Advertisement

ಪರಿಷತ್‌ ಫೈಟ್‌: ದಳದಲ್ಲಿ ಭಿನ್ನಮತ

04:33 PM Nov 28, 2021 | Team Udayavani |

ಮಂಡ್ಯ: ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್‌ ಚುನಾವಣೆ ಕಣ ಜಿಲ್ಲೆಯಲ್ಲಿ ರಂಗೇರಿದೆ. ಈಗಾಗಲೇ ಮೂರು ಪಕ್ಷಗಳ ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಜಿಲ್ಲೆ ತಿರುಗುತ್ತಿದ್ದಾರೆ. ಇಂಥ ಸಂದರ್ಭದಲ್ಲೇ ಜೆಡಿಎಸ್‌ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ.

Advertisement

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು 710 ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಗಿಂತ ಜೆಡಿಎಸ್‌ ಬೆಂಬಲಿತ ಸದಸ್ಯರೇ ಹೆಚ್ಚು ಇದ್ದಾರೆ. ಆದರೆ ಭಿನ್ನಮತ ಹೆಚ್ಚಾಗಿರುವುದು ಪಕ್ಷದ ಹಿನ್ನಡೆಗೆ ಕಾರಣವಾಗಬಹುದು ಎಂಬ ಚರ್ಚೆಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ಜೆಡಿಎಸ್‌ ಭದ್ರಕೋಟೆ ಯಾಗಿದೆ. ಏಳು ತಾಲೂಕುಗಳಲ್ಲಿ ಜೆಡಿಎಸ್‌ ಬೆಂಬಲಿತ ಹೆಚ್ಚು ಗ್ರಾಪಂ ಸದಸ್ಯರು, ಪುರಸಭೆ ಸದಸ್ಯರನ್ನೊಳಗೊಂಡಿದ್ದಾರೆ. ಆದರೆ ಪಕ್ಷದಲ್ಲಿನ ಕೆಲವು ಭಿನ್ನಾಭಿಪ್ರಾಯಗಳು ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ.

ಭಿನ್ನಮತ ಸ್ಫೋಟ: ಶ್ರೀರಂಗಪಟ್ಟಣ ವಿಧಾನ ಸಭಾ ಕ್ಷೇತ್ರದಲ್ಲೂ ಜೆಡಿಎಸ್‌ ಬೆಂಬಲಿತ ಸದಸ್ಯರಿದ್ದಾರೆ. ಜೆಡಿಎಸ್‌ ಕಾರ್ಯಾಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್‌ ಹಾಗೂ ಜೆಡಿಎಸ್‌ ಜಿಲ್ಲಾಧ್ಯಕ್ಷ ಡಿ.ರಮೇಶ್‌ ನಡುವಿನ ಭಿನ್ನಾ ಭಿಪ್ರಾಯ ತಾರಕಕ್ಕೇರಿದೆ. ಶುಕ್ರವಾರ ನಡೆದ ಕಾರ್ಯಕರ್ತರು, ಹಿತೈಷಿಗಳ ಸಭೆಯಲ್ಲಿ ಕೊತ್ತತ್ತಿ ಭಾಗದ 8 ಗ್ರಾಪಂ ವ್ಯಾಪ್ತಿಯ ಸದ ಸ್ಯರು ಭಾಗವಹಿಸಿದ್ದು, ತಗ್ಗಹಳ್ಳಿ ವೆಂಕಟೇಶ್‌ ಶಕ್ತಿ ಪ್ರದರ್ಶನ ತೋರಿಸಿದಂತಾಗಿದೆ.

ನಾಯಕತ್ವದ ಕೊರತೆ?: ಜೆಡಿಎಸ್‌ನಲ್ಲಿ ನಾಯಕತ್ವದ ಕೊರತೆಯೂ ಕಾಡುತ್ತಿದೆಯಾ? ಎಂಬ ಪ್ರಶ್ನೆಗಳು ಎದ್ದಿವೆ. ಪಕ್ಷದ ಶಾಸಕರು ತಮ್ಮ ಕ್ಷೇತ್ರದ ಉಸ್ತುವಾರಿ ನೋಡಿಕೊಳ್ಳುತ್ತಿ ದ್ದಾರೆ. ಆದರೆ ಒಗ್ಗಟ್ಟಿನ ಮಂತ್ರ ಕಾಣುತ್ತಿಲ್ಲ. ಕಳೆದ 2015ರ ಚುನಾವಣೆಯಲ್ಲಿ ಕಂಡು ಬಂದ ಸಾಮೂಹಿಕ ನಾಯಕತ್ವ ಇಲ್ಲದಂತಾಗಿದೆ. ಜೆಡಿಎಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದರೂ ಶಮನ ಮಾಡುವ ಯತ್ನಗಳು ನಡೆಯುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ತ್ರಿಮೂರ್ತಿಗಳ ಒಗ್ಗಟ್ಟು: ಪಕ್ಷದ ಅಭ್ಯರ್ಥಿ ಅಪ್ಪಾಜಿಗೌಡ ಪರವಾಗಿ ಜೆಡಿಎಸ್‌ ಶಾಸಕರು ತಮ್ಮ ಕ್ಷೇತ್ರದಲ್ಲಿ ಸಭೆ, ಸಮಾರಂಭ, ಕಾರ್ಯ ಕರ್ತರ ಸಭೆ ನಡೆಸುತ್ತಿದ್ದರೂ ಗೌಣವಾದಂತಾ ಗಿದೆ. ನಾಗಮಂಗಲ ಕ್ಷೇತ್ರದಲ್ಲಿ ಶಾಸಕ ಕೆ. ಸುರೇಶ್‌ಗೌಡ, ಮಾಜಿ ಸಂಸದ ಎಲ್‌.ಆರ್‌. ಶಿವರಾಮೇಗೌಡ ನೇತೃತ್ವದಲ್ಲಿ ಸಭೆಗಳು ನಡೆಯುತ್ತಿವೆ. ಅಭ್ಯರ್ಥಿ ಎನ್‌.ಅಪ್ಪಾಜಿಗೌಡ ಸೇರಿದಂತೆ ತ್ರಿಮೂರ್ತಿಗಳು ತಾಲೂಕಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಆದರೆ ಅದು ನಾಗಮಂಗಲಕ್ಕೆ ಸೀಮಿತವಾಗಿದ್ದು, ಜಿಲ್ಲಾ ಮಟ್ಟದಲ್ಲಿ ಕಂಡು ಬರುತ್ತಿಲ್ಲ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

Advertisement

ದಳ ಮತಗಳ ಮೇಲೆ ಕೈ, ಕಮಲ ಕಣ್ಣು : ಜೆಡಿಎಸ್‌ ಬೆಂಬಲಿತ ಸದಸ್ಯರನ್ನು ಸೆಳೆಯಲು ಕಾಂಗ್ರೆಸ್‌ ಹಾಗೂ ಬಿಜೆಪಿ ಹವಣಿಸುತ್ತಿವೆ. ಅಲ್ಲದೆ, ಮಂಡ್ಯ ಹಾಗೂ ಶ್ರೀರಂಗಪಟ್ಟಣ ವ್ಯಾಪ್ತಿಯ ಮುಖಂಡರಲ್ಲಿ ಅಸಮಾಧಾನ ಹೆಚ್ಚಾಗಿರುವುದು ಎರಡೂ ಪಕ್ಷಗಳಿಗೆ ಲಾಭವಾಗುವ ಲೆಕ್ಕಾಚಾರ ನಡೆಯುತ್ತಿವೆ. ಈ ನಡುವೆ ಬಿಜೆಪಿಯೂ ಪೈಪೋಟಿ ನಡೆಸುತ್ತಿದ್ದು, ಜೆಡಿಎಸ್‌ನ ಭಿನ್ನಮತದ ಲಾಭ ಪಡೆಯಲು ಮುಂದಾಗಿದೆ. ಇದು ಎಷ್ಟರ ಮಟ್ಟಿಗೆ ಸಾಧ್ಯವಾಗಲಿದೆ ಎಂಬುದು ಕಾದು ನೋಡಬೇಕು.

ಮೂಡದ ಒಗ್ಗಟ್ಟು  : 2019ರ ಲೋಕಸಭೆ ಚುನಾವಣೆಯಲ್ಲಿ ನಿಖೀಲ್‌ಕುಮಾರಸ್ವಾಮಿ ಪರ ಒಗ್ಗಟ್ಟು ಪ್ರದರ್ಶಿಸಿದ್ದ ದಳಪತಿಗಳು ವಿಧಾನ ಪರಿಷತ್‌ ಚುನಾವಣೆಯಲ್ಲಿ ಆ ಒಗ್ಗಟ್ಟು ಕಂಡು ಬರುತ್ತಿಲ್ಲ. ಅಭ್ಯರ್ಥಿ ಎನ್‌.ಅಪ್ಪಾಜಿಗೌಡ ನಾಗಮಂಗಲ, ಕೆ.ಆರ್‌.ಪೇಟೆಯಲ್ಲಿ ಸಭೆ ನಡೆಸಿದ್ದಾರೆ. ಆದರೆ ಅಲ್ಲಿ ನಾಗಮಂಗಲದ ಶಾಸಕ ಸುರೇಶ್‌ಗೌಡ ಬಿಟ್ಟರೆ ಬೇರೆ ಕ್ಷೇತ್ರದ ಶಾಸಕರು ಕಾಣಿಸುತ್ತಿಲ್ಲ. ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರು, ಮುಖಂಡರು ಅಭ್ಯರ್ಥಿಗಳ ಪರ ಇಡೀ ಜಿಲ್ಲೆ ಸುತ್ತುತ್ತಿದ್ದಾರೆ. ಪ್ರತೀ ಸಭೆ, ಪ್ರಚಾರ ಸಭೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಆದರೆ ಜೆಡಿಎಸ್‌ನಲ್ಲಿ ಆ ವಾತಾವರಣ ಕಂಡು ಬರುತ್ತಿಲ್ಲ.

-ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next