ಬೆಂಗಳೂರು: ಒಂದೊಮ್ಮೆ ಸಮ್ಮಿಶ್ರ ಸರ್ಕಾರ ಪತನಗೊಂಡರೆ ಸರ್ಕಾರ ರಚಿಸುವ ಉದ್ದೇಶದಿಂದ ಬಿಜೆಪಿಯ ಎಲ್ಲ ಶಾಸಕರು ಒಟ್ಟಾಗಿದ್ದಾರೆ. ನಮ್ಮ ರಾಜಕೀಯ ತೀರ್ಮಾನಗಳನ್ನು ಮಾಧ್ಯಮಗಳ ಮುಂದೆ ಹೇಳುವುದಿಲ್ಲ. ಬೇಕಾದಾಗ ಬ್ರೇಕಿಂಗ್ ನ್ಯೂಸ್ ನೀಡುತ್ತೇವೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿಕೆ ನೀಡಿದ್ದು, ಸರ್ಕಾರ ರಚನೆಗೆ ಬಿಜೆಪಿ ಕಸರತ್ತು ನಡೆಸಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ನಗರದ ನಾಗಸಂದ್ರದ ಬಳಿ ನೂತನವಾಗಿ ಆರಂಭವಾಗಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಮಂಗಳವಾರ ಪಾಲ್ಗೊಂಡ ಬಳಿಕ ಪ್ರತಿಕ್ರಿಯಿಸಿದ ಅವರು, ನಮಗೆ ಕಾಯಿಲೆಯೇ ಇಲ್ಲ. ಹಾಗಾಗಿ ಆಪರೇಷನ್ ಅಗತ್ಯವಿಲ್ಲ. ಆದರೆ ಕಾಂಗ್ರೆಸ್, ಜೆಡಿಎಸ್‌ಗೆ ಕಾಯಿಲೆಯಿದ್ದು, ಅವರಿಗೆ ಅಪರೇಷನ್ ಆಗಬೇಕಿದೆ. ಕಾಂಗ್ರೆಸ್, ಜೆಡಿಎಸ್‌ನವರು ಏನು ಮಾಡಲೂ ಹೇಸುವವರಲ್ಲ. ಹಾಗಾಗಿ ನಮ್ಮ ಶಾಸಕರನ್ನು ಸರಿಯಾಗಿ ಇಟ್ಟುಕೊಳ್ಳಬೇಕಿದೆ ಎಂದರು.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಬಳಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಸಕರು, ಸಂಸದರನ್ನು ಸಜ್ಜುಗೊಳಿಸುವ ಕಾರ್ಯ ನಡೆದಿತ್ತು. ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ದೊಡ್ಡ ರಾಜಕೀಯ ರಾದ್ಧಾಂತ ನಡೆಯುತ್ತಿರುವುದು ಗೊತ್ತಾಯಿತು. ಕಾಂಗ್ರೆಸ್- ಜೆಡಿಎಸ್ ಸಂಬಂಧ ಚೆನ್ನಾಗಿಲ್ಲ. ಡೈವರ್ಸ್ ಹಂತಕ್ಕೆ ತಲುಪಿರುವುದು ತಿಳಿಯಿತು. ರಾಜ್ಯದಲ್ಲಿ 104 ಸ್ಥಾನ ಪಡೆದ ನಮಗೂ ಜವಾಬ್ದಾರಿಯಿದೆ. ರಾಜ್ಯದಲ್ಲಿ ಯಾವುದೇ ರಾಜಕೀಯ ಏರುಪೇರಾದರೂ ಬದಲಿ ವ್ಯವಸ್ಥೆ ಕಲ್ಪಿಸಿ ಜನರಿಗೆ ಸರ್ಕಾರಿ ಸೇವೆಗಳನ್ನು ಸಕಾಲದಲ್ಲಿ ಒದಗಿಸುವುದು ಹಾಗೂ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲೂ ಇದೆ. ಹಾಗಾಗಿ ನಮ್ಮವರೆನ್ನೆಲ್ಲಾ ಒಟ್ಟಿಗೆ ಇಟ್ಟುಕೊಂಡಿದ್ದೇವೆ. ಒಂದೊಮ್ಮೆ ಪೂರಕ ವಾತಾವರಣ ನಿರ್ಮಾಣವಾದರೆ ಮುಂದಿನ ನಡೆಯೇನು ಎಂಬುದನ್ನು ಚರ್ಚಿಸಿ ನಿರ್ಧರಿಸಲಾಗುವುದು. 37 ಶಾಸಕರಿದ್ದವರು ರಾಜ್ಯ ಆಳಬಹುದಾದರೆ 104 ಶಾಸಕರಿರುವವರು ರಾಜ್ಯ ಆಳಬಾರದೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್, ಜೆಡಿಎಸ್‌ನವರು ಮೊದಲು ತಮ್ಮ ಮನೆಯನ್ನು ಸರಿಯಾಗಿಟ್ಟುಕೊಳ್ಳಬೇಕು. ತಮ್ಮ ಮನೆ ಮಕ್ಕಳನ್ನು ಸರಿಯಾಗಿ ಇಟ್ಟುಕೊಳ್ಳುವ ಯೋಗ್ಯತೆ ಇಲ್ಲದವರು ಬಿಜೆಪಿ ‘ಆಪರೇಷನ್ ಕಮಲ’ ನಡೆಸುತ್ತಿದೆ ಎಂದು ಆರೋಪಿಸುವುದು ಸರಿಯಲ್ಲ. ಅವರ ಪಕ್ಷದವರು ನಮ್ಮೊಂದಿಗೆ ಏಕೆ ಬಿಡಬೇಕು. ಒಂದೊಮ್ಮೆ ಸರ್ಕಾರ ಪತನವಾದರೆ ಸರ್ಕಾರ ರಚಿಸುವ ಉದ್ದೇಶದಿಂದ ಎಲ್ಲ ಶಾಸಕರು ಒಟ್ಟಿಗೆ ಇದ್ದಾರೆ ಎಂದು ಹೇಳಿದರು.