Advertisement

ಔಷಧ ಉದ್ಯಮದ ಮೇಲೆ ಎಂಎನ್‌ಸಿಗಳ ಕಣ್ಣು: ಕುಮಾರಸ್ವಾಮಿ

10:56 AM Jun 25, 2018 | Team Udayavani |

ದಾವಣಗೆರೆ: ದೇಶದ ಔಷಧ ಉದ್ಯಮದ ಮೇಲೆ ಬಹುರಾಷ್ಟ್ರೀಯ ಕಂಪನಿಗಳ ಕರಿಗಣ್ಣು ಬಿದ್ದಿದ್ದು, ಇದು ಸಣ್ಣ ವ್ಯಾಪಾರಿಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಸ್ವದೇಶಿ ಜಾಗರಣ ಮಂಚ್‌ನ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಂ. ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

Advertisement

ಭಾನುವಾರ ನಗರದ ಸದ್ಯೋಜಾತ ಶಿವಾನಿಕೇತನ ಹಿರೇಮಠದಲ್ಲಿ ತಾಲೂಕು ಔಷಧ ವ್ಯಾಪಾರಿಗಳ ಸಂಘದ ಉದ್ಘಾಟನೆ, ನಿರಂತರ ಕಲಿಕೆ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವಿದೇಶಿ ಔಷಧ ಕಂಪನಿಗಳ ವ್ಯವಸ್ಥೆಯು ಕೇಂದ್ರೀಕೃತವಾಗಿದ್ದರೆ, ಭಾರತೀಯ ಔಷಧ ಉದ್ಯಮವು ವಿಕೇಂದ್ರೀಕೃತ ವ್ಯವಸ್ಥೆಯಾಗಿದೆ.
ಇಲ್ಲಿ ಸಾವಿರಾರು ಕಂಪನಿಗಳು ಕಾರ್ಯ ನಿರ್ವಹಿಸುತ್ತಿದ್ದು, ಲಕ್ಷಾಂತರ ಕುಟುಂಬಗಳಿಗೆ ಜೀವನೋಪಾಯಕ್ಕೆ ಮಾರ್ಗವಾಗಿದೆ. 

ಬಹುರಾಷ್ಟ್ರೀಯ ಕಂಪನಿಗಳು ಒಂದು ವೇಳೆ ಔಷಧ ಉದ್ಯಮದ ಮೇಲೆ ಹಿಡಿತ ಸಾಧಿಸಿದರೆ ದುಷ್ಪರಿಣಾಮ ಬೀರುವುದು ಖಚಿತ ಎಂದರು. ನಮ್ಮಲ್ಲಿ ಈಗ ಕೈಗೆಟಕುವ ದರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಔಷಧ ಉತ್ಪಾದನೆಯಾಗುತ್ತಿವೆ. 

ಔಷಧ ಉತ್ಪಾದನೆಯಲ್ಲಿ ಭಾರತ ಜಗತ್ತಿನಲ್ಲಿ 3ನೇ ಸ್ಥಾನದಲ್ಲಿದೆ. 2017-18ನೇ ಸಾಲಿನಲ್ಲಿ ಭಾರತದಿಂದ 16.4 ಶತಕೋಟಿ ಡಾಲರ್‌ ಮೌಲ್ಯದ ಔಷಧ ಉತ್ಪನ್ನಗಳು ವಿದೇಶಕ್ಕೆ ರಫ್ತಾಗಿವೆ. ಇದರಲ್ಲಿ ಅಮೇರಿಕಾಕ್ಕೆ ಶೇ.40,
ಯೂರೋಪ್‌ ರಾಷ್ಟ್ರಗಳಿಗೆ ಶೇ.20, ಆಫ್ರಿಕಾ ದೇಶಗಳಿಗೆ ಶೇ.19 ಹಾಗೂ ಏಷ್ಯನ್‌ ರಾಷ್ಟ್ರಗಳಿಗೆ ಶೇ. 21ರಷ್ಟು ಉತ್ಪನ್ನ ಸೇರಿವೆ. ಪ್ರಪಂಚದ ಒಟ್ಟು ಔಷಧ ಉತ್ಪನ್ನದಲ್ಲಿ ಭಾರತದ ಪಾಲು ಶೇ. 20ರಷ್ಟಿದೆ ಎಂದು ಅವರು ತಿಳಿಸಿದರು.

ಔಷಧ ಉದ್ಯಮದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಕೊಟ್ಟಿದ್ದರಿಂದ ಸಾಕಷ್ಟು ಕಂಪನಿಗಳು ಲಗ್ಗೆ ಹಾಕಿದ್ದವು. ಆದರೆ, ಆ ಕಂಪನಿಗಳು ಹೊಸ ಉತ್ಪಾದಕ ಕೈಗಾರಿಕೆಗಳನ್ನೇನೂ ಹುಟ್ಟು ಹಾಕಲಿಲ್ಲ. ಬದಲಿಗೆ ದೇಶದಲ್ಲಿ ಹಾಲಿ ಇರುವ ಪ್ರಮುಖ ಕಂಪನಿಗಳನ್ನೇ ಖರೀದಿಸಿ, ಔಷಧ ಉದ್ಯಮದ ಮೇಲೆ ಏಕಸ್ವಾಮ್ಯ ಸಾಧಿಸಲು ಯತ್ನಿಸಿದವು. ಸದ್ಯ ಅಂತಹ ಪ್ರಯತ್ನಗಳಿಗೆ ಕಡಿವಾಣ ಬಿದ್ದಿದ್ದರೂ, ದೇಶೀಯ ಔಷಧ ಉದ್ಯಮ ಹೊಸ ಹೊಸ ಸವಾಲುಗಳಿಗೆ ತೆರೆದುಕೊಂಡಿದೆ ಎಂದು ಅವರು ಹೇಳಿದರು.

Advertisement

ಆಧುನಿಕ ಯುಗದಲ್ಲಿ ಆನ್‌ಲೈನ್‌ ಟ್ರೇಡಿಂಗ್‌ ಸಣ್ಣ ವ್ಯಾಪಾರಿಗಳಿಗೆ ಕಂಟಕಪ್ರಾಯವಾಗಿದೆ. ನಮ್ಮ ಇಡೀ ದೇಶದ ಚಿಲ್ಲರೆ ವಹಿವಾಟು ಅಮೇರಿಕಾದ ವಾಲ್‌ಮಾರ್ಟ್‌ ಕಂಪನಿಯ ವಾರ್ಷಿಕ ವಹಿವಾಟಿಗಿಂತಲೂ ಕಡಿಮೆ ಇದೆ. ಸ್ವಾತಂತ್ರ್ಯ ಪೂರ್ವದ 1940ರ ಡ್ರಗ್ಸ್‌ ಅಂಡ್‌ ಫಾರ್ಮಸಿಟಿಕಲ್‌ ಆಕ್ಟ್ ಕಾಯ್ದೆಯಲ್ಲಿ ಆನ್‌ಲೈನ್‌ ಟ್ರೇಡಿಂಗ್‌ಗೆ ಕಡಿವಾಣ ಹಾಕುವ ಅವಕಾಶವಿಲ್ಲ. ಆದರೂ, 2005ರ ಪೇಟೆಂಟ್‌ ಕಾಯ್ದೆಯ ಸೆಕ್ಷನ್‌ 3ಡಿ ಹಾಗೂ ಸೆಕ್ಷನ್‌ 84 ಔಷಧ ಉತ್ಪಾದಕರು, ವಿತರಕರು ಹಾಗೂ ರೋಗಿಗಳನ್ನು ಕಾಪಾಡಲು ಸಮರ್ಥವಾಗಿದ್ದು, ಡಬ್ಲುಟಿಒ ಒಪ್ಪಂದದಂತೆ ಇದನ್ನು
ತೆಗೆದುಹಾಕಲು ಬಹುರಾಷ್ಟ್ರೀಯ ಕಂಪನಿಗಳ ಒತ್ತಡ ನಿರಂತರವಾಗಿದೆ ಎಂದು ಅವರು ತಿಳಿಸಿದರು.

ಔಷಧ ವ್ಯಾಪಾರಿಗಳ ತಾಲೂಕು ಸಂಘದ ಅಧ್ಯಕ್ಷ ಬಿ.ಒ. ಮಲ್ಲಿಕಾರ್ಜುನ್‌ ಅಧ್ಯಕ್ಷತೆ ವಹಿಸಿದ್ದರು. ದಾವಣಗೆರೆ ವಲಯ ಉಪ ಔಷಧ ನಿಯಂತ್ರಕ ಬಿ.ಪಿ.ಅರುಣಕುಮಾರ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ| ಜಿ.ಡಿ. ರಾಘವನ್‌, ಕೆ.ಇ.ಪ್ರಕಾಶ, ಡಿ. ಬಾಲಚಂದ್ರ ರೆಡ್ಡಿ, ಸಿ. ಕುಮಾರ, ಆರ್‌. ಪರಶುರಾಮ, ಎಂ.ಎಸ್‌.ಗೀತಾ ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next