ಶಾಸಕ ಯಶವಂತರಾಯಗೌಡ ಅವರು ರಾಜ್ಯ ರಾಜಕಾರಣದಲ್ಲಿ ನಾಲ್ಕು ದಶಕಗಳ ಕಾಲ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಪಡನೂರ ಗ್ರಾಮದಿಂದ ಬೆಂಗಳೂರು ವಿಧಾನಸೌಧ ಪ್ರವೇಶಿಸಿದ ರಾಜಕೀಯ ಮುತ್ಸದ್ಧಿ ಇವರಾಗಿದ್ದಾರೆ.
ಮೂರು ಬಾರಿ ಜಿಪಂ ಸದಸ್ಯರಾಗಿ, ಒಂದು ಬಾರಿ ಜಿಪಂ ವಿರೋಧ ಪಕ್ಷದ ನಾಯಕರಾಗಿ, ಜಿಪಂ ಅಧ್ಯಕ್ಷರಾಗಿ, ಎರಡು ಬಾರಿ ಇಂಡಿ ತಾಲೂಕಿನ ಮರಗೂರ ಶ್ರೀ ಭೀಮಾಶಂಕರ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. 2024ರ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಚುನಾವಣೆಯಲ್ಲೂ 13 ಜನ ನಿರ್ದೇಶಕರು ಆಯ್ಕೆಯಾಗುವುದರೊಂದಿಗೆ ಜಯಭೇರಿ ಬಾರಿಸಿದ್ದಾರೆ.
ಒಂದು ಬಾರಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಅಧ್ಯಕ್ಷರಾಗಿ, ಮೂರು ಬಾರಿ ಶಾಸಕರಾಗಿ ರೂಪಿಸಿರುವ ಜನಪರ ಯೋಜನೆಗಳು, ಮಾಡಿರುವ ನೂರಾರು ಕಾರ್ಯಗಳು ಈಗಲೂ ಜನಜನಿತವಾಗಿವೆ.
2013ರಲ್ಲಿ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನೂತನ ಶಾಸಕರಾಗಿ ಒಂದೇ ಗಂಟೆಯಲ್ಲಿ ಶ್ರೀ ಸಿದ್ಧಲಿಂಗ ಮಹಾರಾಜರ ಸಂಸ್ಥಾನಮಠದಲ್ಲಿ ರೈತರಿಗೆ, ಜನರಿಗೆ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಿಸುವುದಾಗಿ ಭರವಸೆ ನೀಡಿದ್ದರು. ದೊಡ್ಡ ಮನೆತನದ ಗೌಡರ ಮಾತನ್ನು ನಂಬಿದ ಜನರು ಇವರನ್ನು ಇಂಡಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಮಾಡಿದರು. ಶಾಸಕರಾದರು. ಕ್ಷೇತ್ರದ ಜನ ಸಿದ್ಧಲಿಂಗನ ಭಕ್ತನನ್ನು ಶಾಸನಸಭೆಗೆ ಕಳಿಸಿದರು. ಗೌಡರು ಸಹಕಾರಿ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು. 2013ರಲ್ಲಿ ಅವರದೇ ಕಾಂಗ್ರೆಸ್ ಸರ್ಕಾರ ಬಂದಿದ್ದರಿಂದ ಅಂದು ಸಿಎಂ ಸಿದ್ದರಾಮಯ್ಯ ಅವರ ಮನವೊಲಿಸಿ ಅನ್ನದಾತರ ಕನಸಿನ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಚಾಲನೆ ನೀಡಿದರು. ಶಾಸಕ ಯಶವಂತರಾಯಗೌಡ ಪಾಟೀಲರು ಅವರ ಈ ಪ್ರಯತ್ನ ಕೈಗೊಳ್ಳುವ ಹಂತದಲ್ಲಿ ಶೇರು ಖರೀದಿಸಿದ 4,500 ರೈತರು ಮೃತರಾಗಿದ್ದರು. ಅವರ ಕುಟುಂಬ ಸದಸ್ಯರನ್ನು ಸಂಪರ್ಕಿಸಿ ಅಗತ್ಯ ದಾಖಲೆ ಸಂಗ್ರಹಿಸಿ ಅವರ ಸದಸ್ಯತ್ವಕ್ಕೆ ಮರುಜೀವ ನೀಡಿದ್ದಾರೆ. ಇಂಡಿ ಭಾಗದಲ್ಲಿ ಒಂದು ಸಕ್ಕರೆ ಕಾರ್ಖಾನೆ ಸ್ಥಾಪಿಸಿ ಸಂಸ್ಥಾಪಕ, ಅಧ್ಯಕ್ಷರಾಗಿ ಈವರೆಗೂ ಚುನಾವಣೆಯಲ್ಲಿ ಗೆದ್ದು ಅಭಿವೃದ್ಧಿಯ ರೂವಾರಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
2017ರಲ್ಲಿ ಭೀಮಾಶಂಕರ ಕಾರ್ಖಾನೆ ಆರಂಭದಿಂದ ಇಲ್ಲಿಯವರೆಗೆ 307 ಕೋಟಿ ಸಾಲ, ಬಡ್ಡಿ ಮರುಪಾವತಿ ಮಾಡಲಾಗಿದ್ದು, 2017-18ರಲ್ಲಿ 4 ಕೋಟಿ ರೂ. ಬಡ್ಡಿ ಮತ್ತು 4 ಕೋಟಿ ರೂ. ಸಾಲ ಸೇರಿ ಒಟ್ಟು 8 ಕೋಟಿ ರೂ., 2018-19 ರಲ್ಲಿ 23 ಕೋಟಿ ರೂ. ಬಡ್ಡಿ ಮತ್ತು 10 ಕೋಟಿ ರೂ. ಸಾಲ ಸೇರಿ ಒಟ್ಟು 33 ಕೋಟಿ ರೂ., 2019-20 ರಲ್ಲಿ 39 ಕೋಟಿ ರೂ. ಬಡ್ಡಿ ಮತ್ತು 27 ಕೋಟಿ ರೂ. ಸಾಲ ಸೇರಿ ಒಟ್ಟು 67 ಕೋಟಿ ರೂ., 2020-21ರಲ್ಲಿ 39 ಕೋಟಿ ರೂ. ಬಡ್ಡಿ ಮತ್ತು 46 ಕೋಟಿ ರೂ. ಸಾಲ ಸೇರಿ ಒಟ್ಟು 85 ಕೋಟಿ ರೂ., 2021-22ರಲ್ಲಿ 39 ಕೋಟಿ ರೂ. ಬಡ್ಡಿ ಮತ್ತು 16 ಕೋಟಿ ರೂ. ಸಾಲ ಸೇರಿ ಒಟ್ಟು 55 ಕೋಟಿ ರೂ., 2022-23 ರಲ್ಲಿ 37 ಕೋಟಿ ರೂ. ಬಡ್ಡಿ ಮತ್ತು 17 ಕೋಟಿ ರೂ. ಸಾಲ ಸೇರಿ ಒಟ್ಟು 55 ಕೋಟಿ ರೂ., ಹೀಗೆ ಒಟ್ಟು 307 ಕೋಟಿ ರೂ ಬಡ್ಡಿ ಮತ್ತು ಸಾಲ ಮರುಪಾವತಿ ಮಾಡಿದ್ದಾರೆ.
ಕಾರ್ಖಾನೆ ಪ್ರತಿದಿನ 3500 ಟನ್‌ದಿಂದ 5000 ಟನ್‌ವರೆಗೆ ಕಬ್ಬು ನುರಿಸುತ್ತಿದೆ. ಮತ್ತು ಪ್ರತಿವರ್ಷ 5 ಲಕ್ಷ ಟನ್‌ಗಿಂತಲೂ ಅ ಧಿಕ ಕಬ್ಬು ನುರಿಸಿದೆ. ನವೆಂಬರ್‌ದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಇಥೆನಾಲ್ ಘಟಕ ಆರಂಭಿಸುತ್ತಿದ್ದು, ಕಾರ್ಖಾನೆ ಪ್ರತಿದಿನ 14 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ. ಅದರಲ್ಲಿ ಹಂಗಾಮಿನಲ್ಲಿ ಕಾರ್ಖಾನೆಗೆ ಪ್ರತಿದಿನ 5 ಮೆಗಾ ವ್ಯಾಟ್ ಮತ್ತು 9 ಮೆಗಾ ವ್ಯಾಟ್ ಕೆಪಿಟಿಸಿಎಲ್‌ಗೆ ನೀಡಲಾಗುತ್ತಿದೆ.
ರಾಜ್ಯ ರಾಜಕಾರಣದಲ್ಲಿ ನಾಲ್ಕು ದಶಕಗಳ ಕಾಲ ತಮ್ಮದೇ ಆದ ಛಾಪು ಮೂಡಿಸಿದ ಜನನಾಯಕ
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಣೆ
3ಬಾರಿ ಜಿಪಂ ಸದಸ್ಯರಾಗಿ, 1ಬಾರಿ ಜಿಪಂ ವಿಪಕ್ಷದ ನಾಯಕರಾಗಿ, ಜಿಪಂ ಅಧ್ಯಕ್ಷರಾಗಿ ಸೇವೆ
ಎರಡು ಬಾರಿ ಮರಗೂರ ಶ್ರೀ ಭೀಮಾಶಂಕರ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ
ಮೂರು ಬಾರಿ ಶಾಸಕರಾಗಿ ರೂಪಿಸಿರುವ ಜನಪರ ಯೋಜನೆಗಳು, ಮಾಡಿರುವ ನೂರಾರು ಅಭಿವೃದ್ಧಿ ಕಾಮಗಾರಿ
-ಯಲಗೊಂಡ ಬೇವನೂರ