Advertisement

ಸಚಿವ ಸುರೇಶ್‌ ಪತ್ರಕ್ಕೆ ಶಾಸಕರ ನೀರಸ ಪ್ರತಿಕ್ರಿಯೆ

12:20 AM Nov 06, 2020 | mahesh |

ಬೆಂಗಳೂರು: ರಾಜ್ಯದಲ್ಲಿ ಶಾಲಾರಂಭ ಬೇಕೆ? ಬೇಡವೇ? ಸಲಹೆ ನೀಡುವಂತೆ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಮನವಿಗೆ ಕೇವಲ 65 ಶಾಸಕರಷ್ಟೇ ಸ್ಪಂದಿಸಿದ್ದು ಬಹುತೇಕ ಶಾಸಕರು ಈವರೆಗೂ ಸಚಿವರ ಪತ್ರಕ್ಕೆ ಉತ್ತರವನ್ನೇ ನೀಡಿಲ್ಲ. ಉತ್ತರಿಸಿರುವ 65 ಮಂದಿಯಲ್ಲಿ ವಿಧಾನಪರಿಷತ್‌ ಸದಸ್ಯರೂ ಸೇರಿದ್ದಾರೆ.

Advertisement

ಅವರಲ್ಲಿ ಪ್ರಮುಖವಾಗಿ ಪ್ರತಿಪಕ್ಷ ಮುಖಂಡ ಸಿದ್ದರಾಮಯ್ಯ ಹಾಗೂ ಕೆಲ ಶಾಸಕರು ಕೊರೊನಾ ಪರಿಸ್ಥಿತಿಯಲ್ಲಿ ಶಾಲಾರಂಭವೇ ಬೇಡ ಎಂದಿದ್ದಾರೆ. ಶಾಲಾರಂಭಿಸುವ ಸಂಬಂಧ ಜನ ಪ್ರತಿನಿಧಿಗಳಿಂದ ಅಭಿಪ್ರಾಯ ಕೋರಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರೇ ಸೆಪ್ಟಂಬರ್‌ ತಿಂಗಳಲ್ಲಿ ಪತ್ರ ಬರೆದಿದ್ದರು.

ಸುರೇಶ್‌ ಕುಮಾರ್‌ ಪತ್ರಕ್ಕೆ ಸ್ಪಂದಿಸಿರುವವರಲ್ಲಿ ಹಲವು ಮಂದಿ ಕೊರೊನಾ ಪರಿಸ್ಥಿತಿ ತಿಳಿಯಾಗುವವರೆಗೂ ಪ್ರಾಥಮಿಕ ಶಾಲೆ ಆರಂಭಿಸುವುದು ಬೇಡ ಎಂದಿದ್ದಾರೆ. ಅಗತ್ಯ ಮುನ್ನೆಚ್ಚರಿಕೆ ಕ್ರಮದೊಂದಿಗೆ ಎಸೆಸೆಲ್ಸಿ ಹಾಗೂ ಪಿಯುಸಿ ತರಗತಿಗಳನ್ನು ಆರಂಭಿಸಲು ಸಲಹೆ ನೀಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸೆಪ್ಟಂಬರ್‌ ಅಂತ್ಯ ಹಾಗೂ ಅಕ್ಟೋಬರ್‌ ಮೊದಲ ವಾರದಲ್ಲಿ ಶಾಸಕರು ಅಭಿಪ್ರಾಯ ಸಲ್ಲಿಸಿರುವುದರಿಂದ ಈಗ ಅಭಿ
ಪ್ರಾಯಗಳಲ್ಲಿ ವ್ಯತ್ಯಾಸ ವಾಗಿರುವ ಸಾಧ್ಯತೆಯಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವ ಜತೆಗೆ ಗುಣಮುಖರಾಗುತ್ತಿರುವವ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಸುರಕ್ಷತಾ ಕ್ರಮದೊಂದಿಗೆ ಶಾಲೆ ಆರಂಭಿಸಿ ಎನ್ನುವ ಜನಪ್ರತಿನಿಧಿಗಳ ಸಂಖ್ಯೆಯೂ ಹೆಚ್ಚಿದೆ. ಅದರಲ್ಲೂ ಪಿಯುಸಿ ಹಾಗೂ ಪ್ರೌಢಶಾಲಾ ವಿಭಾಗವನ್ನು ಆರಂಭಿಸಬಹುದು ಎಂದು ಶಾಸಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎಂದು ಸರಕಾರದ ಮೂಲಗಳು ತಿಳಿಸಿವೆ.

ಬೇಡ ಎಂದವರಲ್ಲಿ ಕಾಂಗ್ರೆಸ್‌ ಶಾಸಕರೇ ಹೆಚ್ಚು
ಕೊರೊನಾ ಸಂಕಷ್ಟದ ನಡುವೆ ಮಕ್ಕಳನ್ನು ಶಾಲೆಗೆ ಕರೆಸುವುದು ಸರಿಯಲ್ಲ. ಕೊರೊನಾ ಸಂಪೂರ್ಣ ಕಡಿಮೆಯಾದ ಅನಂತರವೇ ಶಾಲಾರಂಭಿಸಬೇಕು ಅಥವಾ ಈ ವರ್ಷ ಮಕ್ಕಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ ನ ಕೆಲವು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ನ ಮಾಜಿ ಸಚಿವರೊಬ್ಬರು ಶಾಲಾರಂಭಿಸುವಂತೆ ಸಲಹೆ ಕೂಡ ನೀಡಿದ್ದಾರೆ. ಎಲ್ಲ ಸುರಕ್ಷತಾ ಕ್ರಮದೊಂದಿಗೆ ಶಾಲೆ ಆರಂಭಿಸುವಂತೆ ಬಿಜೆಪಿಯ ಕೆಲವು ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರು ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಶಾಲಾರಂಭಕ್ಕೆ ಸಂಬಂಧಿಸಿದಂತೆ 65ಕ್ಕೂ ಅಧಿಕ ಜನಪ್ರತಿನಿಧಿಗಳು (ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರು) ಸಲಹೆ ನೀಡಿದ್ದಾರೆ. ಅದೆಲ್ಲವನ್ನು ಕ್ರೋಡೀಕರಿಸಿದ್ದೇವೆ. ಶಾಲಾರಂಭಕ್ಕೆ ಸಂಬಂಧಿಸಿದಂತೆ ಎಸ್‌ಡಿಎಂಸಿ ಸೇರಿದಂತೆ ವಿವಿಧ ಇಲಾಖೆಯ ಅಭಿಪ್ರಾಯ ಸಂಗ್ರಹಿಸಿ, ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಲಿದ್ದೇವೆ.
-ಸುರೇಶ್‌ ಕುಮಾರ್‌, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next