ವಿಧಾನಸಭೆ: “ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೆಡಿಸಲೆಂದು ಮುಂಬೈಗೆ ತೆರಳಿರುವ ಶಾಸಕರಿಗೆ ನಾಚಿಕೆಯಾಗಬೇಕು’ ಎಂದು ಸಾ.ರಾ.ಮಹೇಶ್ ಹೇಳಿದರು. ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆಯ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಒಂದು ಪಕ್ಷದ ಹೆಸರಿನಲ್ಲಿ ಚುನಾವಣೆಯಲ್ಲಿ ಟಿಕೆಟ್ ಪಡೆದು, ಆ ಪಕ್ಷದ ಹೆಸರು ಹೇಳಿ, ಜನರ ಮತ ಪಡೆದು ಗೆಲುವು ಸಾಧಿಸಿ ಬಂದಿದ್ದಾರೆ. ಈಗ ಅತೃಪ್ತಿ ಎಂದು ಮುಂಬೈ ಸೇರಿದ್ದಾರೆ. ಇವರನ್ನು ನೋಡಿದರೆ ನನಗೆ ಚಿಕ್ಕವನಿದ್ದಾಗ ನೋಡಿದ ಸಿನಿಮಾದ ಗೀತೆ “ನೀನೇ… ಸಾಕಿದಾ ಗಿಣಿ…, ಹದ್ದಾಗಿ ಕುಕ್ಕಿತಲ್ಲೋ…ಹಾಡು ನೆನಪಾಗುತ್ತದೆ’ ಎಂದು ವ್ಯಂಗ್ಯವಾಡಿದರು.
ಜಾತ್ಯತೀತತೆಯನ್ನು ರಾಜ್ಯದಲ್ಲಿ ಉಳಿಸಬೇಕು ಎಂಬ ನಿಟ್ಟಿನಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡೆವು. ಆರಂಭದಿಂದಲೂ ಈ ಮೈತ್ರಿಗೆ ಕಲ್ಲು ಹಾಕುವ ಪ್ರಯತ್ನ ನಡೆಯುತ್ತಲೇ ಇತ್ತು. ಇದರಿಂದಾಗಿ ನೊಂದು ಪ್ರವಾಸೋದ್ಯಮ ಸಚಿವನಾಗಿ ಅಧಿಕಾರ ಸ್ವೀಕರಿಸಿ 15 ದಿನಕ್ಕೆ ರಾಜೀನಾಮೆ ನೀಡುವುದಾಗಿ ಮಾಜಿ ಪ್ರಧಾನಿ ದೇವೇಗೌಡರ ಬಳಿ ಹೇಳಿದ್ದೆ. ರಾಜಕೀಯ ಜೀವನದಲ್ಲಿ ಸಾಕಷ್ಟು ಜನರ ಜತೆ ಕೆಲಸ ಮಾಡಿದ್ದೇನೆ. ಆದರೆ, ಇಂತಹ ಪರಿಸ್ಥಿತಿ ಬಂದಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಲಾಪದಲ್ಲಿ ಹಾಜರಿರದ ಎಚ್.ವಿಶ್ವನಾಥ್ ಅವರ ಬಗ್ಗೆ ಕಲಾಪದಲ್ಲಿ ಮಾತನಾಡಿದ್ದು, ತಪ್ಪು ಎಂದು ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಎಚ್.ವಿಶ್ವನಾಥ್ ಅವರು ಹಿಂದೊಮ್ಮೆ “ಪ್ರಧಾನಿ ಬಡವರ ಖಾತೆಗೆ ಹಣ ಹಾಕದೆ, “ಆಪರೇಷನ್ ಕಮಲ’ಕ್ಕೆ ಅದನ್ನು ಬಳಸುತ್ತಾರೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದರು. ಹೀಗಾಗಿ, ನಾನು ಮಾತನಾಡಿದೆ ಅಷ್ಟೇ ಎಂದರು.
ರಾಜ್ಯಪಾಲರಿಗೆ ಇಲ್ಲಿನ ರಾಜಕೀಯ ಸ್ಥಿತಿಗತಿ, “ಆಪರೇಷನ್ ಕಮಲ’ ಎಲ್ಲಾ ಗೊತ್ತಾದ ಮೇಲೂ ಸುಮ್ಮನಿದ್ದಾರೆ. ಈ ಕುರಿತು ಒಮ್ಮೆಯೂ ಅವರು ಕ್ರಮ ಕೈಗೊಳ್ಳಲಿಲ್ಲ. ರಾಷ್ಟ್ರಪತಿಗಳ ಗಮನಕ್ಕೆ ಅದನ್ನು ತರಲಿಲ್ಲ. ಈಗ ಕಲಾಪದ ಚಟುವಟಿಕೆಗೆ ಮಧ್ಯೆ ಪ್ರವೇಶಿಸಿ ಆದೇಶ ನೀಡುತ್ತಾರೆ. ಇದರಿಂದಾಗಿ ಜನರಿಗೆ ರಾಜ್ಯಪಾಲರ ನಡೆ ಬಗ್ಗೆ ಅನುಮಾನ ಬಂದಿದೆ. ಜತೆಗೆ, ಬಿಜೆಪಿ ಕಾರ್ಯಾಂಗ, ನ್ಯಾಯಾಂಗವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಜನ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅತೃಪ್ತರ ನಿಷ್ಠೆಯ ಪ್ರಶ್ನೆ: ಅತೃಪ್ತ ಶಾಸಕರಲ್ಲಿ ಬಹುತೇಕರು ಕಾಂಗ್ರೆಸ್, ಜೆಡಿಎಸ್ ಪಕ್ಷಗಳಲ್ಲಿ ದಶಕಗಳ ಕಾಲ ಇದ್ದವರು. ಪಕ್ಷದಿಂದ ಎಲ್ಲಾ ಸೌಲಭ್ಯ ಪಡೆದು ಆಶ್ರಯ ನೀಡಿದ್ದ ಪಕ್ಷವನ್ನೇ ಬಿಟ್ಟು ಹೋದರು. ಈಗ 15 ದಿನಕ್ಕೆ ಬಿಜೆಪಿ ಜತೆ ಕೈಜೋಡಿಸಿದ್ದಾರೆ ಎಂದರೆ ನಿಮ್ಮಲ್ಲಿ ಎಷ್ಟು ನಿಷ್ಠೆಯಿಂದ ಇರುತ್ತಾರೆ ನೋಡಿಕೊಳ್ಳಿ ಎಂದು ಬಿಜೆಪಿ ಸದಸ್ಯರಿಗೆ ಸಾ.ರಾ.ಮಹೇಶ್ ತಿರುಗೇಟು ನೀಡಿದರು. ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಮಾಡಿದರೂ ಅಲ್ಲಿಯೂ ಅತೃಪ್ತಿ ಇರುತ್ತದೆ. ಅದನ್ನು ನಿಭಾಯಿಸಲು ಬೋಪಯ್ಯನವರನ್ನೇ ಸಭಾಪತಿ ಮಾಡಬೇಕು ಎಂದು ಸಾರಾ ಮಹೇಶ್ ಸಲಹೆ ನೀಡಿದರು. ಈ ವೇಳೆ, ಮಧ್ಯ ಪ್ರವೇಶಿಸಿ ಮಾತನಾಡಿದ ಸಚಿವ ಎಚ್.ಡಿ.ರೇವಣ್ಣ “ಬೋಪಯ್ಯನವರನ್ನು ಬೈಯ್ಯಬೇಡಿ, ಅವರು ಒಳ್ಳೆಯವರು ಈ ಬಾರಿ ಸಭಾಪತಿ ಬೇಡ, ಮಂತ್ರಿಯಾಗಲಿ’ ಎಂದು ಲೇವಡಿ ಮಾಡಿದರು.
ಪ್ರಬಲ ಕಾನೂನು ಮಾಡಿ: ಒಮ್ಮೆ ಶಾಸನಸಭೆಗೆ ರಾಜೀನಾಮೆ ಕೊಟ್ಟ ಮೇಲೆ ಆ ಶಾಸಕರು ಮುಂದೆ ಯಾವ ಚುನಾವಣೆಗೂ ನಿಲ್ಲಬಾರದು ಎಂಬ ಕಾನೂನು ಮಾಡಿ. ಮುಂದೆ ಯಾವ ಸರ್ಕಾರಕ್ಕೂ ಈ ಪರಿಸ್ಥಿತಿ ಬರುವುದು ಬೇಡ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಸ್ಪೀಕರ್‌ಗೆ ಸಾ.ರಾ.ಮಹೇಶ್ ಮನವಿ ಮಾಡಿದರು. ಇದಕ್ಕೆ ಬಿಜೆಪಿ ಸದಸ್ಯರು ನಕ್ಕಾಗ, “ನಿಮ್ಮಲ್ಲೂ ಮುಂದಿನ ದಿನಗಳಲ್ಲಿ ಅತೃಪ್ತಿ ಎದುರಿಸುವ ಸಂದರ್ಭ ಬಂದಾಗ ಸಹಾಯವಾಗಲಿ ಎಂದು ಹೇಳಿದೆ’ ಎಂದರು.