ಮಂಡ್ಯ: ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪ್ರತಿಸ್ಪರ್ಧಿಗಳು ಮತದಾರರಿಗೆ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್, ಜೆಡಿಎಸ್ ವಿರುದ್ಧ ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಮಹೇಶ್ ಆರೋಪಿಸಿದರು.
ರಾಜ್ಯಕ್ಕೆ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರಮೋದಿ ಅವರಿಗೆ ಉಡುಗೊರೆ ನೀಡಲು ರಾಜ್ಯಾದ್ಯಂತ ನಡೆಯುತ್ತಿರುವ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಸುವುದು ಖಚಿತ. ಬಿಜೆಪಿಗೆ ವ್ಯಾಪಕವಾಗಿ ಎಲ್ಲೆಡೆ ಜನ ಬೆಂಬಲ ವ್ಯಕ್ತವಾಗಿದ್ದು, ಪ್ರತಿಸ್ಪರ್ಧಿಗಳು ಹತಾಶರಾಗಿ ಮತದಾರರಿಗೆ ಆಮಿಷ ಒಡ್ಡುತ್ತಿದ್ದು, ಚುನಾವಣಾ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಚುನಾವಣಾಧಿಕಾರಿಗಳು ಅಕ್ರಮಗಳಿಗೆ ಕಡಿವಾಣ ಹಾಕಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಹಣ ಹಂಚಿಕೆ: ದಕ್ಷಿಣ ಪದವೀಧರರ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಮತದಾರರಿಗೆ ಹಣ ಹಂಚಿಕೆ, ಔತಣಕೂಟ, ಡಿಜಿಟಲ್ ಆ್ಯಪ್‌ಗ್ಳ ಮೂಲಕ ಮತದಾರರ ಖಾತೆಗೆ ಹಣ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿವೆ. ಚುನಾವಣಾಧಿಕಾರಿಗಳು ಈ ಕೂಡಲೇ ಕ್ರಮ ವಹಿಸಬೇಕು. ಚುನಾವಣಾ ಅಕ್ರಮಗಳಿಗೆ ಸಂಬಂ ಧಿಸಿದಂತೆ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದೇವೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕೆಂದರು.
87 ಸಾವಿರ ಮತದಾರರ ಭೇಟಿ: ಪದವೀಧರರಿಗೆ ಆಮಿಷ ಒಡ್ಡುತ್ತಿರುವುದು ನಾಚಿಕೆಗೇಡಿನ ಸಂಗತಿ. ದಕ್ಷಿಣ ಪದವೀಧರ ಕ್ಷೇತ್ರದಲ್ಲಿ 1600 ಘಟಕ ನಾಯಕರನ್ನು ನಿಯೋ ಜಿಸಲಾಗಿದೆ. ಪ್ರತಿಯೊಬ್ಬ ಘಟಕ ನಾಯಕರು ತಲಾ 20 ಮತದಾರರನ್ನು ಭೇಟಿ ಮಾಡಿದ್ದು, ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಒಟ್ಟು 1.41. ಲಕ್ಷ ಮತದಾರರಿದ್ದಾರೆ. ಈ ಪೈಕಿ 87 ಸಾವಿರ ಮತದಾರರನ್ನು ಖುದ್ದು ಭೇಟಿ ಮಾಡಲಾಗಿದ್ದು, ಜಯಗಳಿಸುವ ವಿಶ್ವಾಸವಿದೆ ಎಂದರು.
ಅಂಬೇಡ್ಕರ್ ಬಗ್ಗೆ ಬಿಜೆಪಿಗೆ ಗೌರವ: ಡಾ.ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಬಿಜೆಪಿಗೆ ಅಪಾರವಾದ ಗೌರವವಿದೆ. ಅಂಬೇಡ್ಕರ್ ಅವರು ಭೇಟಿ ನೀಡಿದ ಸ್ಥಳಗಳಲ್ಲಿ ಪಂಚರತ್ನ ಸ್ಥಳ ಅಭಿವೃದ್ಧಿಪಡಿಸಲಾಗಿದೆ. ಸೂರ್ಯ-ಚಂದ್ರ ಇರುವ ತನಕ ಅಂಬೇಡ್ಕರ್ ಸಿದ್ಧಾಂತ ಇರುತ್ತದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಸಿದ್ದರಾಮಯ್ಯ, ಚಂದಗಾಲು ಶಿವಣ್ಣ, ಮಾಜಿ ಅಧ್ಯಕ್ಷ ಕಾಡೇನಹಳ್ಳಿ ನಾಗಣ್ಣಗೌಡ, ಅಶೋಕ್ ಜಯರಾಂ, ಜಿಲ್ಲಾ ಬಿಜೆಪಿ ವಕ್ತಾರ ಸಿ.ಟಿ.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.