Advertisement

ಜೆಡಿಎಸ್‌ಗೆ ಜಿಲ್ಲೆಯನ್ನು ಅಡವಿಟ್ಟ ಶಾಸಕರು: ಟೀಕೆ

07:08 AM Feb 08, 2019 | Team Udayavani |

ಮಂಡ್ಯ: ಜೆಡಿಎಸ್‌ನ ಏಳು ಶಾಸಕರು ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್‌ಗೆ ಅಡವಿಟ್ಟಿದ್ದಾರೆ ಎಂದು ಬಿಜೆಪಿ ಮುಖಂಡ ಡಾ.ಸಿದ್ದರಾಮಯ್ಯ ಟೀಕಿಸಿದರು. ಭತ್ತ ಖರೀದಿ ಕೇಂದ್ರ ತೆರೆದಿಲ್ಲ, ಹಾಲಿನ ದರ ಪ್ರತಿ ಲೀಟರ್‌ಗೆ 2 ರೂ. ಕಡಿತಗೊಳಿಸಿದ್ದು, ರೈತರು ಪೂರೈಸಿದ ಕಬ್ಬಿಗೆ ಸಕಾಲದಲ್ಲಿ ಹಣವನ್ನೂ ನೀಡುತ್ತಿಲ್ಲ. ಇದಾವುದನ್ನು ಸರ್ಕಾರದ ಎದುರು ಪ್ರಶ್ನಿಸುವ ಎದೆಗಾರಿಕೆಯನ್ನೇ ಪ್ರದರ್ಶಿಸದೆ ಆತ್ಮಗೌರವ ಕಳೆದುಕೊಂಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

Advertisement

ಹೊರಗಿನವರ ಪ್ರಾಬಲ್ಯಕ್ಕೆ ಮಣಿದಿರುವ ಶಾಸಕರು, ಜಿಲ್ಲೆಯ ಅಭಿವೃದ್ಧಿ ಬಗ್ಗೆ ಯಾವುದೇ ಚಕಾರ ಎತ್ತುತ್ತಿಲ್ಲ. ಕೆ.ವಿ.ಶಂಕರಗೌಡ, ಎಸ್‌.ಎಂ.ಕೃಷ್ಣ, ಜಿ.ಮಾದೇಗೌಡರಂತ ಪ್ರಬಲ ನಾಯಕತ್ವದ ಕೊರತೆಯನ್ನು ಜಿಲ್ಲೆ ಎದುರಿಸುತ್ತಿದೆ. ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹೊರಗಿನವರ ಪ್ರಾಬಲ್ಯಕ್ಕೆ ಜಿಲ್ಲೆಯೊಳಗೆ ಅವಕಾಶ ನೀಡಿರಲಿಲ್ಲ. ಅವರ ನಂತರ ಹೊರಗಿನವರ ಮರ್ಜಿಗೆ ಸಿಲುಕಿದ ಜಿಲ್ಲೆ ಅಭಿವೃದ್ಧಿಯಿಂದ ವಂಚಿತವಾಗಿದೆ ಎಂದರು.

ಅಭ್ಯರ್ಥಿ ತೀರ್ಮಾನವಾಗಿಲ್ಲ: ಲೋಕಸಭಾ ಚುನಾವಣಾ ಅಭ್ಯರ್ಥಿ ಕುರಿತು ಹೈಕಮಾಂಡ್‌ಗೆ ಬಿಟ್ಟ ವಿಚಾರ. ವರಿಷ್ಠರು ನನಗೆ ಟಿಕೆಟ್ ಕೊಡುವ ಭರವಸೆ ನೀಡಿದ್ದಾರೆ. ಅದರಂತೆ ನಾನು ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ಅಂತಿಮ ಹಂತದಲ್ಲಿ ಟಿಕೆಟ್ ಕೊಡದಿದ್ದರೂ ಬೇಜಾರಿಲ್ಲ. ಪಕ್ಷ ಯಾರಿಗೆ ಟಿಕೆಟ್ ನೀಡುವುದೋ ಅವರ ಪರ ಕೆಲಸ ಮಾಡುವ ಭರವಸೆ ನೀಡಿದರು.

ಹೊರಗಿನವರಿಗೆ ಅವಕಾಶ ಬೇಡ: ಹೊರಗಿನವರ ಪ್ರಾಬಲ್ಯಕ್ಕೆ ಜಿಲ್ಲೆ ಈಗಾಗಲೇ ಸಿಲುಕಿ ಅಭಿವೃದ್ಧಿಯಿಂದ ವಂಚಿತವಾಗಿದೆ. ಹಾಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೊರಗಿನವರ ಪ್ರಾಬಲ್ಯ ಕಡಿಮೆ ಮಾಡಬಾರದು. ಅವರಿಗೆ ಇಲ್ಲಿ ನೆಲೆಯೂರುವುದಕ್ಕೆ ಅವಕಾಶ ನೀಡುವುದು ಬೇಡ. ಸ್ಥಳೀಯ ನಾಯಕತ್ವಕ್ಕೆ ಮಣೆ ಹಾಕುವುದರೊಂದಿಗೆ ಜಿಲ್ಲೆಯ ಜನರು ಹೊಸ ನಾಯಕತ್ವದ ಬೆಳವಣಿಗೆಗೆ ಸಹಕರಿಸುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಶಕ್ತಿ ತುಂಬಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next