ಮಂಡ್ಯ: ಬಡ ಕುಟುಂಬವೊಂದಕ್ಕೆ ಉಚಿತವಾಗಿ ಮನೆ ಕಟ್ಟಿಸಿಕೊಟ್ಟಿರುವ ಶಾಸಕ ಎಂ.ಶ್ರೀನಿವಾಸ್ ಅವರ ಮಾದರಿ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ನಗರದ ಹೊಸಹಳ್ಳಿ ಗುರುಮಠದ ಬಳಿ ಮನೆ ಕಳೆದುಕೊಂಡು ನಿರ್ಗತಿಕರಾಗಿದ್ದ ತುಳಸಿ-ರೇಣುಕಾ ಕುಟುಂಬಕ್ಕೆ ಸುಮಾರು 6 ಚದರದ ಮನೆ ನಿರ್ಮಿಸಿಕೊಟ್ಟಿದ್ದು, ಭಾನುವಾರ ಮನೆಯ ಗೃಹ ಪ್ರವೇಶ ನೆರವೇರಿಸಿದರು. ಮನೆಯ ಕುಟುಂಬ ಸದಸ್ಯರೆಲ್ಲರೂ ಶ್ರೀನಿವಾಸ್‌ರನ್ನು ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು.
ಮಳೆಯಿಂದ ಕುಸಿದಿದ್ದ ಗುಡಿಸಲು: ಕಳೆ ದೊಂದು ವರ್ಷದ ಹಿಂದೆ ಹೊಸಹಳ್ಳಿಯ ಗುರುಮಠದ ಬಳಿ ಇದ್ದ ತುಳಸಿ-ರೇಣುಕಾ ಅವರಿಗೆ ಸೇರಿದ ಹಳೆಯ ಗುಡಿಸಲೊಂದು ಮಳೆಯಿಂದ ಕುಸಿತಗೊಂಡಿತ್ತು. ಆ ಮನೆಯಲ್ಲಿ ಒಟ್ಟು 9 ಜನರಿದ್ದು ಅವರೆಲ್ಲರೂ ನಿರ್ಗತಿಕರಾಗಿದ್ದರು. ಕುಟುಂಬದವರು ಎಂ.ಶ್ರೀನಿವಾಸ್‌ರನ್ನು ಭೇಟಿ ಯಾಗಿ ವೇದನೆಯನ್ನು ನಿವೇದಿಸಿಕೊಂಡರು.
ಮನೆ ಕಟ್ಟಿಸಿ ಕೊಡುವ ಭರವಸೆ ನೀಡಿದ್ದ ಶಾಸಕ: ಸಂತ್ರಸ್ತರ ಮನವಿಗೆ ಸ್ಪಂದಿಸಿ ಸ್ಥಳಕ್ಕೆ ಭೇಟಿ ನೀಡಿದ ಎಂ.ಶ್ರೀನಿವಾಸ್ ಅವರು ಕುಟುಂಬ ಸದಸ್ಯರ ಸ್ಥಿತಿಯನ್ನು ಕಂಡು ಮರುಕ ವ್ಯಕ್ತಪಡಿಸಿದರು. ಈ ಗುಡಿಸಲಿರುವ ಆಸುಪಾಸಿನಲ್ಲಿ ಸುಂದರವಾದ ಮನೆಗಳು ತಲೆಎತ್ತಿದ್ದು, ಇದೊಂದು ಮಾತ್ರ ಗುಡಿಸಲಿತ್ತು. ಅದಕ್ಕಾಗಿ ಇಲ್ಲೊಂದು ಮನೆಯನ್ನು ಕಟ್ಟಿಸಿಕೊಡುವ ಸಂಕಲ್ಪ ಮಾಡಿ ಕುಟುಂಬದವರಿಗೆ ವಾಗ್ಧಾನ ನೀಡಿದರು.
6 ಚದರದ ಮನೆ: ಒಂದು ವರ್ಷದೊಳಗೆ 30/25 ಅಳತೆಯ ನಿವೇಶನದಲ್ಲಿ ಎರಡು ಬೆಡ್ ರೂಂ, ಒಂದು ಅಡುಗೆ ಮನೆ, ಒಂದು ಹಾಲ್, ಸ್ನಾನದ ಮನೆಯನ್ನೊಳಗೊಂಡ 6 ಚದರದ ಮನೆಯನ್ನು ಸುಮಾರು 7 ಲಕ್ಷ ರೂ. ವೆಚ್ಚದಲ್ಲಿ ಕಟ್ಟಿಸಿಕೊಟ್ಟಿದ್ದಾರೆ. ಇದರಿಂದ ಗುಡಿಸಲು ಕಳೆದುಕೊಂಡು ನಿರ್ಗತಿಕರಾಗಿದ್ದ ಕುಟುಂಬದ 9 ಮಂದಿಗೆ ಸೂರು ದೊರಕಿದಂತಾಗಿದೆ.
ಮನೆಗೆ ಶ್ರೀನಿವಾಸ ಕೃಪೆ ಎಂದು ನಾಮಕರಣ: ಶಾಸಕ ಎಂ.ಶ್ರೀನಿವಾಸ್‌ರವರ ಕೊಡುಗೆಗೆ ಪ್ರತಿಯಾಗಿ ತುಳಸಿ-ರೇಣುಕಾ ಕುಟುಂಬದವರು ಮನೆಗೆ ಶ್ರೀನಿವಾಸ ಕೃಪೆ ಎಂದು ನಾಮಕರಣ ಮಾಡಿದ್ದಾರೆ. ಶಾಸಕರ ಮಾನವೀಯ ಹೃದಯವನ್ನು ಸಾರ್ವಜನಿಕರು ಪ್ರಶಂಸಿಸಿದ್ದಾರೆ.