Advertisement

ಜಿಲ್ಲೆಯಲ್ಲಿ ಎಂಎಂಎಲ್‌ನಿಂದ ಎಂ.ಸ್ಯಾಂಡ್‌ ಘಟಕ

09:06 PM Dec 17, 2019 | Lakshmi GovindaRaj |

ಹಾಸನ: ಜಿಲ್ಲೆಯಲ್ಲಿ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳಿಗೆ ಅನುಕೂಲವಾಗುವಂತೆ ಮೈಸೂರು ಮಿನರಲ್ಸ್‌ ಲಿ.ನಿಂದ ಎಂ ಸ್ಯಾಂಡ್‌ ತಯಾರಿಕಾ ಘಟಕ ಸ್ಥಾಪನೆ ಮಾಡಲಾಗುವುದು ಎಂದು ಮೈಸೂರು ಮಿನರಲ್ಸ್‌ ವ್ಯವಸ್ಥಾಪಕ ನಿರ್ದೇಶಕ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‌ರಾಜ್‌ ಸಿಂಗ್‌ ಅವರು ನಿರ್ದೇಶನ ನೀಡಿದರು.

Advertisement

ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಿರ್ಮಾಣ ಕಾರ್ಯಗಳಿಗೆ ಮರಳಿನ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಬೇಕು. ಅದಕ್ಕಾಗಿ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸೂಕ್ತವಾದ ಸ್ಥಳ ಗುರುತಿಸಿ ಪ್ರಸ್ತಾವನೆ ಸಲ್ಲಿಸಬೇಕೆಂದು. ಸರ್ಕಾರ ರೂಪಿಸಿರುವ ಯೋಜನೆಗಳು ಕ್ಷೇತ್ರ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಅದಕ್ಕಾಗಿ ಎಲ್ಲಾ ಇಲಾಖಾ ಅಧಿಕಾರಿಗಳು ಶ್ರಮಿಸಬೇಕು ಎಂದರು.

ಶಾಲೆ, ಅಂಗನವಾಡಿ ಕಟ್ಟಡಗಳ ದುರಸ್ತಿ ಮಾಡಿ: ಜಿಲ್ಲೆಯಲ್ಲಿ ಬಾಕಿಯಿರುವ 130 ಶಾಲೆ ಹಾಗೂ ಅಂಗನವಾಡಿಗಳ ದುರಸ್ತಿಕೆಲಸಗಳನ್ನು ತುರ್ತಾಗಿ ಪೂರ್ಣಗೊಳಿಸಬೇಕು. ಸಣ್ಣ ಸಮಸ್ಯೆಗಳ ಸಲುವಾಗಿ ಕಾಮಗಾರಿ ಆರಂಭಿಸದಿದ್ದರೆ ಜಿಲ್ಲೆಯು ಅಭಿವೃದ್ಧಿಯಲ್ಲಿ ಹಿಂದುಳಿಯುತ್ತದೆ. ಅದಕ್ಕೆ ಅವಕಾಶ ನೀಡಬರದು ಎಂದು ಪಿಆರ್‌ಇಡಿ. ಅಧಿಕಾರಿಗಳಿಗೆ ಸೂಚನೆ ನೀಡಿದರು.

ರೈತರ ಕುಟುಂಬಗಳಿಗೆ ಪರಿಹಾರ ನೀಡಿ: ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಕರಣಗಳು ಬಾಕಿ ಉಳಿಸದೇ ನಿಗದಿತ ಸಮಯದಲ್ಲಿ ಸಭೆ ನಡೆಸಿ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಿ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ವಿತರಿಸಬೇಕು ಎಂದು ಸೂಚಿಸಿದ ಅವರು, ಬೇಡಿಕೆಗೆ ತಕ್ಕಂತೆ ರಾಗಿ, ಭತ್ತದ ಖರೀದಿ ಕೇಂದ್ರಗಳನ್ನು ತೆರೆದು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಬೇಕು ಎಂದು ಕೃಷಿ ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅತಿವೃಷ್ಟಿ, ಬರ ಪರಿಹಾರ, ಕುಡಿಯುವ ನೀರು, ಆರೋಗ್ಯ ಇಲಾಖೆ, ವಸತಿ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಸೇರಿದಂತೆ ಜಿಲ್ಲೆಯಲ್ಲಿಯಾವುದೇ ಸಮಸ್ಯೆಗಳಿದ್ದಲ್ಲಿ ಅವುಗಳ ಬಗ್ಗೆ ತಮ್ಮ ಗಮನಕ್ಕೆ ತರುವಂತೆ ನವೀನ್‌ ರಾಜ್‌ ಸಿಂಗ್‌ ಅವರು ನಿರ್ದೇಶನ ನೀಡಿದರು. ಸಭೆಯಲ್ಲಿ ಆಸ್ಪತ್ರೆಗಳಲ್ಲಿನ ವೈದ್ಯರ ಕೊರತೆ, ರೇಡಿಯಾಲಜಿಸ್ಟ್‌, ಫಾರ್ಮಸಿಸ್ಟ್‌ಗಳ ಕೊರತೆ ಬಗ್ಗೆ ಚರ್ಚಿಸಲಾಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ.ಪರಮೇಶ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂಬಾಬು, ಉಪವಿಭಾಗಾಧಿಕಾರಿ ಡಾ. ನವೀನ್‌ ಭಟ್‌ ಮತ್ತು ಗಿರೀಶ್‌ ನಂದನ್‌, ತಹಶಿಲ್ದಾರರು ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Advertisement

ಅಂಗನವಾಡಿಯಲ್ಲಿ ಗುಣಮಟ್ಟದ ಆಹಾರ ನೀಡಿ: ಅಂಗನವಾಡಿಗಳಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಆಹಾರ ನೀಡಬೇಕು. ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕಾಲಕಾಲಕ್ಕೆ ಸರಿಯಾಗಿ ವೇತನ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‌ರಾಜ್‌ ಸಿಂಗ್‌ ಹೇಳಿದರು.ಜಿಲ್ಲಾದ್ಯಂತ ಸ್ಥಾಪಿಸಲಾಗಿರುವ ಗ್ರಾಮೀಣ ಶುದ್ಧ ಕುಡಿಯುವ ನೀರಿನ ಘಟಕಗಳು ನಿರಂತರವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು. ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಅವುಗಳ ವಾರ್ಷಿಕ ನಿರ್ವಹಣೆ ಮಾಡಬೇಕು. ಜೊತೆಗೆ ಜಿಲ್ಲೆಯಲ್ಲಿರುವ ಎಲ್ಲಾ ಹಳ್ಳಿಗಳಿಗೆ ಪೈಪ್‌ಲೈನ್‌ ಮೂಲಕವೇ ಕುಡಿಯುವ ನೀರಿನ ಸರಬರಾಜು ಆಗುವಂತೆ ನೋಡಿಕೊಳ್ಳಲು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪರ್ಯಾಯ ಕಟ್ಟಡ ವ್ಯವಸ್ಥೆ ಮಾಡಿ: ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಮಾತನಾಡಿ, ಶಿಕ್ಷಕರು ಬಲವಂತಕ್ಕೆ ಮಣಿಯದೇ ಮಕ್ಕಳು ಅಪಾಯವಿರುವ ಕಟ್ಟಡಗಳಲ್ಲಿ ಕಲಿಯುವುದನ್ನು ತಪ್ಪಿಸಿ, ಪರ್ಯಾಯ ಸ್ಥಳದ ವ್ಯವಸ್ಥೆ ಮಾಡಬೇಕು. ಕಟ್ಟಡಗಳ ದುರಸ್ತಿ ಕಾರ್ಯಕ್ಕೆ ಕ್ರಿಯಾಯೋಜನೆ ರೂಪಿಸಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಅತಿವೃಷ್ಟಿ ನಿರ್ವಹಣಾ ಕ್ರಮಗಳನ್ನು ಸಮರ್ಪಕವಾಗಿ ನಿಭಾಯಿಸಲಾಗಿದೆ. ಮನೆ, ಬೆಳೆ ಪರಿಹಾರ ವಿತರಣೆಗೂ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ ಅವರು, ಅತಿವೃಷ್ಟಿಯಿಂದ ಹಾನಿಗೀಡಾಗಿರುವ ರಸ್ತೆಗಳನ್ನು ಹಾಗೂ ಕೆರೆಕಟ್ಟೆಗಳನ್ನು ಶೀಘ್ರವಾಗಿ ದುರಸ್ತಿಪಡಿಸಿ, ಬಾಕಿಯಿರುವ ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಇಲಾಖೆ ಮುಖ್ಯಸ್ಥರೊಂದಿಗೆ ತಾವು ಚರ್ಚೆ ನಡೆಸುವುದಾಗಿ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next