Advertisement

ಪದವೀಧರ-ಶಿಕ್ಷಕರ ಕ್ಷೇತ್ರ: ವಿಧಾನ ಪರಿಷತ್‌ ಚುನಾವಣೆಗೆ ನಾಳೆ ಮತದಾನ

10:32 PM Jun 11, 2022 | Team Udayavani |

ಬೆಂಗಳೂರು: ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಂದ ವಿಧಾನಪರಿಷತ್ತಿನ ನಾಲ್ಕು ಸ್ಥಾನಳಿಗೆ ಸೋಮವಾರ (ಜೂ.13) ಮತದಾನ ನಡೆಯಲಿದ್ದು, ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದ ಅಭ್ಯರ್ಥಿಗಳು ಸೇರಿ ನಾಲ್ಕೂ ಕ್ಷೇತ್ರಗಳಲ್ಲಿ 49 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.

Advertisement

ವಾಯುವ್ಯ ಪದವೀಧರ ಕ್ಷೇತ್ರ, ವಾಯುವ್ಯ ಶಿಕ್ಷಕರ ಕ್ಷೇತ್ರ, ಪಶ್ಚಿಮ ಶಿಕ್ಷಕರ ಕ್ಷೇತ್ರ ಮತ್ತು ದಕ್ಷಿಣ ಪದವೀಧರ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಈ ನಾಲ್ಕು ಕ್ಷೇತ್ರಗಳಲ್ಲಿ ಬೆಳಿಗ್ಗೆ 8ರಿಂದ ಸಂಜೆ 5ರ ತನಕ ಮತದಾನ ನಡೆಯಲಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಒಟ್ಟು 2,84,992 ಮತದಾರರು ಇದ್ದು, ಮತದಾನಕ್ಕೆ 607 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಮತದಾನಕ್ಕೆ ಚುನಾವಣಾ ಆಯೋಗ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಚುನಾವಣಾ ಕರ್ತವ್ಯಕ್ಕೆ ಸಿಬ್ಬಂದಿ ನಿಯೋಜಿಸಲಾಗಿದ್ದು, ಕಾನೂನು ಸುವ್ಯವಸ್ಥೆ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಮಾಹಿತಿ ನೀಡಿದೆ.

ಮತದಾನ ಅವಧಿ ವಿಸ್ತರಣೆ:
ಈ ಮತದಾನಕ್ಕೆ ಬೆಳಿಗ್ಗೆ 8ರಿಂದ ಸಂಜೆ 4 ಗಂಟೆ ಅವಧಿ ನಿಗದಿಪಡಿಸಲಾಗಿತ್ತು. ಆದರೆ, ಕೆಲ ರಾಜಕೀಯ ಪಕ್ಷಗಳ ಮನವಿಯ ಹಿನ್ನೆಲೆಯಲ್ಲಿ ಮತದಾನದ ಅವಧಿಯನ್ನು 1 ತಾಸು ವಿಸ್ತರಿಸಲಾಗಿದ್ದು, ಬೆಳಿಗ್ಗೆ 8ರಿಂದ ಸಂಜೆ 5ರ ತನಕ ಮತದಾನ ನಡೆಯಲಿದೆ. ಮತದಾರರ ಗುರುತಿನ ಚೀಟಿ ಇಲ್ಲದವರು ಚುನಾವಣಾ ಆಯೋಗ ನಿಗದಿಪಡಿಸಿದ ಪರ್ಯಾಯ ದಾಖಲೆಗಳನ್ನು ಹಾಜರುಪಡಿಸಿ ಮತದಾನ ಮಾಡಬಹುದು. ಮತ ಎಣಿಕೆ ಜೂ.15ರಂದು ನಡೆಯಲಿದೆ.

ವಿಶೇಷ ರಜೆ ಘೋಷಣೆ:
ಚುನಾವಣೆ ನಡೆಯುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳು, ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು, ರಾಷ್ಟ್ರೀಕೃತ ಬ್ಯಾಂಕುಗಳು, ಸಹಕಾರಿ ಸಂಘಗಳು, ಕಾರ್ಖಾನೆಗಳ ಖಾಯಂ ಹಾಗೂ ದಿನಗೂಲಿ ಆಧಾರದಲ್ಲಿ ಕೆಲಸ ಮಾಡುವ ಪದವೀಧರರು, ಶಿಕ್ಷಕರಿಗೆ ಮತದಾನದಲ್ಲಿ ಪಾಲ್ಗೊಳ್ಳಲು ಜೂ.13ರಂದು ವಿಶೇಷ ಸಾಂದರ್ಭಿಕ ರಜೆ ಘೋಷಿಸಲಾಗಿದೆ.

Advertisement

ಕ್ಷೇತ್ರಗಳ ವ್ಯಾಪ್ತಿ:
ಕರ್ನಾಟಕ ವಾಯುವ್ಯ ಪದವೀಧರ ಕ್ಷೇತ್ರ ಮತ್ತು ವಾಯುವ್ಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿ ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳು ಬರಲಿದ್ದು, ಪಶ್ಚಿಮ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿ ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಬರಲಿವೆ.

ದಕ್ಷಿಣ ಪದವೀಧರ ಕ್ಷೇತ್ರದ ವ್ಯಾಪ್ತಿಯಲ್ಲಿ ಮೈಸೂರು, ಚಾಮರಾಜಗರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳು ಬರಲಿವೆ.

Advertisement

Udayavani is now on Telegram. Click here to join our channel and stay updated with the latest news.

Next