ನಗರ : ಪುತ್ತೂರಿನ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಶಾಸಕ ಸಂಜೀವ ಮಠಂದೂರು ಅವರು ಶುಕ್ರವಾರ ಭೇಟಿ ನೀಡಿದರು. ಸಾರ್ವಜನಿಕರು ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು. ಆಸ್ಪತ್ರೆಯಲ್ಲಿನ ಸಮಸ್ಯೆಗಳ ಕುರಿತು ಶನಿವಾರ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಆಸ್ಪತ್ರೆಯ ವೈದ್ಯರ ಜತೆ ಸಮಾಲೋಚನಾ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲಾಗುವುದು ಎಂದು ಸಂಜೀವ ಮಠಂದೂರು ತಿಳಿಸಿದರು.
ವಿದ್ಯುತ್ ಸಮಸ್ಯೆ
ಪದೇ ಪದೇ ಕೆಟ್ಟು ಹೋಗುತ್ತಿರುವ ತೀರಾ ಹಳೆಯದಾದ ಜನರೇಟರ್‌ನಿಂದಾಗಿ ಎದುರಾಗುತ್ತಿರುವ ವಿದ್ಯುತ್ ಸಮಸ್ಯೆಯಿಂದಾಗಿ ರೋಗಿಗಳು ಅನುಭವಿಸಬೇಕಾಗಿರುವ ತೊಂದರೆ, ದಿನಂಪ್ರತಿ ನೂರಾರು ಹೊರರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡುವ ಮೂಲಕ ಉತ್ತಮ ವೈದ್ಯಕೀಯ ಸೇವೆ ನೀಡುತ್ತಿರುವ ವೈದ್ಯ ಜಗದೀಶ್ ಅವರನ್ನು ಉಪ್ಪಿನಂಗಡಿ ಆಸ್ಪತ್ರೆಗೆ ನಿಯೋಜನೆಯಲ್ಲಿ ಕಳುಹಿಸಿರುವುದರಿಂದ ಇಲ್ಲಿಗೆ ಚಿಕಿತ್ಸೆಗಾಗಿ ಬರುತ್ತಿರುವ ರೋಗಿಗಳಿಗೆ ಆಗುತ್ತಿರುವ ಸಮಸ್ಯೆ ಹಾಗೂ ಆಸ್ಪತ್ರೆಯ ಇನ್ನಿತರ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದು ಪರಿಹಾರಕ್ಕೆ ಪ್ರಯತ್ನಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದರು.
ಜನರೇಟರ್‌ನ ಅವ್ಯವಸ್ಥೆಯ ಕುರಿತು ಈಗಾಗಲೇ ಜಿಲ್ಲಾ ಆರೋಗ್ಯಾಧಿಕಾರಿ ಗಮನಕ್ಕೆ ತರಲಾಗಿದೆ ಮತ್ತು ಈ ಕುರಿತು ಶೀಘ್ರ ಕ್ರಮ ಕೈಗೊಳ್ಳುವುದಾಗಿ ಹೇಳಿದ ಸಂಜೀವ ಮಠಂದೂರು, ಉಪ್ಪಿನಂಗಡಿ ಆರೋಗ್ಯ ಕೇಂದ್ರದ ವೈದ್ಯರು ವರ್ಗಾವಣೆಯಾದಾಗ ಅಲ್ಲಿಗೆ ಬೇರೆ ವೈದ್ಯರ ನೀಡುವಂತೆ ಡಿಎಚ್‌ಒ ಅವರನ್ನು ಕೇಳಿಕೊಳ್ಳಲಾಗಿತ್ತು ಮತ್ತು ಮಾಧ್ಯಮಗಳಲ್ಲೂ ಅಲ್ಲಿನ ತೊಂದರೆಯ ಕುರಿತು ವರದಿಯಾಗಿತ್ತು. ಈಗ ಪುತ್ತೂರಿನಿಂದ ವೈದ್ಯರನ್ನು ಅಲ್ಲಿಗೆ ನಿಯೋಜನೆಯಲ್ಲಿ ಕಳುಹಿಸಿದ್ದಾರೆ. ಈ ಕುರಿತು ಡಿಎಚ್‌ಒ ಅವರಲ್ಲಿ ಮಾತನಾಡಿ ಒಂದು ಕಡೆಗೆ ಬೇರೆ ವೈದ್ಯರನ್ನು ನೀಡಲು ತಿಳಿಸಲಾಗುವುದು ಎಂದು ಅವರು ಹೇಳಿದರು.
ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಮಠಂದೂರು ಅವರು ಆಸ್ಪತ್ರೆಯ ಒಳಭಾಗಕ್ಕೆ ತೆರಳಲಿಲ್ಲ. ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ಉಪಾಧ್ಯಕ್ಷೆ ರಾಜೇಶ್ವರಿ, ಸದಸ್ಯೆ ದಿವ್ಯಾ ಪುರುಷೋತ್ತಮ, ಬಿಜೆಪಿ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರಸಭೆಯ ಸದಸ್ಯರಾದ ರಾಜೇಶ್ ಬನ್ನೂರು, ವಿಶ್ವನಾಥ ಗೌಡ , ಬಿಜೆಪಿ ಮಂಡಲ ವಕ್ತಾರ ಆರ್.ಸಿ.ನಾರಾಯಣ , ಮಂಡಲ ಮಹಿಳಾ ಮೋರ್ಚಾದ ಅಧ್ಯಕ್ಷೆ ಉಷಾ ನಾರಾಯಣ, ಬಿಜೆಪಿ ಮುಖಂಡ ಪುರುಷೋತ್ತಮ ಗೌಡ ಮುಂಗ್ಲಿಮನೆ ಮೊದಲಾದವರು ಉಪಸ್ಥಿತರಿದ್ದರು.
ಶನಿವಾರ ಸಭೆಗೆ ಸೂಚನೆ
ಶಾಸಕ ಸಂಜೀವ ಮಠಂದೂರು ಅವರು ಆಸ್ಪತ್ರೆಯಲ್ಲಿನ ಸಮಸ್ಯೆಗಳ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಯನ್ನು ಮೊಬೈಲ್ ಕರೆಯ ಮೂಲಕ ಸಂಪರ್ಕಿಸಿ ಮಾತನಾಡಿ, ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದರು. ಶನಿವಾರ ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿ ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಿ ಬಗೆಹರಿಸುವಂತೆ ಅವರು ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದರು .