ಕುಣಿಗಲ್: ಕುಣಿಗಲ್ ದೊಡ್ಡಕೆರೆ ಸೇರಿದಂತೆ ತಾಲೂಕಿನ ಕೆರೆ ಕಟ್ಟೆಗಳನ್ನು ತುಂಬಿಸಲು ಪಣ ತೊಟ್ಟಿ ರುವ ಶಾಸಕ ಡಾ.ಎಚ್.ಡಿ. ರಂಗನಾಥ್ ರಾತ್ರಿಯಿಡೀ ಅಧಿಕಾರಿಗಳೊಂದಿಗೆ ಹೇಮಾವತಿ ನಾಲೆ ಮೇಲೆ ಪಹರೆ ನಡೆಸಿ, ಬೇರೆ ತಾಲೂಕಿನ ಕೆರೆಗಳಿಗೆ ಕದ್ದು ಹರಿಸಿಕೊಳ್ಳುತ್ತಿದ್ದ ನೀರನ್ನು ತಡೆದು ಕುಣಿಗಲ್ ಕಡೆಗೆ ನೀರು ಸರಾಗವಾಗಿ ಹರಿಸಲು ಕ್ರಮ ಕೈಗೊಂಡಿದ್ದಾರೆ.
ಕೆರೆ, ಕಟ್ಟೆ ತುಂಬಿಸಲು ಕ್ರಮ: ತಾಲೂಕಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬೀಳದೆ ಕೆರೆ-ಕಟ್ಟೆ ಹಾಗೂ ಜಲಾಶಯಗಳಲ್ಲಿ ನೀರಿಲ್ಲದೆ ಜನ ಜನುವಾರಗಳ ಕುಡಿಯುವ ನೀರು ಹಾಗೂ ರೈತರ ಬೇಸಾಯಕ್ಕೆ ಅನಾನುಕೂಲವಾಗಿ ಕಳೆದ ನಾಲ್ಕು-ಐದು ವರ್ಷಗಳಿಂದ ತಾಲೂಕು ಬರಗಾಲಕ್ಕೆ ತುತ್ತಾಗಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಶಾಸಕರು ಈ ಬಾರಿ ಶತಾಯ ಗತಾಯವಾಗಿ ತಾಲೂಕಿಗೆ ಹೇಮಾವತಿ ನೀರು ಹರಿಸಿ ಕೆರೆ ಕಟ್ಟೆ ಹಾಗೂ ಜಲಾಶಯವನ್ನು ತುಂಬಿಸಬೇಕೆಂದು ಪಣ ತೊಟ್ಟು ಕಳೆದ ಒಂದು ವಾರದಿಂದ ರಾತ್ರಿಯಿಡೀ ಹೇಮಾವತಿ ನಾಲೆ ಮೇಲೆ ಸಂಚರಿಸಿ ಮುಂಗಾರು ಪ್ರಾರಂಭದ ಹಂತದಲ್ಲೇ ಕುಣಿಗಲ್ ದೊಡ್ಡಕೆರೆಗೆ ನೀರು ಹರಿಸಲು ಯಶಸ್ವಿಯಾಗಿದ್ದಾರೆ.
ಬೆಳಗಿನಜಾವದ ವರೆಗೆ ಪಹರೆ: ಈ ಬಾರಿ ಉತ್ತಮ ಮಳೆಯಾಗಿ ಗೋರೂರು ಜಲಾಶಯ ತುಂಬಿ ಸಾಕಷ್ಟು ನೀರು ಶೇಖರಣೆಯಾಗಿರುವ ಹಿನ್ನೆಲೆಯಲ್ಲಿ ಹೇಮಾವತಿ ನಾಲೆ ಮೂಲಕ ಜಿಲ್ಲೆಗೆ ನೀರು ಹರಿದು ಬಿಡಲಾಗಿದೆ. ಆದರೆ ಜಿಲ್ಲೆಯ ಕೆಲ ತಾಲೂಕಿನ ಜನಪ್ರತಿನಿಧಿಗಳು ಕುಣಿಗಲ್ ಕಡೆಗೆ ಹರಿಯುತ್ತಿದ್ದ ನೀರನ್ನು ತಡೆದು ತಮ್ಮ ತಾಲೂಕಿನ ಕೆರೆಕಟ್ಟೆಗಳಿಗೆ ಹರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಡಾ. ರಂಗನಾಥ್, ತುಮಕೂರು ಹೇಮಾವತಿ ನೀರಾವರಿ ನಿಗಮದ ಎಸ್.ಇ. ಮೋಹನ್‌ಕುಮಾರ್, ಕುಣಿಗಲ್ ವಿಭಾಗದ ಎಇಇ ಶಿವರಾಜ್, ದೇವರಾಜ್ ಸೇರಿದಂತೆ ವಿವಿಧ ಅಧಿಕಾರಿಗಳೊಂದಿಗೆ ಮಂಗಳವಾರ ಸಂಜೆ 4 ಗಂಟೆಯಿಂದ ತಡರಾತ್ರಿ 3 ಗಂಟೆಯವರೆಗೆ ಕುಣಿಗಲ್ ದೊಡ್ಡಕೆರೆಯಿಂದ ಬುಗುಡನಹಳ್ಳಿ ಕೆರೆಯ ವರೆಗೆ ನಾಲೆ ಮೇಲೆ ಪಹರೆ ನಡೆಸಿದರು.
ನೀರು ಕಳವಿಗೆ ತಡೆ: ಈ ವೇಳೆ ಕುಣಿಗಲ್ ಕಡೆ ಹರಿಯುತ್ತಿದ್ದ ನೀರನ್ನು ಬೇರೆ ತಾಲೂಕಿನ ಬುಗಡನಹಳ್ಳಿ, ಹರಿಯೂರು, ಹೆಬ್ಬೂರು, ನಾಗವಲ್ಲಿ ಸೇರಿದಂತೆ ಹಲವು ಗ್ರಾಮಗಳ ಸಣ್ಣ ಪುಟ್ಟ ಕೆರೆಗಳಿಗೆ ಜಾಕ್ ವೆಲ್ ತಿರುಗಿಸಿಕೊಂಡು ನೀರು ಹರಿಸಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಶಾಸಕರು ಅಧಿಕಾರಿಗಳ ಮೂಲಕ ತಡೆದು ಕುಣಿಗಲ್ ಕಡೆಗೆ ನೀರು ಸರಾಗವಾಗಿ ಹರಿಯಲು ಅನುವು ಮಾಡಿಕೊಟ್ಟರು.