ಬೇತಮಂಗಲ: ಹೋಬಳಿಯಲ್ಲಿ ಶಾಸಕಿ ಎಂ.ರೂಪಕಲಾ ಗ್ರಾಮ ವೀಕ್ಷಣೆ ಹಾಗೂ ಸಾರ್ವಜನಿಕ ಸಂಪರ್ಕ ಅಭಿಯಾನ ನಡೆಸಿದರು. ಗ್ರಾಪಂ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಎನ್.ಜಿ.ಹುಲ್ಕೂರು ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಬುಧವಾರ ಬೆಳಗ್ಗೆಯಿಂದ ಭೇಟಿ ನೀಡಿದ ಶಾಸಕಿಗೆ, ಹಲವು ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವ ಮೂಲಕ ಒಂದೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಸಮಸ್ಯೆ ಬಗೆಹರಿಸಿ: ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲ ವೇತನ 2-3 ತಿಂಗಳಾದರೂ ಬರುತ್ತಿಲ್ಲ ಎಂದು ವೃದ್ಧರ ಗಮನಕ್ಕೆ ತಂದರು. ಸ್ಥಳದಲ್ಲೇ ಇದ್ದ ಇಲಾಖೆ ಅಧಿಕಾರಿಗಳು ಉತ್ತರಿಸಿ, ಸರ್ಕಾರವು ನೇರವಾಗಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುತ್ತಿದ್ದು, ಕೆಲವು ತಾಂತ್ರಿಕ ಸಮಸ್ಯೆಗಳಿಂದ ತೊಂದರೆಯಾಗಿದೆ. ಈ ಕೂಡಲೇ ಸಮಸ್ಯೆ ಬಗೆಹರಿಸುವ ಬಗ್ಗೆ ಮಾಹಿತಿ ನೀಡಿದರು.
ಪರಿಹಾರ ಪಡೆದುಕೊಳ್ಳಿ: ಹಲವು ಗ್ರಾಮಗಳಲ್ಲಿ ಪಡಿತರ ಸಮಸ್ಯೆಗಳ ಬಗ್ಗೆ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಗ್ರಾಪಂ ಮಟ್ಟದಲ್ಲಿ ಗುರುವಾರ ದಿನ ಪೂರ್ತಿ ಅಧಿಕಾರಿಗಳು ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ. ಎಲ್ಲರೂ ಪಡಿತರ ಸಮಸ್ಯೆ ಸ್ಥಳದಲ್ಲೇ ಪರಿಹಾರ ಮಾಡಿಕೊಳ್ಳುವಂತೆ ಶಾಸಕಿ ತಿಳಿಸಿದರು.
ಸ್ವಚ್ಛತೆ ಕಾಪಾಡದ್ದಕ್ಕೆ ಕಿಡಿ: ಗ್ರಾಮಗಳಲ್ಲಿ ಚರಂಡಿ ಸ್ವಚ್ಛತೆ ಮಾಡದೆ ಗೊಬ್ಬು ನಾರುತ್ತಿರುವುದನ್ನು ಕಂಡು ಗ್ರಾಪಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕಿ, ಈ ಕೂಡಲೇ ಕಸ, ಕೊಳಚೆ ತೆರವು ಮಾಡುವಂತೆ ಸೂಚಿಸಿ, ಇನ್ನು ಮುಂದೆ ಈ ರೀತಿ ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೆ ಟ್ಯಾಂಕರ್ ಮೂಲಕ ಪೂರೈಸುವಂತೆ ಪಿಡಿಒಗೆ ಸೂಚನೆ ನೀಡಿದರು. ಸರ್ಕಾರಿ ಜಾಗ, ಸ್ಮಶಾನ, ಕೆರೆ ಒತ್ತುವರಿ, ವಸತಿ ಯೋಜನೆ, ವಿದ್ಯುತ್, ಶಾಲೆ, ಅಂಗನವಾಡಿ ಮೂಲ ಸೌಲಭ್ಯಗಳ ಬಗ್ಗೆ ಚರ್ಚೆ ನಡೆಸಿದರು.
ಎನ್.ಜಿ ಹುಲ್ಕೂರು, ಲಕ್ಷ್ಮೀಸಾಗರ, ಕೊತ್ತೂರು, ಶ್ರೀನಿವಾಸಪುರ, ವೆಂಕಟಾಪುರ, ಸುನ್ನಕುಪ್ಪ, ಜೀಡಮಾಕನಹಳ್ಳಿ, ಪಂತನಹಳ್ಳಿ, ಬಲಿಜಪಲ್ಲಿ, ದಾದೇನಹಳ್ಳಿ ಗ್ರಾಮಗಳಲ್ಲಿ ಶಾಸಕಿ ಎಂ.ರೂಪಕಲಾ ವೀಕ್ಷಣೆ ನಡೆಸಿದರು.
ಈ ಸಂದರ್ಭದಲ್ಲಿ ಪಿಡಿಒ ಶ್ರೀರಾಮ್‌ರೆಡ್ಡಿ, ಕಾರ್ಯದರ್ಶಿ ರಾಘವೇಂದ್ರ, ತಹಶೀಲ್ದಾರ್ ಕೆ.ರಮೇಶ, ಕಂದಾಯ ಅಧಿಕಾರಿ ರಘುರಾಮ್ ಸಿಂಗ್, ಗ್ರಾಮ ಲೆಕ್ಕಿಗ ಸತೀಶ್, ಗ್ರಾಪಂ ಸದಸ್ಯ ದೊರಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ರೆಡ್ಡಿ, ವಕೀಲ ಪದ್ಮನಾಭರೆಡ್ಡಿ, ಯುವ ಮುಖಂಡ ನರೇಶ್, ಸ್ಥಳೀಯ ಮುಖಂಡರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.