ಶಿಲ್ಲಾಂಗ್: ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಗಡಿ ಔಟ್‌ಪೋಸ್ಟ್ ಮೇಲೆ ಭಾನುವಾರ ರಾತ್ರಿ ಗ್ರಾಮಸ್ಥರು ದಾಳಿ ನಡೆಸಿದ್ದು, ಇಬ್ಬರು ಬಿಎಸ್‌ಎಫ್ ಸಿಬಂದಿಗಳು ಸೇರಿದಂತೆ ಕನಿಷ್ಠ 5 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ರಾಜಧಾನಿಯ ದಕ್ಷಿಣಕ್ಕೆ 100 ಕಿಮೀ ದೂರದಲ್ಲಿರುವ ಡವ್ಕಿ ಪಟ್ಟಣದ ಸಮೀಪವಿರುವ ಉಮ್ಸಿಯೆಮ್ ಗ್ರಾಮದಲ್ಲಿ ರಾತ್ರಿ 10 ಗಂಟೆಯ ಸುಮಾರಿಗೆ ನಡೆದಿದ್ದು, ಜನಸಮೂಹವು ಔಟ್‌ಪೋಸ್ಟ್ ಮೇಲೆ ದಾಳಿ ಮಾಡಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಬಿಎಸ್ಎಫ್ ಮೇಘಾಲಯ ಫ್ರಾಂಟಿಯರ್ ಇನ್ಸ್‌ಪೆಕ್ಟರ್ ಜನರಲ್ ಪ್ರದೀಪ್ ಕುಮಾರ್ ಪಿಟಿಐ ನೊಂದಿಗೆ ಮಾತನಾಡಿ, “ಕಳೆದ ಕೆಲವು ದಿನಗಳಲ್ಲಿ ನಾವು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡಲು ಉದ್ದೇಶಿಸಿರುವ ಅಪಾರ ಸಂಖ್ಯೆಯ ವಸ್ತುಗಳನ್ನು ವಶಪಡಿಸಿಕೊಂಡಿದ್ದೇವೆ ಮತ್ತು ಕಳ್ಳಸಾಗಣೆದಾರರನ್ನು ಗುರುತಿಸಿದ್ದೇವೆ. ಈ ಕಾರಣದಿಂದಾಗಿ, ಅವರು ಹೊರಠಾಣೆ ಮೇಲೆ ದಾಳಿ ಮಾಡಲು ಗುಂಪನ್ನು ಪ್ರೇರೇಪಿಸಿದ್ದಾರೆ. ಬಿಎಸ್ಎಫ್ ಗಾಳಿಯಲ್ಲಿ ಗುಂಡು ಹಾರಿಸುವಂತೆ ಮಾಡಿದ್ದಾರೆ. ಜನಸಮೂಹದ ಕಲ್ಲು ತೂರಾಟದಿಂದ ಕನಿಷ್ಠ 2 ಬಿಎಸ್ಎಫ್ ಸಿಬಂದಿ ಗಾಯಗೊಂಡಿದ್ದಾರೆ. ಗ್ರಾಮಸ್ಥರಲ್ಲಿ ಕೆಲವರು ಬಲವಂತವಾಗಿ ಔಟ್‌ಪೋಸ್ಟ್ ಪ್ರವೇಶಿಸಲು ಪ್ರಯತ್ನಿಸಿದ್ದು, ಅವರನ್ನು ಹಿಂದಕ್ಕೆ ತಳ್ಳಲಾಯಿತು. ಘಟನೆಯಲ್ಲಿ ಕನಿಷ್ಠ ಮೂವರು ಗ್ರಾಮಸ್ಥರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಮೂವರು ಪ್ರಯಾಣಿಕರಿದ್ದ ವಾಹನವು ಔಟ್‌ಪೋಸ್ಟ್ ಬಳಿ ಕೆಟ್ಟು ನಿಂತಾಗ ಈ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಪಿಟಿಐಗೆ ತಿಳಿಸಿದ್ದಾರೆ. ಬಿಎಸ್‌ಎಫ್ ಮೂವರನ್ನು ಕಳ್ಳಸಾಗಣೆದಾರರು ಎಂದು ಆರೋಪಿಸಿ ವಶಕ್ಕೆ ಪಡೆದಾಗ, ಸುದ್ದಿ ಹರಡಿ ಹತ್ತಿರದ ಗ್ರಾಮಸ್ಥರು ಅವರ ರಕ್ಷಣೆಗೆ ಬಂದರು ”ಎಂದು ಹೇಳಲಾಗಿದೆ.
ಸ್ಥಳೀಯ ಪೊಲೀಸರು ಮತ್ತು ಹಿರಿಯ ಬಿಎಸ್ಎಫ್ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸಲು ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಅಧಿಕಾರಿ ಹೇಳಿದರು. ತನಿಖೆ ಆರಂಭಿಸಲಾಗಿದೆ ಎಂದು ಕುಮಾರ್ ಮಾಹಿತಿ ನೀಡಿದರು.