ಬೆಂಗಳೂರು: ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ರವಿ ಗುರುವಾರ ಚಿಕ್ಕಜಾಲ ಸೇರಿದಂತೆ ಕ್ಷೇತ್ರದ ವಿವಿಧೆಡೆ ರೋಡ್ ಶೋ ಹಾಗೂ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದರು.
ಪಕ್ಷದ ಪಾಲಿಕೆ ಸದಸ್ಯರು ಹಾಗೂ ಮುಖಂಡರ ಜತೆಗೂಡಿ ಪಾದಯಾತ್ರೆ ನಡೆಸಿದ ಅವರು, ಈ ಬಾರಿ ತಮಗೆ ಅವಕಾಶ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಾಲಿ ಶಾಸಕರ ನಿರ್ಲಕ್ಷ್ಯದಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದು, ಜನರು ಬೇಸತ್ತಿದ್ದಾರೆ. ಈ ಬಾರಿ ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದು, ತಮ್ಮ ಗೆಲುವು ಖಚಿತ ಎಂದು ಹೇಳಿದರು.
ಅಧಿಕಾರ ಇಲ್ಲದಿದ್ದರೂ 10 ವಾಟರ್ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಬವಣೆಗೆ ಸ್ಪಂದಿಸಿದ್ದೇನೆ. ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕಾವೇರಿ 4 ನೇ ಹಂತದಲ್ಲಿ ಯೋಜನೆ ಕ್ಷೇತ್ರದ ಐದು ವಾರ್ಡ್‌ಗೆ ಲಭ್ಯವಾಗುವಂತೆ ಶ್ರಮಿಸಿದ್ದೇನೆ.
ಅರ್ಕಾವತಿ ಲೇಔಟ್ ನಿರ್ಮಾಣದಲ್ಲಿ ಭೂಮಿ ಕಳೆದುಕೊಂಡು ಪರಿಹಾರ ಸಿಗದೆ ಒದ್ದಾಡುತ್ತಿದ್ದ ರೈತರಿಗೆ ನೆರವಾಗಿದ್ದೇನೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರದಿಂದ 10 ಕೋಟಿ ರೂ. ಅನುದಾನ ತಂದು ಕ್ಷೇತ್ರದ ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯಗಳಾಗುವಂತೆ ಮಾಡಿದ್ದೇನೆ. ಹೀಗಾಗಿ, ತಮಗೆ ಆಶೀರ್ವಾದ ಮಾಡುವಂತೆ ಕೋರಿದರು.
ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ನನ್ನದೇ ಆದ ಕಲ್ಪನೆ ಇಟ್ಟುಕೊಂಡಿದ್ದೇನೆ. ಇದಕ್ಕಾಗಿಯೇ ಜನರಿಂದಲೇ ” ಪ್ರಣಾಳಿಕೆ ಸಿದ್ಧಪಡಿಸಿದ್ದೇನೆ’ ಆ ಭರವಸೆಗಳನ್ನು ಈಡೇರಿಸುತ್ತೇನೆ. ಕ್ಷೇತ್ರ ವ್ಯಾಪ್ತಿಯ ಎಲ್ಲ ಕೆರೆಗಳ ಅಭಿವೃದ್ಧಿ ಮಾಡಿ ಅಂತರ್ಜಲ ಮಟ್ಟ ಹೆಚ್ಚಿಸುವುದು. ಕ್ಷೇತ್ರದಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಾಣ ಮಾಡುವುದು. ಬಿಜೆಪಿ ಅಧಿಕಾರಕ್ಕೆ ಬಂದರೆ ಜಯನಗರ ಹೃದ್ರೋಗ ಆಸ್ಪತ್ರೆಯ ಒಂದು ಶಾಖೆ ಈ ಭಾಗದಲ್ಲಿ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.