ಪಿರಿಯಾಪಟ್ಟಣ: ನೂರಾರು ವರಷಗಳಿಂದ ಪಟ್ಟಣದ ಹೃದಯ ಬಾಗದಲ್ಲಿ ನೆಲೆಸಿರುವ ಹಂದಿಜೋಗಿಗಳ ಕಾಲೋನಿಗೆ ಮೂಲಭೂತ ಸೌಲಭ್ಯಗಳನ್ನು ನೀಡದೆ ನಿರ್ಲಕ್ಷ್ಯ ಮಾಡಿರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಯೊಂದಿಗೆ ಮಾತನಾಡುವುದಾಗಿ ವಿಧಾನ ಪರಿಷತ್ ಸದಸ್ಯ ಎ.ಹೆಚ್.ವಿಶ್ವನಾಥ್ ತಿಳಿಸಿದರು.
ಪಟ್ಟಣದ ಹಂದಿಜೋಗಿಗಳ ಕಾಲೋನಿಗೆ ಭೇಟಿ ನೀಡಿ ಅಲ್ಲಿನ ಜನರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು.
ಸರ್ಕಾರ ಪರಿಶಿಷ್ಟ ಜಾತಿ ಮತ್ತು ವರ್ಗ ಸೇರಿದಂತೆ ಅಲೆಮಾರಿ ಅರೆ ಅಲೆಮಾರಿ ಎಂಬ ಅತೀ ಸೂಕ್ಷ್ಮ ಸಮುದಾಯಗಳ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂ. ಅನುದಾನ ಮೀಸಲಿಟ್ಟಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂಬಂಧಪಟ್ಟವರಿಗೆ ಅವು ತಲುಪುತ್ತಿಲ್ಲ, ಹಾಗಾಗಿ ಈ ಸಮುದಾಯಗಳು ನಿರ್ಗತಿಕರಾಗಿ ಪ್ರಾಣಿಗಳಿಗಿಂತ ಹೀನಾಯ ಸ್ಥಿತಿಯಲ್ಲಿ ಜೀವಿಸಬೇಕಾಗಿದೆ. ಇದು ನಿಜಕ್ಕೂ ಕೂಡ ನಾಗರಿಕ ಸಮಾಜ ತಲೆತಗ್ಗಿಸುವ ಸಂಗತಿ. ಶಿಕ್ಷಣದಿಂದ ವಂಚಿತವಾಗಿರುವ ಹಂದಿಜೋಗಿಗಳ ಸಮುದಾಯ ಹಂದಿಸಾಕಣೆ ಮತ್ತು ಛತ್ರಗಳಲ್ಲಿ ಹೆಂಜಲು ಬಾಚಿ ಜೀವನ ಸಾಗಿಸುತ್ತಿವೆ. ಇಂಥ ಸೂಕ್ಷ್ಮ ಸಮುದಾಯಕ್ಕೆ ಅರಿವಿನ ಕೊರತೆ ಇದ್ದು, ಇವರನ್ನು ನಾಗರಿಕ ಸಮಾಜದೆಡೆಗೆ ಕೊಂಡೊಯ್ಯಬೇಕಾದ್ದು ಅಧಿಕಾರಿಗಳ ಜವಾಬ್ದಾರಿ ಆದರೆ ಅಧಿಕಾರಿಗಳು ಇವರಲ್ಲಿ ಜಾಗೃತಿ ಮೂಡಿಸದೆ ಅಕ್ರಮ ದಾಖಲೆಗಳನ್ನು ಸೃಷ್ಠಿಸಿ ಖಾಸಗಿ ವ್ಯಕ್ತಿಗಳು, ಭೂಗಳ್ಳರು ಮತ್ತು ರಾಜಕೀಯ ಪುಡಾರಿಗಳ ಒತ್ತಡಕ್ಕೆ ಮಣಿದು ಹಂದಿಜೋಗಿಗಳನ್ನು ಸ್ಥಳಾಂತರ ಮಾಡಿಸುವ ಹುನ್ನಾರ ಮಾಡುತ್ತಿರುವುದು ಕೇಳಿ ಬಂದಿದ್ದು, ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಯಾವ ವ್ಯಕ್ತಿ ಒಂದು ಜಾಗದಲ್ಲಿ 12 ವರ್ಷಗಳ ಕಾಲ ನೆಲೆಸಿರುತ್ತಾನೋ ಅವನಿಗೆ ಈ ಜಾಗದ ಮೇಲೆ ಸಂಪೂರ್ಣ ಅಧಿಕಾರವಿರುತ್ತದೆ ಎಂದರು.
ಸ್ಲಂ ಬೋರ್ಡ್ ಕೂಡ ಇಂಥ ಅಸಹಾಯಕರಿಗೆ ನೆರವಾಗಲು ಹಾಗೂ ಅನುದಾನ ಮೀಸಲಿಟ್ಟಿದೆ ಆದ್ದರಿಂದ ಇಲ್ಲಿನ ನಿವಾಸಿಗಳು ಯಾರ ಒತ್ತಡಕ್ಕೂ ಮಣಿಯುವುದುಬೇಡ, ಈ ವಿಷಯವನ್ನು ಪೌರಾಡಳಿತ ಇಲಾಖೆಯ ಜೊತೆ ಚರ್ಚಿಸಿ, ಕೂಡಲೇ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲು ಏರ್ಪಾಡು ಮಾಡುತ್ತೇನೆ. ಇಲ್ಲಿನ ತಹಶೀಲ್ದಾರ್ ಹಾಗೂ ಪುರಸಭಾ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಕೂಡಲೇ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ ಯಾರೂ ಜಾಗ ಬಿಟ್ಟು ಕದಲಬೇಡಿ ಎಂದರು.
ಹಂದಿಜೋಗಿ ಸಮಾಜದ ಹೋರಾಟಗಾರ್ತಿ ನಾಗಮಣಿ ಮಾತನಾಡಿ ಅನೇಕ ದಶಕಗಳಿಂದ ಈ ಸ್ಥಳದಲ್ಲಿ ನಮ್ಮ ಹಿರಿಯರು ವಾಸವಾಗಿದ್ದರೂ ಅವರಿಗೂ ಇಲ್ಲಿನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಯಾವ ಸೌಲಭ್ಯಗಳನ್ನು ಕಲ್ಪಿಸಲು ಮುಂದೆ ಬರಲಿಲ್ಲ, ಸರ್ಕಾರದಲ್ಲಿ ನಮಗೆ ಅನುದಾನ ಮೀಸಲಿಟ್ಟಿದ್ದರೂ ಅದು ಬಾಯಿ ಮಾತಿಗೆ ಮಾತ್ರ ಸೀಮಿತವಾಗಿದೆ ಕಾರ್ಯರೂಪಕ್ಕೆ ಇನ್ನೂ ಬಂದಿಲ್ಲ, ಎಲ್ಲಾ ನಾಗರಿಕರಂತೆ ನಾವು ಸಮನಾವಾಗಿ ಸ್ವಾವಲಂಬಿಗಳಾಗಿ ಬದುಕಲು ಅವಕಾಶ ಕಲ್ಪಿಸದೆ ಇಲ್ಲಿನ ಅಧಿಕಾರಿಗಳು ಖಾಸಗಿ ವ್ಯಕ್ತಿಗಳ ಜೊತೆ ಸೇರಿ ನಮ್ಮನ್ನು ಜಾಗ ಖಾಲಿ ಮಾಡಿಸಲು ಹುನ್ನಾರ ಮಾಡುತ್ತಿದ್ದಾರೆ ಜಿಲ್ಲಾಧಿಕಾರಿಗಳು ನಮಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.
ಹಂದಿಜೋಗಿ ಸಮಾಜದ ಮುಖಂಡ ಯೋಗೇಶ್ ಮಾತನಾಡಿ ಮನುಷ್ಯರು ಮತ್ತು ಹಂದಿಗಳು ನಡೆಸುತ್ತಿರುವ ಬದುಕಿಗೆ ವ್ಯತ್ಯಾಸವೇ ಇಲ್ಲದಂತಾಗಿದೆ ಹಂದಿ ಮಲಗುವ ಜಾಗದಲ್ಲಿ ನಾವು ಮಲಗುವಂತಾಗಿದೆ. ಕೆರೆ ಅಂಗಳದಲ್ಲಿ ನೀರು ಬಂದಾಗ ಗೋಳಾಟ ಒಂದೆಡೆಯಾದರೆ, ಗುಡಿಸಲುಗಳಲ್ಲಿ ಅನೇಕ ವಿಷ ಜಂತುಗಳು ಕಚ್ಚಿ ಸಾವನ್ನಪ್ಪಿರುವ, ಬೆಂಕಿಗೆ ಆಹುತಿಯಾಗಿರುವ ಘಟನೆಗಳು ಇದ್ದರೂ ಸಹ ಯಾರೊಬ್ಬರೂ ಇತ್ತ ಗಮನ ಹರಿಸುತ್ತಿಲ್ಲ. ಈ ನೆಲದಲ್ಲಿ ನೆಲೆಸಲು ಬಿಡದೆ ನಮಗೆ ಕಿರುಕುಳ ನೀಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ದಸಂಸ ಮುಖಂಡ ಹುಣಸೂರು ಕುಮಾರ್, ಸಂಗೊಳ್ಳಿ ರಾಯಣ್ಣ ಯುವ ಗರ್ಜಗೆ ಸಂಘಟನೆಯ ರಾಜ್ಯ ಉಪಾಧ್ಯಕ್ಷ ನೆರಲೆಕುಪ್ಪೆ ನವೀನ್, ಹಂದಿಜೋಗಿ ಸಮಾಜದ ಮುಖಂಡರಾದ ರಮೇಶ್, ವೆಂಕಟೇಶ್, ಯೋಗೇಶ್, ಶೇಖರ್, ವೆಂಕಟಸ್ವಾಮಿ, ಅಪ್ಪಣ್ಣ, ಶೇಖರ್, ರಾಜು, ರವಿ, ಚೈತ್ರ, ಲಕ್ಷ್ಮಿ, ಸಿದ್ದಮ್ಮ, ಶಾಂತಮ್ಮ, ವೆಂಕಟಮ್ಮ, ಮಂಜಿ, ತ್ರಿವೇಣಿ, ಎಲ್ಲಪ್ಪ, ಸ್ವಾಮಿ ಸೇರಿದಂತೆ ಮತ್ತಿತರರು ಹಾಜರಿದ್ದರು.