ನವದೆಹಲಿ: ವಿಚಾರವಾದಿ ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕರ್ನಾಟಕ, ಮಹಾರಾಷ್ಟ್ರ,ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ಸಿಬಿಐಗೆ ನೋಟಿಸ್ ಜಾರಿ ಮಾಡಿದೆ.
ವಿಶೇಷ ತನಿಖಾ ದಳ (ಎಸ್‌ಐಟಿ)ದಿಂದ ಪ್ರಕರಣದ ಬಗ್ಗೆ ತನಿಖೆ ನಡೆಸಲು ಆದೇಶ ನೀಡಬೇಕೆಂದು ಕೋರಿ ಕಲಬುರ್ಗಿ ಅವರ ಪತ್ನಿ ಉಮಾ ದೇವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ.ದೀಪಕ್ ಮಿಶ್ರಾ ನೇತೃತ್ವದ ಪೀಠ ಈ ಕ್ರಮ ಕೈಗೊಂಡಿದೆ. ಆರು ವಾರಗಳಲ್ಲಿ ಈ ಬಗ್ಗೆ ಉತ್ತರ ನೀಡುವಂತೆ ನ್ಯಾಯಪೀಠ ಆದೇಶಿಸಿದೆ.
ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರಗಳು ತಮ್ಮ ಪತಿಯ ಹತ್ಯೆ ಬಗ್ಗೆ ನಡೆಸಿದ ತನಿಖೆಯಲ್ಲಿ ತೃಪ್ತಿದಾಯಕವಾಗಿರುವ ಪ್ರಗತಿ ಕಂಡು ಬಂದಿಲ್ಲ.
ಮಹಾರಾಷ್ಟ್ರದಲ್ಲಿ ನಡೆದ ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್, ಗೋವಿಂದ ಪಾನ್ಸರೆ ಹತ್ಯೆ ಪ್ರಕರಣಕ್ಕೂ
ಸಾಮ್ಯತೆ ಇದೆ. ಧಾಬೋಲ್ಕರ್ ಮತ್ತು ಪಾನ್ಸರೆ ಅವರನ್ನು ಹತ್ಯೆ ಮಾಡಿದ ಪ್ರಕರಣದ ತನಿಖೆ ನಿರೀಕ್ಷಿತ ಪ್ರಗತಿ ಕಂಡಿಲ್ಲ. ಹೀಗಾಗಿ ವಿಶೇಷ ತನಿಖಾ ತಂಡದ ಮೂಲಕ ತಮ್ಮ ಪತಿ ಸಾವಿನ ಬಗ್ಗೆ ತನಿಖೆಯಾಗಬೇಕು ಎಂದು ಉಮಾದೇವಿ ಮನವಿ ಮಾಡಿಕೊಂಡಿದ್ದರು.
2016ರಲ್ಲಿ ಕರ್ನಾಟಕದ ಗೃಹ ಸಚಿವರಾಗಿದ್ದ ಡಾ.ಜಿ.ಪರಮೇಶ್ವರ್ ನೀಡಿದ್ದ ಹೇಳಿಕೆಯನ್ನು ಅರ್ಜಿಯಲ್ಲಿ ಉಲ್ಲೇಖೀಸಿರುವ ಉಮಾ ದೇವಿ,”ಪಾನ್ಸರೆ, ದಾಭೋಲ್ಕರ್ ಮತ್ತು ಕಲಬುರ್ಗಿ ಹತ್ಯೆ ನಡೆದ ಸ್ಥಳದಿಂದ ವಶಪಡಿಸಿಕೊಳ್ಳಲಾಗಿರುವ ಗುಂಡುಗಳನ್ನು ವಿಧಿ ವಿಜ್ಞಾನ ಪ್ರಯೋಗಕ್ಕೆ ಒಳಪಡಿಸಿದಾಗ ಒಂದೇ ಮಾದರಿಯದ್ದು’ ಎಂಬುದನ್ನು ತಿಳಿಸಿದ್ದಾರೆ. “ಪಾನ್ಸರೆ ಅವರನ್ನು ಹತ್ಯೆ ಮಾಡಿದ ಆಯುಧವನ್ನೇ ಕಲಬುರ್ಗಿ ಪ್ರಕರಣದಲ್ಲಿಯೂ ಬಳಕೆ ಮಾಡಲಾಗಿದೆ. ಹೀಗಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ಪೊಲೀಸರು ಸಮನ್ವಯತೆ ಯಿಂದ ತನಿಖೆ ಮಾಡಬೇಕಾಗಿದೆ. ಅದಕ್ಕೆ ಪೂರಕವಾಗಿ ಸಿಬಿಐ ಮತ್ತು ಎನ್‌ಐಎ ನಡುವೆ ಸಹಕಾರದಿಂದ ತನಿಖೆ ನಡೆಸಬೇಕು’ ಎಂದು ಅರ್ಜಿಯಲ್ಲಿ ಕೋರಿದ್ದಾರೆ.