ಮೈಸೂರು : ಬಳ್ಳಾರಿಯ ಸಂಡೂರಿನಲ್ಲಿ ಜಿಂದಾಲ್ ಕಂಪನಿಗೆ ಸರ್ಕಾರಿ ಭೂಮಿ ಪರಭಾರೆ ಮಾಡಿರುವ ಸರ್ಕಾರದ ನಿರ್ಧಾರಕ್ಕೆ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಮೈಸೂರಿನಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇಡೀ ರಾಜ್ಯ ಕೋವಿಡ್ ಸೋಂಕಿನ ಆರ್ಭಟದಿಂದ ತತ್ತರಿಸಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ತರಾತುರಿಯಲ್ಲಿ ಜಿಂದಾಲ್ ಕಂಪನಿಗೆ ಭೂಮಿ ನೀಡಿರುವುದು ಸರಿಯಾದ ಕ್ರಮವಲ್ಲ ಎಂದರು.
ಈ ಹಿಂದೆ ಇದೇ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಬಹುತೇಕ ಬಿಜೆಪಿ ನಾಯಕರು ಜಿಂದಾಲ್ ಕಂಪನಿಗೆ ಭೂಮಿ ನೀಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹಗಲು ರಾತ್ರಿ ಧರಣಿ ನಡೆಸಿದ್ದರು. ಆದರೀಗ ತರಾತುರಿಯಲ್ಲಿ ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ಮಾಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಯಜಮಾನನೇ ಆಡಳಿತದಲ್ಲಿ ಹಿಡಿತ ಕಳೆದುಕೊಂಡಿದ್ದಾರೆ,: ಸಿಎಂ ವಿರುದ್ದ ವಿಶ್ವನಾಥ್ ಟೀಕೆ
ಇಡೀ ಕರ್ನಾಟಕ ಒತ್ತಿ ಉರಿಯುತ್ತಿರುವ ಸಂದರ್ಭದಲ್ಲಿ ಯಾರು ಗಮನಿಸುವುದಿಲ್ಲ ಎಂದುಕೊಂಡು ಕದ್ದು ಮುಚ್ಚಿ ಜಿಂದಾಲ್ ಕಂಪನಿಗೆ ಸರ್ಕಾರಿ ಭೂಮಿ ಮಾರಾಟ ಮಾಡಲಾಗಿದೆ ಎಂದು ವಿಶ್ವನಾಥ್ ಟೀಕಿಸಿದರು.
ಜಿಂದಾಲ್ ಕಂಪನಿಯಿಂದ ಸರ್ಕಾರಕ್ಕೆ 2 ಸಾವಿರ ಕೋಟಿ ಬಾಕಿ ಬರಬೇಕಿದೆ. ಹಾಗಾಗಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಿಂದಾಲ್ ಗೆ ಭೂಮಿ ನೀಡುವ ವಿಚಾರವನ್ನು ಚರ್ಚಿಸಬೇಕು. ಜಿಂದಾಲ್ ಕಂಪನಿ ಅರ್ಜಿಯನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಬೇಕು. ಕಳೆದ ಸಂಪುಟ ಸಭೆಯಲ್ಲಿ ಜಿಂದಾಲ್ ಪರ ತೆಗೆದುಕೊಂಡಿರುವ ತೀರ್ಮಾನವನ್ನು ಮುಂದಿನ ಸಭೆಯಲ್ಲಿ ರದ್ದುಗೊಳಿಸಬೇಕು ಎಂದು ಅವರು ಆಗ್ರಹಿಸಿದರು.