ಭೋಪಾಲ್: ಎರಡು ದಿನಗಳ ಮಧ್ಯಪ್ರದೇಶ ರಾಜಕೀಯ ಬೆಳವಣಿಗೆಗಳಿಗೆ ಕಾರಣವಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಬಣದಲ್ಲೀಗ ಬಿರುಕು ಮೂಡಿದೆ ಎಂದು ವರದಿಯಾಗಿದೆ.
ಆಂಗ್ಲ ವೆಬ್ ಸೈಟ್ ಎನ್ ಡಿಟಿವಿ ಈ ಬಗ್ಗೆ ವರದಿ ಮಾಡಿದ್ದು, ಸಿಂಧಿಯಾ ಬಣದಲ್ಲಿರುವ ಕೆಲ ಶಾಸಕರು ಬಿಜೆಪಿ ಸೇರಲು ಸಮ್ಮತಿ ಸೂಚಿಸಿಲ್ಲ ಎನ್ನಲಾಗಿದೆ.
ಬೆಂಗಳೂರಿನ ರೆಸಾರ್ಟ್ ನಲ್ಲಿರುವ ಮಧ್ಯಪ್ರದೇಶದ ಶಾಸಕರ ಗುಂಪಿನಲ್ಲಿ ಹತ್ತು ಮಂದಿ ಶಾಸಕರು ಮತ್ತು ಇಬ್ಬರು ಸಚಿವರು ಬಿಜೆಪಿ ಸೇರಲು ನಕಾರ ವ್ಯಕ್ತಪಡಿಸುತ್ತಿದ್ಧಾರೆ ಎನ್ನಲಾಗಿದೆ.
“ನಾವು ಮಹಾರಾಜನಿಗಾಗಿ ಬಂದವರು, ಬಿಜೆಪಿ ಸೇರಲು ಅಲ್ಲ” ಎಂದು ಶಾಸಕರೊಬ್ಬರು ಹೇಳಿರುವುದಾಗಿ ವರದಿಯಾಗಿದೆ. ( ಸಿಂಧಿಯಾಗೆ ಕಾಂಗ್ರೆಸ್ ವಲಯದಲ್ಲಿ ಮಹಾರಾಜ ಎಂದೇ ಸಂಬೋದಿಸಲಾಗುತ್ತದೆ)
ಸಿಂಧಿಯಾ ಹೊಸ ಪಕ್ಷ ಸ್ಥಾಪಿಸಬೇಕೆಂದು ಶಾಸಕರು ಬಯಸುತ್ತಿದ್ದಾರೆ ಎಂದು ವರದಿಯಾಗಿದೆ. ಈ ಹಿಂದೆ 1996ರಲ್ಲಿ ಜ್ಯೋತಿರಾದಿತ್ಯ ತಂದೆ ಮಾಧವರಾವ್ ಸಿಂಧಿಯಾ ಪಕ್ಷ ತ್ಯಜಿಸಿದಾಗ ಹೊಸ ಪಕ್ಷ ರಚಿಸಿದ್ದರು. ಇದೇ ರೀತಿ ಜ್ಯೋತಿರಾದಿತ್ಯ ಕೂಡ ಹೊಸ ಪಕ್ಷ ಸ್ಥಾಪಿಸಬೇಕೆಂದು ಶಾಸಕರು ಬಯಸುತ್ತಿದ್ದಾರೆ ಎಂದು ವರದಿಯಾಗಿದೆ.
ಆದರೆ ಜ್ಯೋತಿರಾದಿತ್ಯ ಸಿಂಧಿಯಾ ಅವರು ಇಂದು ಮಧ್ಯಾಹ್ನ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದರು.
ಕಾಂಗ್ರೆಸ್ ನ 22 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಸಿಎಂ ಕಮಲ್ ನಾಥ್ ವಿಶ್ವಾಸ ಮತ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.