ಹೊಸದಿಲ್ಲಿ: ವಾಂಟೆಡ್ ಡ್ರಗ್ ಸ್ಮಗ್ಲರ್ ಒಬ್ಬನನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಗುಂಪೊಂದು ಕಲ್ಲು ತೂರಾಟ ನಡೆಸಿದ ಘಟನೆ ಹೊಸದಿಲ್ಲಿಯ ಇಂದ್ರಪುರಿ ಪ್ರದೇಶದಲ್ಲಿ ಶನಿವಾರ ನಡೆದಿದೆ. ಘಟನೆಯಲ್ಲಿ ಇಬ್ಬರಿಗೆ ಗುಂಡು ತಾಗಿದ್ದು ಮತ್ತು ನಾಲ್ವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ದೆಹಲಿ ಪೊಲೀಸರ ಪ್ರಕಾರ, ನಾರ್ಕೋಟಿಕ್ಸ್ ತಂಡವು ಇಂದ್ರಪುರಿಗೆ ವಾಂಟೆಡ್ ಡ್ರಗ್ ಸ್ಮಗ್ಲರ್ ಧರಂವೀರ್ ಅಲಿಯಾಸ್ ಪಲ್ಲಾನನ್ನು ಬಂಧಿಸಲು ತೆರಳಿತ್ತು. ಈ ವೇಳೆ ಪಲ್ಲಾ ಮನೆಯಲ್ಲಿ ಇರಲಿಲ್ಲ.ತಂಡವು ಪಲ್ಲಾ ಮನೆಯಿಂದ ಹೊರಬಂದ ತಕ್ಷಣ, ಧರ್ಮವೀರ್ ಅಲಿಯಾಸ್ ಪಲ್ಲಾ ಸುಮಾರು 50-60 ಜನರೊಂದಿಗೆ ದೊಣ್ಣೆ ಮತ್ತು ಕಲ್ಲುಗಳನ್ನು ಹೊತ್ತು ಬಂದರು. ಗುಂಪು ಏಕಾಏಕಿ ಪೊಲೀಸ್ ತಂಡದ ಮೇಲೆ ದಾಳಿ ಮಾಡಿ ಕಲ್ಲು ತೂರಾಟ ನಡೆಸಿತು. ಅಲ್ಲದೆ ಗುಂಪು ಪೊಲೀಸರ ಮೇಲೆ ಗುಂಡು ಹಾರಿಸಿತು. ಪ್ರತೀಕಾರವಾಗಿ, ಇಬ್ಬರ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದು, ಅವರು ಗಾಯಗೊಂಡಿದ್ದಾರೆ.
ಘಟನೆಯ ಸಮಯದಲ್ಲಿ, ಇನ್ಸ್‌ಪೆಕ್ಟರ್ ಮತ್ತು ಎಎಸ್‌ಐ ಶ್ರೇಣಿಯ ಅಧಿಕಾರಿಗಳು ಸೇರಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ. ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡು, ಧರಂವೀರ್ ಅಲಿಯಾಸ್ ಪಲ್ಲಾ ಪರಾರಿಯಾಗಿದ್ದಾನೆ” ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ:ಹತ ಉಗ್ರನ ಗುರುತು ಪತ್ತೆಗೆ ಡಿಎನ್‌ಎ ಮಾದರಿ ಪರೀಕ್ಷೆ
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಗಾಯಗೊಂಡವರನ್ನು ಅಮಿತ್ ಮತ್ತು ಸೊಹೈಬ್ ಎಂದು ಗುರುತಿಸಲಾಗಿದೆ. ವಿಚಾರಣೆಯ ವೇಳೆ ಅಮಿತ್ ಡ್ರಗ್ ಡೀಲರ್ ಧರಂವೀರ್ ಅಲಿಯಾಸ್ ಪಲ್ಲಾನ ಸಂಬಂಧಿ ಎಂದು ತಿಳಿದುಬಂದಿದೆ.