Advertisement

ಜೂನ್‌ ವೇಳೆಗೆ ಕಿಣಯೇ ಡ್ಯಾಂ ಲೋಕಾರ್ಪಣೆ

03:52 PM Feb 14, 2021 | Team Udayavani |

ಬೆಳಗಾವಿ: ತಾಲೂಕಿನಲ್ಲಿ ನಿರ್ಮಾಣವಾಗುತ್ತಿರುವ ಕಿಣಯೇ ಡ್ಯಾಂ ಜೂನ್‌ ವೇಳೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಂದ ಲೋಕಾರ್ಪಣೆ ಮಾಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.

Advertisement

ಸಮೀಪದ ಕಿಣಯೇ ಬಳಿ ನಿರ್ಮಾಣವಾಗುತ್ತಿರುವ ಅಣೆಕಟ್ಟು ಕಾಮಗಾರಿಯನ್ನು ಶನಿವಾರ ವೀಕ್ಷಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಣೆಕಟ್ಟು ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಬಹುತೇಕ ಕೆಲಸ ಮುಗಿಯುವ ಹಂತಕ್ಕೆ ಬಂದಿದೆ. ಲಾಕ್‌ಡೌನ್‌ದಿಂದಾಗಿ 15 ತಿಂಗಳ ಕಾಲ ಕಾಮಗಾರಿ ವಿಳಂಬವಾಗಿ ಬಾಕಿ ಉಳಿದುಕೊಂಡಿತ್ತು ಎಂದರು.

ಕಿಣಯೇ ಅಣೆಕಟ್ಟು 5.41 ಚದರ ಕಿ.ಮೀ ಜಲಾನಯನ ಕ್ಷೇತ್ರ ಹೊಂದಿದೆ. ಇದು ಮಳೆ ನೀರನ್ನೇ ಅವಲಂಬಿಸಿದ್ದು, ಕಿಣಯೇ, ಬಹದ್ದೂರವಾಡಿ, ಸಂತಿಬಸ್ತವಾಡ, ವಾಘವಡೆ ಹಾಗೂ ರಣಕುಂಡೆ ಗ್ರಾಮಗಳ ಸುಮಾರು 1200 ಹೆಕ್ಟೇರ್‌ ಪ್ರದೇಶಗಳು ನೀರಾವರಿಗೆ ಒಳಪಡಲಿವೆ. ಡ್ಯಾಂ ಪ್ರದೇಶದಲ್ಲಿ ವೃಂದಾವನ ನಿರ್ಮಿಸಿ ಪ್ರವಾಸಿ ತಾಣ ಮಾಡಲಾಗುವುದು.  ಗೋವಾ ಹಾಗೂ ಬೆಳಗಾವಿ ಸುತ್ತಲಿನಿಂದ ಬರುವ ಪ್ರವಾಸಿಗರಿಗಾಗಿ ಅವಕಾಶ ಮಾಡಿ ಕೊಡಲಾಗುವುದು ಎಂದು ಹೇಳಿದರು.

ಜಿಲ್ಲೆಯ ಅಲ್ಲಲ್ಲಿ ಇಂಥ ಸಣ್ಣ ಡ್ಯಾಂಗಳ ನಿರ್ಮಾಣಕ್ಕಾಗಿ ಜಾಗ ಗುರುತಿಸಲಾಗುತ್ತಿದೆ. ಜಾಗ ಗುರುತಿಸುವ ಕಾರ್ಯ ನಡೆದಿದೆ. ಚಿಕ್ಕ ಚಿಕ್ಕ ಡ್ಯಾಂಗಳ ನಿರ್ಮಾಣದಿಂದಾಗಿ ಅಂತರ್ಜಲ ಮಟ್ಟ ಹೆಚ್ಚಾಗಿ ರೈತರಿಗೆ ಅನುಕೂಲವಾಗುತ್ತದೆ. ಜತೆಗೆ ನೆರೆಯ ಜಿಲ್ಲೆಗಳಿಗೂ ನೀರು ಪೂರೈಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಹಲಗಾ-ಮಚ್ಛೆ ಬೈಪಾಸ್‌ ರಸ್ತೆ ನಿರ್ಮಾಣದಲ್ಲಿ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಈ ಬಗ್ಗೆ ಜಿಲ್ಲಾ ಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರೈತರಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು. ಕಮಿಷನ್‌ ಪಡೆಯುತ್ತಿರುವ ಯಾರೇ ಇದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

Advertisement

ಕಣಬರ್ಗಿಯ ಯೋಧನ ಕುಟುಂಬಸ್ಥರ ಮೇಲೆ ಬಿಜೆಪಿ ಮುಖಂಡರೊಬ್ಬರು ಹಲ್ಲೆ ನಡೆಸಿರುವ ಬಗ್ಗೆ ಪ್ರತಿಕ್ರಿಯಿಸಿದ ಜಾರಕಿಹೊಳಿ, ನನ್ನ ಹೆಸರು ಹೇಳಿ ಯಾರಾದರೂ ಇಂಥ  ಕೃತ್ಯ ನಡೆಸುತ್ತಿದ್ದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಾನೂನು ಪ್ರಕಾರ ದೂರು ಕೊಟ್ಟರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿಧಾನ ಪರಿಷತ್‌ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಸೇರಿದಂತೆ ನೀರಾವರಿ ಇಲಾಖೆ ಅಧಿ ಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next