ಬೆಂಗಳೂರು: ಪಕ್ಷದ ವಿರುದ್ಧ ಮುನಿಸಿ ಕೊಂಡು ಬಂಡಾಯ ಸಾರಿರುವ ನಾಲ್ವರು ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಸಭಾಧ್ಯಕ್ಷ ರಮೇಶ್ ಕುಮಾರ್ ಅವರಿಗೆ ದೂರು ನೀಡಲು ಕಾಂಗ್ರೆಸ್ ನಿರ್ಧರಿಸಿದೆ.
ಶುಕ್ರವಾರ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಅತೃಪ್ತರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕರು ಒಕ್ಕೊರಲಿನಿಂದ ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಪಕ್ಷದ ವಿರುದ್ಧ ಬಂಡಾಯ ಸಾರುವವರಿಗೆ ಎಚ್ಚರಿಕೆ ಸಂದೇಶ ರವಾನಿಸಲು ನಾಲ್ವರು ಬಂಡಾಯ ಶಾಸಕರಾದ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ಮತ್ತು ಚಿಂಚೊಳ್ಳಿ ಶಾಸಕ ಉಮೇಶ್ ಜಾಧವ್ ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಶಾಸಕ ಸ್ಥಾನದಿಂದ ಉಚ್ಚಾಟನೆ ಮಾಡುವಂತೆ ಕಾಂಗ್ರೆಸ್ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ದೂರು ನೀಡಿದೆ.
ಬಳಿಕ ಮಾತನಾಡಿದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಇವತ್ತು ಮತ್ತೂಮ್ಮೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೆ. 5 ಮಂದಿ ಶಾಸಕರನ್ನು ಬಿಟ್ಟು ಎಲ್ಲರೂ ಬಂದಿದ್ದರು. ಶಿವಾಜಿನಗರ ಶಾಸಕ ರೋಷನ್ ಬೇಗ್ ಅನುಮತಿ ಪಡೆದು ಹೋಗಿದ್ದಾರೆ. ಬಿ.ಸಿ. ಪಾಟೀಲ್ ಗೈರು ಹಾಜರಿಯ ಬಗ್ಗೆ ದೂರವಾಣಿ ಮೂಲಕ ಮಾತನಾಡಿ ಅನುಮತಿ ಪಡೆದಿದ್ದಾರೆ. ಕಂಪ್ಲಿ ಶಾಸಕ ಬಂಡಾಯ ಶಾಸಕರ ಗುಂಪಿನಲ್ಲಿ ಇಲ್ಲ. ಅವರು ಎಲ್ಲಿದ್ದಾರೊ ಗೊತ್ತಿಲ್ಲ. ಅವರಿಗೆ ಸಹಜ ನ್ಯಾಯದ ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ನಾಲ್ವರು ಅತೃಪ್ತರು ಪತ್ರದ ಮೂಲಕ ಸಭೆಗೆ ಗೈರು ಹಾಜರಾಗುವುದಾಗಿ ತಿಳಿಸಿದ್ದಾರೆ. ಉಮೇಶ್ ಜಾಧವ್ ಶೀಘ್ರವೇ ಬಂದು ಭೇಟಿ ಮಾಡುವುದಾಗಿ ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ಮದುವೆ ಇದೆ ಎಂದು ಹೇಳಿದ್ದಾರೆ. ಕುಮಟಳ್ಳಿ ಹುಷಾರಿಲ್ಲ ಎಂದು ಹೇಳಿದ್ದಾರೆ. ನಾಗೇಂದ್ರ ಖಾಸಗಿ ಕೆಲಸ ಇದೆ ಎಂದು ಹೇಳಿದ್ದಾರೆ. ಆದರೆ ಅವರಿಗೆ ಸಾಕಷ್ಟು ಅವಕಾಶ ನೀಡಲಾಗಿದೆ. ಅವರು ಪಕ್ಷ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಅವರಿಗೆ ನೇರವಾಗಿ ಭೇಟಿಯಾಗುವಂತೆ ಹೇಳಿದ್ದೆ. ಆದರೂ ಅವರು ಬರಲಿಲ್ಲ. ವಿಪ್ ಜಾರಿ ಮಾಡಿದ್ದರೂ ಬಂದಿಲ್ಲ. ಫೆ. 15ರ ವರೆಗೂ ಅಧಿವೇಶನಕ್ಕೂ ಬರಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಸ್ತಾವಿಸಿದ್ದೇವೆ. ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇನೆ ಎಂದು ತಿಳಿಸಿದರು.ಅಲ್ಲದೇ ಉಳಿದ ಎಲ್ಲ ಶಾಸಕರಿಗೆ ಬಜೆಟ್ ಅಧಿವೇಶನ ಮುಗಿಯುವವರೆಗೂ ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಿದ್ದೇನೆ.
ಆಡಿಯೋ ತನಿಖೆ
ಜೆಡಿಎಸ್ ಶಾಸಕರಿಗೆ ಹಣದ ಆಮಿಷ ಒಡ್ಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಮಾತನಾಡಿರುವ ಆಡಿಯೋ ನೂರಕ್ಕೆ ನೂರು ಅವರದೇ ಧ್ವನಿಯಾಗಿದ್ದು ಅವರ ವಿರುದ್ಧ ತನಿಖೆ ಮಾಡಿಸುತ್ತೇವೆ. ಯಡಿಯೂರಪ್ಪರ ನೈಜ ಬಣ್ಣ ಜನರ ಮುಂದೆ ಬಯಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.