ಚನ್ನರಾಯಪಟ್ಟಣ: ಚರಂಡಿ ಕಾಮಗಾರಿ ಹಾಗೂ ರಸ್ತೆ ಕಾಮಗಾರಿಗೆ ಹೆಚ್ಚು ಮುತುವರ್ಜಿ ತೋರಿಸುವ ಶಾಸಕ ಸಿ.ಎನ್.ಬಾಲಕೃಷ್ಣ ಅವರು ಏತನೀರಾವರಿ ಯೋಜನೆಗೆ ಕೃಷಿ ಭೂಮಿ ನೀಡಿದ ರೈತರಿಗೆ ಭೂಪರಿಹಾರ ಕೊಡಿಸಲು ಏಕೆ ಮುಂದಾಗುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಪ್ರಶ್ನಿಸಿದರು.
ತಾಲೂಕಿನ ಕುರುಬರ ಕಾಳೇಬಳಿ ಹಿರೀಸಾವೆ ಹಾಗೂ ಜುಟ್ಟನಹಳ್ಳಿ ಏತನೀರಾವರಿ ಯೋಜನೆಯ ಯಂತ್ರಾಗಾರ ವೀಕ್ಷಣೆ ಮಾಡಿ ಮಾತನಾಡಿದ ಅವರು, ಜುಟ್ಟನಹಳ್ಳಿ ಏತನೀರಾವರಿ ಯೋಜನೆಯಲ್ಲಿ ಕೃಷಿ ಭೂಮಿ ಹಾಗೂ ಫಲನೀಡುವ ತೆಂಗಿನ ಮರ ಕಳೆದುಕೊಂಡಿರುವರಿಗೆ ಪರಿಹಾರ ಕೊಡಿಸಲು ಮುಂದಾಗದಿರಲು ಕಾರಣ ತಿಳಿಯುತ್ತಿಲ್ಲ ಎಂದರು.
ಜನ ಪ್ರತಿನಿಧಿಗಳನ್ನು ಆಹ್ವಾನಿಸಿಲ್ಲ: ಬಿಜೆಪಿ ಸರ್ಕಾರ ಮಾಡಿದ ನುಗ್ಗೇಹಳ್ಳಿ ಏತನೀರಾವರಿ ಯೋಜನೆಯನ್ನು ತಾವು ಮಾಡಿದ್ದು ಎಂದು ಹೇಳುವುದು ಅಧಿಕಾರಿಗಳು, ಜಿಲ್ಲಾ ಮಂತ್ರಿ, ವಿಧಾನ ಪರಿಷತ್ ಸದಸ್ಯರು, ತಾಲೂಕು, ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರನ್ನು ಆಹ್ವಾನಿಸದೇ ಪ್ರಾಯೋಗಿಕ ನೀರು ಎತ್ತುವ ಕಾರ್ಯಕ್ಕೆ ತಮ್ಮ ಪಕ್ಷದ ಮುಖಂಡರೊಂದಿಗೆ ತೆರಳಿ ಚಾಲನೆ ನೀಡಿ ತಾವು ಮಾಡಿಸಿದ್ದು ಎಂದು ಸುಳ್ಳು ಹೇಳುತ್ತಾರೆ ಎಂದು ಟೀಕಿಸಿದರು.
ಜನರ ದಿಕ್ಕು ತಪ್ಪಿಸುತ್ತಿದ್ದಾರೆ: ತಾಲೂಕಿನ ಜನರ ಹಾಗೂ ರೈತರ ಹಿತಕ್ಕಾಗಿ ಹಿರೀಸಾವೆ ಹಾಗೂ ಜುಟ್ಟನಹಳ್ಳಿ ಏತನೀರಾವರಿ ಯೋಜನೆ ಜಾರಿಗೆ ತರಬೇಕೆಂದು ಅಂದಿನ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ ದಿ. ಶ್ರೀಕಂಠಯ್ಯ ಕಾಂಗ್ರೆಸ್ ಪಕ್ಷ ತೊರೆದು ಬರಡು ಭೂಮಿಯನ್ನು ನೀರಾವರಿ ಮಾಡಲು ಮುಂದಾಗಿದ್ದ ಭಗೀರಥ ಈ ವಿಷಯ ತಾಲೂಕಿನ ಜನತೆಗೆ ತಿಳಿದಿದೆ. ಆದರೆ ಈ ಯೋಜನೆ ತಮ್ಮ ಶ್ರಮದಿಂದ ಇಂದು ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳುವ ಮೂಲಕ ಕ್ಷೇತ್ರದ ಮತದಾರರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹೋರಾಟದ ಫಲ: ಹಿರೀಸಾವೆ-ಜಟ್ಟನಹಳ್ಳಿ ಏತನೀರಾವರಿ ಯೋಜನೆ ಇಂದಿನ ನೆನ್ನೆಯದಲ್ಲ ಅದು ಬಹಳ ದಿವಸಗಳ ಬೇಡಿಕೆ ಇದಕ್ಕಾಗಿ ಹಿರೀಸಾವೆ ಭಾಗದ ರೈತರು ವಿಧಾನ ಸೌಧ ಚಲೋ ಹಮ್ಮಿಕೊಂಡು ಹಿರೀಸಾವೆಯಿಂದ ಬೆಂಗಳೂರಿನ ವರೆಗೆ ಪಾದಯಾತ್ರೆ ಮಾಡಿದ್ದಾರೆ.
ಇದರ ಫಲವಾಗಿ ಅಂದಿನ ಸರ್ಕಾರ ಮಂಜೂರು ಮಾಡಿದ್ದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಣ ಮಂಜೂರು ಮಾಡಿದೆ ಎನ್ನುವುದು ಶಾಸಕರು ಮರೆಯಬಾರದು ಎಂದು ಆಕ್ರೋಶ ವ್ಯಕ್ತ ಪಡಿಸಿದರು. ತಾಲೂಕು ಪಂಚಾಯಿತಿ ಅಧ್ಯಕ್ಷೆ ಇಂದಿರಾ, ಜುಟ್ಟನಹಳ್ಳಿ-ಹಿರೀಸಾವೆ ಏತನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಮಹೇಶ, ಯುವ ಕಾಂಗ್ರೆಸ್ ಅಧ್ಯಕ್ಷ ಯುವರಾಜ, ಪುರಸಭೆ ಸದಸ್ಯ ಪ್ರಕಾಶ ಮೊದಲಾದವರು ಉಪಸ್ಥಿತರಿದ್ದರು.