Advertisement

ಎಂಎಲ್‌ಸಿ ಚುನಾವಣೆ: ವಿವಿಧೆಡೆ ಮತಯಾಚನೆ

04:35 PM May 27, 2018 | Team Udayavani |

ಕಲಬುರಗಿ: ತಾನು ವೈದ್ಯಕೀಯ ಪದವೀಧರನಾಗಿದ್ದು, ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದಿದ್ದಲ್ಲದೇ ಮೊದಲಿನಿಂದಲೂ ಧಾರ್ಮಿಕ, ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ರಂಗಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜನರ ಸೇವೆ ಮಾಡುತ್ತ ಬಂದಿರುವುದರಿಂದ ಪದವೀಧರ ಮತವಾರರು ವಿಶ್ವಾಸವಿಟ್ಟು ಆಶೀರ್ವದಿಸಿದರೆ ಸ್ಪಂದನೆ ನಿಶ್ಚಿತ ಎಂದು ಈಶಾನ್ಯ ಪದವೀಧರ ಮತಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಡಾ| ಚಂದ್ರಶೇಖರ ಪಾಟೀಲ ಹುಮನಾಬಾದ ಹೇಳಿದರು.

Advertisement

ಶನಿವಾರ ವಿವಿಧ ಶಿಕ್ಷಣ ಸಂಸ್ಥೆಗಳ ಪದವೀಧರರ ಹಾಗೂ ನೌಕರರ ಜತೆಗೆ ವಿವಿಧ ವಾಣಿಜ್ಯ ಮಳಿಗೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪದವೀಧರ ಮತದಾರರ ಬಳಿ ಮತಯಾಚಿಸಿದ ಅವರು, ಜನರು ನಮ್ಮ ಕುಟುಂಬದ ಮೇಲೆ ವಿಶ್ವಾಸವಿಟ್ಟು ಆಶೀರ್ವದಿಸುತ್ತ ಬಂದಿದ್ದಾರೆ. ಇದೀಗ ಈ ಭಾಗದ ಪದವೀಧರರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡಲು ಪರಿಷತ್‌ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ತಿಳಿಸಿದರು.

ಸಂವಿಧಾನದ 371 (ಜೆ)ನೇ ಕಲಂ ಅಡಿ ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದು ಕಾಂಗ್ರೆಸ್‌ನ ದೊಡ್ಡ ಕೊಡುಗೆಯಾಗಿದೆ. ಇದರಿಂದಾಗಿ ಈ ಭಾಗದ ಲಕ್ಷಾಂತರ ವಿದ್ಯಾರ್ಥಿಗಳಿಗೆ ವೃತ್ತಿಶಿಕ್ಷಣ ಪ್ರವೇಶ,
ಸಾವಿರಾರು ಯುವಜನರಿಗೆ ಸರಕಾರಿ ಉದ್ಯೋಗ ದೊರಕುವಂತಾಗಿದೆ. ಪದವೀಧರ ಮತದಾರರು ಇದನ್ನೆಲ್ಲ ಅವಲೋಕಿಸಿ ತಮಗೆ ಬೆಂಬಲಿಸುತ್ತಿದ್ದಾರೆ ಎಂದು ಹೇಳಿದರು.

ರಾಜ್ಯದ ಹಿಂದಿನ ಕಾಂಗ್ರೆಸ್‌ ಸರಕಾರದ ಸಾಧನೆಗಳು ಹಾಗೂ ಈಗಿನ ಕೇಂದ್ರ ಸರಕಾರದ ವೈಫಲ್ಯಗಳ ಬಗ್ಗೆ ಯುವಜನರು, ಪದವೀಧರರು ಸಂಪೂರ್ಣ ಅರಿವು ಹೊಂದಿದ್ದು ಬಿಜೆಪಿಯನ್ನು ಸಾರಾಸಗಟಾಗಿ ತಿರಸ್ಕರಿಸಿ ಕಾಂಗ್ರೆಸ್‌ಗೆ ಬೆಂಬಲಿಸಲು ಒಲವು ಹೊಂದಿದ್ದಾರೆ. ಅಲ್ಲದೆ ಈ ಕ್ಷೇತ್ರ ಶಿಕ್ಷಕರ ಮತಕ್ಷೇತ್ರದಂತೆ ಕಾಂಗ್ರೆಸ್‌ ವಶವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನ ಪರಿಷತ್‌ ಸದಸ್ಯ ಶರಣಪ್ಪ ಮಟ್ಟೂರ, ಮಹಾಪೌರ ಶರಣಕುಮಾರ ಮೋದಿ, ಕಲಬುರಗಿ-ಯಾದಗಿರಿ-ಬೀದರ್‌ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರೇವಣಸಿದ್ದಪ್ಪ ಪಾಟೀಲ, ಮುಖಂಡರಾದ ಡಾ| ಕಿರಣ ದೇಶಮುಖ, ಮಹೇಶ ಸ್ವಾಮಿ, ಮಲ್ಲಿನಾಥ ಅಣಕಲ್‌ ಮುಂತಾದವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next