ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿಯಾಗಿ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ (JMM) ಕಾರ್ಯಕಾರಿ ಅಧ್ಯಕ್ಷ ಹೇಮಂತ್ ಸೊರೇನ್ ಅವರು ಗುರುವಾರ ಸಂಜೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರು ಪ್ರಮಾಣ ವಚನ ಬೋಧಿಸಿದರು.
ಕೋಟ್ಯಂತರ ಮೌಲ್ಯದ ಭೂ ಹಗರಣ ಆರೋಪ ಹೊತ್ತಿದ್ದ ಕಾರಣ ಜನವರಿಯಲ್ಲಿ ಜಾರಿ ನಿರ್ದೇಶನಾಲಯ ಬಂಧಿಸುವ ಕೆಲವೇ ನಿಮಿಷಗಳ ಮೊದಲು ಅವರು ರಾಜೀನಾಮೆ ನೀಡಿದ್ದರು. ಆಪಾದಿತ ಹಗರಣದಲ್ಲಿ “ನೇರ ಪಾಲ್ಗೊಳ್ಳುವಿಕೆ” ಇಲ್ಲ ಎಂದು ಹೈಕೋರ್ಟ್ ಜಾಮೀನು ನೀಡಿದ ಬಳಿಕ ಐದು ತಿಂಗಳ ರಾಜಕೀಯ ವನವಾಸ ಮುಗಿಸಿ ಮತ್ತೆ ಸಿಎಂ ಹುದ್ದೆ ಅಲಂಕರಿಸಿದ್ದಾರೆ.
ಸಮಾರಂಭದಲ್ಲಿ ಹೇಮಂತ್ ಅವರ ತಂದೆ, ಜಾರ್ಖಂಡ್ ಮುಕ್ತಿ ಮೋರ್ಚಾದ ಹಿರಿಯ ನಾಯಕ ಎರಡು ಬಾರಿಯ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್, ನಿಕಟಪೂರ್ವ ಸಿಎಂ ಚಂಪೈ ಸೊರೇನ್ ಸೇರಿ ಪ್ರಮುಖರು ಹಾಜರಿದ್ದರು.
ಹಿರಿಯ ಜೆಎಂಎಂ ನಾಯಕ ಚಂಪೈ ಸೊರೇನ್ ಅವರು ಹೇಮಂತ್ ಸೊರೆನ್ ಬದಲಿಗೆ ಸಿಎಂ ಆಗಿ ನೇಮಕವಾಗಿದ್ದರು. ಹುದ್ದೆಯಿಂದ ಕೆಳಗಿಳಿದು ಮತ್ತೆ ಹೇಮಂತ್ ಅವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.
“ನಾಯಕತ್ವ ಬದಲಾದಾಗ ನನಗೆ ಜವಾಬ್ದಾರಿ ನೀಡಲಾಯಿತು. ಘಟನೆಗಳ ಬಗ್ಗೆ ನಿಮಗೆ ತಿಳಿದಿದೆ. ಹೇಮಂತ್ ಸೊರೇನ್ ಅವರು ಹಿಂತಿರುಗಿದ ನಂತರ ನಾವು ಅವರನ್ನು ನಮ್ಮ ನಾಯಕನನ್ನಾಗಿ ಆಯ್ಕೆ ಮಾಡಿದ್ದೇವೆ, ನಾನು ರಾಜೀನಾಮೆ ನೀಡಿದ್ದೇನೆ. ನಾನು ಮೈತ್ರಿಕೂಟದ ನಿರ್ಧಾರವನ್ನು ಅನುಸರಿಸುತ್ತಿದ್ದೇನೆ’ ಎಂದು ಚಂಪೈ ಸೊರೇನ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
JMM ಕಾಂಗ್ರೆಸ್, ಆರ್ ಜೆಡಿ ಮತ್ತು ಎಡ ಪಕ್ಷಗಳ ಮೈತ್ರಿಕೂಟದ ಸರಕಾರವನ್ನು ನಡೆಸುತ್ತಿದೆ.