆಲಸ ಮಾಡುತ್ತಿದೆ ಎಂದು ಹರಿಹಾಯ್ದಿದ್ದಾರೆ.
ಐತಿಹಾಸಿಕ ಸ್ಮಾರಕ ಮತ್ತು ಮಸೀದಿಯಲ್ಲಿ ಪೂಜೆ ಸಲ್ಲಿಕೆ ಘಟನೆ ಇದೀಗ ಓಲ್ಡ್ ಸಿಟಿಯಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬಂದೋಬಸ್ತ್ ಬಿಗಿಗೊಳಿಸಿದ್ದಾರೆ. ಶುಕ್ರವಾರದ ಮಧ್ಯಾಹ್ನದ ಪ್ರಾರ್ಥನೆಗೆ ಪೊಲೀಸರ ಬಂದೋಬಸ್ತ್ ನಲ್ಲಿ ಅವಕಾಶ ಮಾಡಿಕೊಡಲಾಗಿದೆ.