Advertisement

ಮತ್ತೆ ಮೊಳಗಿದ ಉ.ಕ.‌ ಅನ್ಯಾಯದ ಕೂ‌ಗು‌

06:00 AM Dec 14, 2018 | Team Udayavani |

ಬೆಳಗಾವಿ: ಎಸ್‌.ಆರ್‌.ಪಾಟೀಲರಿಗೆ ಸಭಾಪತಿ ಸ್ಥಾನ ಕೈತಪ್ಪಿರುವುದು ರಾಜ್ಯದ ಕಾಂಗ್ರೆಸ್‌ ನಾಯಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಈ ನಿರ್ಧಾರವನ್ನು ಶಾಸಕಾಂಗ ಪಕ್ಷದ ಸಭೆಯಲ್ಲೂ ಪ್ರಸ್ತಾಪಿಸಿ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಗಮನಕ್ಕೆ ತರಲು ಉತ್ತರ ಕರ್ನಾಟಕ ಭಾಗದ ಕಾಂಗ್ರೆಸ್‌ ಶಾಸಕರು ನಿರ್ಧರಿಸಿದ್ದಾರೆ. ಮಾಜಿ ಸಚಿವ, ಕಾಂಗ್ರೆಸ್‌ನ ಹಿರಿಯ ನಾಯಕ ಎಚ್‌.
ಕೆ.ಪಾಟೀಲ್‌ ಅವರನ್ನು ಗುರುವಾರ ಭೇಟಿ ಮಾಡಿದ ಉತ್ತರ ಕರ್ನಾಟಕ ಭಾಗದ ಕಾಂಗ್ರೆಸ್‌ ಶಾಸಕರು, ಪಕ್ಷದ ಈ ನಿರ್ಧಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆಂದು ತಿಳಿದು ಬಂದಿದೆ. 

Advertisement

ದಕ್ಷಿಣ ಕರ್ನಾಟಕ ಭಾಗಕ್ಕಿಂತ ಉತ್ತರ ಕರ್ನಾಟಕ ಭಾಗದಲ್ಲಿಯೇ ಹೆಚ್ಚಿನ ಸಂಖ್ಯೆಯ ಕಾಂಗ್ರೆಸ್‌ ಶಾಸಕರು ಆಯ್ಕೆಯಾಗಿದ್ದಾರೆ. ಆದರೂ, ಎಲ್ಲಾ ಅಧಿಕಾರವೂ ದಕ್ಷಿಣ ಕರ್ನಾಟಕ ಭಾಗದವರ ಕೈಯಲ್ಲಿದೆ. ಪಕ್ಷ ಹಾಗೂ ಸರ್ಕಾರ ಎರಡೂ ಅಧಿಕಾರಗಳು ಒಂದೇ ಭಾಗದವರ ಕೈಯಲ್ಲಿರುವುದರಿಂದ ಆಡಳಿತ ಪಕ್ಷದಲ್ಲಿದ್ದರೂ ಯಾವುದೇ ಮರ್ಯಾದೆ ಇಲ್ಲದಂತಾಗಿದೆ. ಜೆಡಿಎಸ್‌ಗೆ ಉತ್ತರ ಕರ್ನಾಟಕ ಭಾಗದಲ್ಲಿ ಜನ ಬೆಂಬಲ ನೀಡಿಲ್ಲ ಎನ್ನುವ ಕಾರಣಕ್ಕೆ ಅವರು ಉತ್ತರ ಕರ್ನಾಟಕ ಭಾಗವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ.

ಸರ್ಕಾರದ ಪಾಲುದಾರರಾಗಿರುವ ಕಾಂಗ್ರೆಸ್‌, ಉತ್ತರ ಕರ್ನಾಟಕ ಭಾಗದಲ್ಲಿ ಪ್ರಬಲವಾಗಿದ್ದು, ಆಗಿರುವ ಅನ್ಯಾಯವನ್ನು ಸರಿಪಡಿಸುವ ಯತ್ನ ಮಾಡಬೇಕು. ಅದನ್ನು ಬಿಟ್ಟು ಕಾಂಗ್ರೆಸ್‌ ಪಕ್ಷವೂ ಉತ್ತರ ಕರ್ನಾಟಕ ವನ್ನು ನಿರ್ಲಕ್ಷಿಸಿದರೆ, ಮುಂಬರುವ ಚುನಾವಣೆಯಲ್ಲಿ ಯಾವ ಮುಖ ಇಟ್ಟುಕೊಂಡು ಜನರ ಬಳಿ ಮತ ಕೇಳುವುದು ಎಂದು ಖಾರವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆಂದು ತಿಳಿದು ಬಂದಿದೆ. ಜೆಡಿಎಸ್‌ ನಾಯಕರಾಗಿದ್ದ ಬಸವರಾಜ ಹೊರಟ್ಟಿ ಉತ್ತರ ಕರ್ನಾಟಕ ಭಾಗಕ್ಕೆ ಸೇರಿದವರು.

ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿಯೇ ಉತ್ತರ ಕರ್ನಾಟಕ ಭಾಗದ ನಾಯಕರಾದ ಅವರನ್ನು ಬದಲಾಯಿಸಿರುವುದು ಉತ್ತರ ಕರ್ನಾಟಕ ಭಾಗದ ಹಿರಿಯ ನಾಯಕರಿಗೆ ಅಪಮಾನ ಮಾಡಿದಂತಾಗಿದೆ. ಜತೆಗೆ, ಪಕ್ಷದ 
ಸೂಚನೆಯಂತೆ ಎಸ್‌.ಆರ್‌. ಪಾಟೀಲ್‌ ಅವರನ್ನು ಸಭಾಪತಿ ಮಾಡುವುದಾಗಿ ಭರವಸೆ ನೀಡಿ, ಕೊನೆ ಘಳಿಗೆಯಲ್ಲಿ ಅವರಿಗೆ ಅವಕಾಶ ತಪ್ಪಿಸಿರುವುದು ಉತ್ತರ ಕರ್ನಾಟಕ ಭಾಗದ ಬಗ್ಗೆ ಪಕ್ಷದ ನಾಯಕರಿಗೆ ಇರುವ ನಿರ್ಲಕ್ಷ್ಯ ಧೋರಣೆಯನ್ನು ಎತ್ತಿ ತೋರಿಸುತ್ತದೆ ಎಂದು
ಕಿಡಿ ಕಾರಿದ್ದಾರೆಂದು ತಿಳಿದು ಬಂದಿದೆ. ಈ ಕುರಿತು ಪಕ್ಷದ ರಾಜ್ಯ ನಾಯಕರು ಹಾಗೂ ಹೈಕಮಾಂಡ್‌ ಗಮನಕ್ಕೆ ತಂದು ಉತ್ತರ ಕರ್ನಾಟಕಕ್ಕೆ ಮೇಲಿಂದ ಮೇಲೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಡ ಹೇರಬೇಕೆಂದು ಎಚ್‌. ಕೆ.ಪಾಟೀಲರನ್ನು ಆಗ್ರಸಿದ್ದಾರೆ ಎಂದು ತಿಳಿದು ಬಂದಿದೆ.

ಎಂ.ಬಿ.ಪಾಟೀಲ್‌ರಿಂದ ಬಹಿರಂಗ ಆಕ್ರೋಶ ಇದೇ ವೇಳೆ, ಎಸ್‌.ಆರ್‌.ಪಾಟೀಲರನ್ನು ಕೈ ಬಿಟ್ಟಿರುವ ಪಕ್ಷದ ತೀರ್ಮಾನದ ಬಗ್ಗೆ
ಮಾಜಿ ಸಚಿವ ಎಂ.ಬಿ.ಪಾಟೀಲ್‌, ಬಹಿರಂಗವಾಗಿಯೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಉತ್ತರ
ಕರ್ನಾಟಕ ಭಾಗಕ್ಕೆ ಅನ್ಯಾಯ ವಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿರುವ ಸಂದರ್ಭದಲ್ಲಿಯೇ ಎಸ್‌. ಆರ್‌.ಪಾಟೀಲರಿಗೆ ಭರವಸೆ ಮೂಡಿಸಿ, ಸಭಾಪತಿ ಸ್ಥಾನ ಕೈತಪ್ಪುವಂತೆ ಮಾಡಿರುವುದು ಉತ್ತರ ಕರ್ನಾಟಕ ಹಾಗೂ ಲಿಂಗಾಯತ ಸಮುದಾಯಕ್ಕೆ ಮಾಡಿರುವ ಅಪಮಾನ ಎಂದು ಆರೋಪಿಸಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ, ಶಾಸಕಾಂಗ ಪಕ್ಷದ ನಾಯಕ, ವಿಧಾನಸಭೆ ಸಭಾಧ್ಯಕ್ಷ, ಪರಿಷತ್‌ ಸಭಾಪತಿ ಸೇರಿ ಬಹುತೇಕ ಎಲ್ಲ ಸ್ಥಾನಗಳನ್ನೂ ದಕ್ಷಿಣ ಕರ್ನಾಟಕದವರಿಗೆ ನೀಡ ಲಾಗಿದೆ. ಉತ್ತರ ಕರ್ನಾಟಕ ಭಾಗ ದಿಂದ ಕಾಂಗ್ರೆಸ್‌ನಲ್ಲಿ 41 ಶಾಸಕರು ಆಯ್ಕೆಯಾಗಿದ್ದರೆ, ದಕ್ಷಿಣ ಕರ್ನಾ
ಟಕದಿಂದ 36 ಶಾಸಕರು ಮಾತ್ರ ಆಯ್ಕೆಯಾಗಿದ್ದಾರೆ. ಆದರೆ, ಉ.ಕ ಭಾಗಕ್ಕೆ 5 ಮಂತ್ರಿಸ್ಥಾನ ನೀಡಿದ್ದರೆ, ದಕ್ಷಿಣ ಕರ್ನಾಟಕದ 9 ಶಾಸಕರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ಅಷ್ಟೇ ಅಲ್ಲದೆ, ಪ್ರಮುಖ ಇಲಾಖೆಗಳಾದ ಇಂಧನ, ಲೋಕೋಪಯೋಗಿ, ಜಲ ಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಇಲಾಖೆಗಳಿಗೆ ದಕ್ಷಿಣ ಕರ್ನಾಟಕದವರೇ ಸಚಿವರಾಗಿದ್ದಾರೆ. ಈ ಮೂಲಕ ಎಲ್ಲಾ
ವಿಭಾಗಗಳಲ್ಲಿಯೂ ಉತ್ತರ ಕರ್ನಾಟಕ ಭಾಗಕ್ಕೆ ಸಮ್ಮಿಶ್ರ ಸರ್ಕಾರದಲ್ಲಿ ಅನ್ಯಾಯ ಆಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Advertisement

ಎಚ್ಕೆ ಭರವಸೆ
ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ಎಚ್‌. ಕೆ. ಪಾಟೀಲ್‌, ಉತ್ತರ ಕರ್ನಾಟಕ ಭಾಗದ ಶಾಸಕರ ಭಾವನೆಗಳನ್ನು ರಾಜ್ಯ
ನಾಯಕರು ಹಾಗೂ ವಿಶೇಷವಾಗಿ ರಾಹುಲ್‌ ಗಾಂಧಿ ಅವರ ಗಮನಕ್ಕೆ ತಂದು ಅನ್ಯಾಯ ತಡೆ ಗಟ್ಟಲು ಮನವಿ ಮಾಡುತ್ತೇನೆ. ಶೀಘ್ರವೇ ಈ ಬಗ್ಗೆ ಹೈ ಕಮಾಂಡ್‌ಗೆ ಪತ್ರ ಬರೆಯುತ್ತೇನೆಂದು ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next