Advertisement
ಕಾರ್ಖಾನೆಗಳು ರೈತರ ಕಬ್ಬಿನ ಬಾಕಿ ಹಣ ಪಾವತಿಸಿಲ್ಲ, ಬಿರುಗಾಳಿ ಮಳೆಯಿಂದ ರೈತರ ಲಕ್ಷಾಂತರ ರೂ. ಮೌಲ್ಯದ ಬೆಳೆ ಹಾಗೂ ಆಸ್ತಿಗೆ ಹಾನಿಯಾಗಿದೆ. ಕೆರೆ-ಕಟ್ಟೆಗಳಲ್ಲಿ ನೀರಿಲ್ಲದೆ ಎಲ್ಲೆಡೆ ಕುಡಿವ ನೀರಿಗೆ ಹಾಹಾಕಾರ ಎದುರಾಗಿದೆ, ಅಭಿವೃದ್ಧಿ ಕಾರ್ಯಗಳಿಗೆ ಗ್ರಹಣ ಹಿಡಿದಿದೆ. ಆದರೂ ಜನಪ್ರತಿನಿಧಿಗಳೆನಿಸಿಕೊಂಡವರು ಜನರ ಪಾಲಿಗೆ ಇದ್ದೂ ಇಲ್ಲದಂತಾಗಿದ್ದಾರೆ. ಸಮಸ್ಯೆ ಹೆಚ್ಚಾಗಿದೆ.
Related Articles
Advertisement
ಆಕ್ರೋಶ: ಜಿಲ್ಲೆಯ ರೈತರು ಹಾಗೂ ಜನರು ಎದುರಿಸುತ್ತಿರುವ ಸಮಸ್ಯೆಗಳಿಗಿಂತಲೂ ಮಂಡ್ಯ ಲೋಕಸಭಾ ಕ್ಷೇತ್ರದ ಫಲಿತಾಂಶವೇ ಅವರಿಗೆ ಪ್ರಧಾನವಾಗಿದೆ. ಫಲಿತಾಂಶ ಏನಾಗಬಹುದೆಂಬ ಲೆಕ್ಕಾಚಾರದಲ್ಲೇ ಮುಳುಗಿಹೋಗಿದ್ದಾರೆ. ರೈತರ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕೆ ಸಮಯ ಕೊಡಲಾಗದೆ ಫಲಿತಾಂಶಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಇದು ಸಹಜವಾಗಿಯೇ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಕಾಣದಂತಾದ ಪ್ರತಿನಿಧಿಗಳು: ಮಂಡ್ಯ ಫಲಿತಾಂಶದ ಗುಪ್ತಚರ ಇಲಾಖೆ ನೀಡಿರುವ ವರದಿ ಶಾಸಕರಲ್ಲೂ ತಳಮಳ ಸೃಷ್ಟಿಸಿದೆ. ಮುಖ್ಯಮಂತ್ರಿ ಪುತ್ರ ನಿಖೀಲ್ ಸ್ಪರ್ಧೆಯಿಂದ ಕ್ಷೇತ್ರ ದೇಶದಲ್ಲೇ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಫಲಿತಾಂಶವೇನಾದರೂ ಏರು-ಪೇರಾದರೆ ಜೆಡಿಎಸ್ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಅವರ ಆಕ್ರೋಶವನ್ನು ಎದುರಿಸುವುದು ಹೇಗೆ, ಮುಂದಿನ ತಮ್ಮ ರಾಜಕೀಯ ಭವಿಷ್ಯದ ಗತಿ ಏನು ಎಂಬ ಬಗ್ಗೆ ಬಹುತೇಕರು ತಲೆಕೆಡಿಸಿಕೊಂಡಿದ್ದಾರೆ.
ಹೀಗಾಗಿ ಜೆಡಿಎಸ್ ಸಚಿವರು, ಶಾಸಕರು, ಸಂಸದರು ಯಾರೂ ಸಹ ಕ್ಷೇತ್ರದೊಳಗೆ ಕಾಣಿಸಿ ಕೊಳ್ಳುತ್ತಿಲ್ಲ. ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಧರ್ಮ ಪಾಲಿಸಿಲ್ಲವೆಂಬ ಬಗ್ಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಾಯಕರಲ್ಲಿ ಅಪಸ್ವರಗಳು ಹೆಚ್ಚಾಗುತ್ತಿವೆ. ಸಮ್ಮಿಶ್ರ ಸರ್ಕಾರ ಪತನಗೊಳ್ಳುವ ಮಾತುಗಳು ದಟ್ಟವಾಗಿ ಳಿಬರುತ್ತಿವೆ. ಈ ಕಾರಣದಿಂದಲೂ ಶಾಸಕರೆಲ್ಲರೂ ಕ್ಷೇತ್ರದಿಂದ ಹೊರಗುಳಿದು ಅವರದೇ ಆದ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಮುಂದೆ ಏನೆಲ್ಲಾ ರಾಜಕೀಯ ಬೆಳವಣಿಗೆಗಳು ನಡೆಯಲಿವೆ ಎಂಬ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಸಿಎಂಗೆ ನೆಮ್ಮದಿಯಿಲ್ಲ: ಜನಪ್ರತಿನಿಧಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬಹದು. ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಜನರು ಆಯ್ಕೆ ಮಾಡಿದ್ದರೂ, ಪಕ್ಷದ ನಾಯಕರೇ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೂ ಇನ್ನೂ ತೃಪ್ತಿ ಸಿಕ್ಕಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಮಂಡ್ಯ ಅಖಾಡದಲ್ಲಿ ಸಿಎಂ ಪುತ್ರನ ಗೆಲುವು ಜನಪ್ರತಿನಿಧಿಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಅದಕ್ಕಾಗಿ ಎಲ್ಲರೂ ಎದುರು ನೋಡುತ್ತಿದ್ದಾರೆ. ಚುನಾವಣೋತ್ತರದಲ್ಲಿ ಜಿಲ್ಲೆಯೊಳಗೆ ಫಲಿತಾಂಶದ ಬಗೆಗಿನ ವಾತಾವರಣ ಬದಲಾಗಿರುವುದು ಶಾಸಕರ ನಿದ್ದೆಗೆಡಿಸಿದೆ. ಸಿಎಂಗೆ ನೆಮ್ಮದಿ ಇಲ್ಲದಂತೆ ಮಾಡಿದೆ.
ಒಟ್ಟಿನಲ್ಲಿ ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲ, ನೀರಿಲ್ಲದೆ ಬೆಳೆ ನಷ್ಟಕ್ಕೊಳಗಾಗಿ ಆರ್ಥಿಕ ಚೇತರಿಕೆಯನ್ನು ಕಾಣದೆ ಕಂಗಾಲಾಗಿದ್ದಾರೆ. ನಾಗಮಂಗಲ, ಕೆ.ಆರ್.ಪೇಟೆ ಸೇರಿದಂತೆ ಗ್ರಾಮೀಣ ಭಾಗದ ಜನರು ಕುಡಿಯುವ ನೀರಿಲ್ಲದೆ ಕಂಗೆಟ್ಟಿದ್ದಾರೆ. ಇದೆಲ್ಲದರ ನಡುವೆ ನಾಡಿನ ದೊರೆ ಮಾತ್ರ ಇದಾವುದರ ಚಿಂತೆ ಇಲ್ಲದೆ ಮಂಡ್ಯದಲ್ಲಿ ಮಗನ ಫಲಿತಾಂಶದ ಬಗ್ಗೆ ದಿಕ್ಕೆಟ್ಟಿರುವುದು ವಿಚಿತ್ರ ಸತ್ಯವಾಗಿದೆ.
● ಮಂಡ್ಯ ಮಂಜುನಾಥ್