ಧಾರವಾಡ: ಇಲ್ಲಿಯ ಹೊಸಯಲ್ಲಾಪುರದ ಕೋಳಿಕೆರೆಗೆ ಶಾಸಕರಾದ ಅರವಿಂದ ಬೆಲ್ಲದ ಹಾಗೂ ಅಮೃತ ದೇಸಾಯಿ ಶನಿವಾರ ಭೇಟಿ ನೀಡಿ ಈಗಿನ ಪರಿಸ್ಥಿತಿ ಹಾಗೂ ಮುಂದೆ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಕೋಳಿಕೆರೆ ಈಗ ಗಟಾರು ಕೆರೆ ಎಂಬಂತಾಗಿದ್ದು, ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿದೆ. ಸುತ್ತಲಿನ ಜನರಲ್ಲಿ ಅನಾರೋಗ್ಯದ ಭೀತಿ ಎದುರಾಗಿದೆ ಎಂಬ ದೂರುಗಳು ಬಂದಿವೆ. ಹೀಗಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲು ಭೇಟಿ ನೀಡಲಾಗಿದೆ ಎಂದು ತಿಳಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬೆಲ್ಲದ, ಮುಂದಿನ ದಿನಗಳಲ್ಲಿ ಕೆರೆ ನೀರನ್ನು ಬಳಸಿಕೊಳ್ಳುವ ಅವಶ್ಯಕತೆ ಇದ್ದು, ಇದಕ್ಕಾಗಿ ಎಸ್‌ಟಿಪಿ ಘಟಕ ಸ್ಥಾಪಿಸುವ ಉದ್ದೇಶವಿದೆ. ಈ ಉದ್ದೇಶಕ್ಕೆ ಈಗಿರುವ ಹಣದ ಜೊತೆಗೆ ಇನ್ನೂ ಹೆಚ್ಚಿನ ಆರ್ಥಿಕ ನೆರವು ಬೇಕಿದೆ. ಕ್ರಿಯಾಯೋಜನೆ ರೂಪಿಸಿ ಹೆಚ್ಚಿನ ಅನುದಾನ ಪಡೆದು ಕೆರೆ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಈ ಸ್ಥಳದಲ್ಲಿ ಎಸ್‌ಟಿಪಿ ಘಟಕ ಸಿದ್ಧವಾದರೆ ಕೆರೆ ನೀರು ಶುದ್ಧೀಕರಣ ಮಾಡಿ ಬಿಡಬಹುದು. ಇದರಿಂದ ಸುತ್ತಲಿನ ಜನರಿಗೂ ಅನುಕೂಲ ಮಾತ್ರವಲ್ಲದೇ ನೀರಾವರಿಗೂ ಅನುಕೂಲವಾಗಲಿದೆ. ಜೊತೆಗೆ ಪ್ರವಾಸಿ ತಾಣವೂ ಆಗಲಿದೆ. ಈ ನಿಟ್ಟಿನಲ್ಲಿ ಪಾಲಿಕೆ ಆಯುಕ್ತರು, ನಗರಾಭಿವೃದ್ಧಿ ಯೋಜನೆ ಅಧಿಕಾರಿಗಳು ಹಾಗೂ ಅಮೃತ ಯೋಜನೆ ಅಧಿಕಾರಿಗಳೊಂದಿಗೆ ಶೀಘ್ರದಲ್ಲಿ ಮತ್ತೆ ಭೇಟಿ ನೀಡಲಾಗುವುದು ಎಂದರು.
ಗೌರವಾರ್ಪಣೆ: ನಂತರ ಪಂಡಿತ್ ಬಸವರಾಜ ರಾಜಗುರು ಅವರ ಪುಣ್ಯತಿಥಿ ಅಂಗವಾಗಿ ಅವರ ಸಮಾಧಿ ಸ್ಥಳಕ್ಕೆ ತೆರಳಿದ ಶಾಸಕರಾದ ಅರವಿಂದ ಬೆಲ್ಲದ ಮತ್ತು ಅಮೃತ ದೇಸಾಯಿ ಪುಷ್ಪಾರ್ಚನೆ ಸಲ್ಲಿಸಿದರು. ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಪಾಲಿಕೆ ಆಯುಕ್ತ ಶಕೀಲ್ ಅಹ್ಮದ್, ಪಂ| ರಾಜಗುರು ಟ್ರಸ್ಟ್ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಭಾರತಿ ದೇವಿ ರಾಜಗುರು, ಪಾಲಿಕೆ ಸದಸ್ಯ ಶಂಕರ ಶೆಳಕೆ, ಸಿದ್ಧಲಿಂಗೇಶ ರಂಗಣ್ಣವರ, ನಿಜಗುಣಿ ರಾಜಗುರು ಮೊದಲಾದವರಿದ್ದರು. ಇದೇ ವೇಳೆ ಶಾಸಕ ಅರವಿಂದ ಬೆಲ್ಲದ ಅವರು ಹೊಸಯಲ್ಲಾಪುರದ ಗಂಗೂಬಾಯಿ ಹಾನಗಲ್ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದರು.