ವಿಜಯಪುರ: ಎರಡನೇ ಅಲೆಯ ಕೋವಿಡ್ ಸೋಂಕು ವೇಗವಾಗಿ ಹರಡಿಕೊಂಡು ಮಹಾರಾಷ್ಟ್ರ ರಾಜ್ಯವನ್ನೇ ತತ್ತರಿಸಿದೆ. ಕೊರೊನಾ ಸೋಂಕು ಪ್ರಭಾವಿತ ರಾಜ್ಯದ ಗಡಿಗೆ ಹೊಂದಿಕೊಂಡಿರುವ ವಿಜಯಪುರ ಜಿಲ್ಲೆಯ ಇಂಡಿ ಶಾಸಕರು ಮಾತ್ರ ಕೊರೊನಾ ರೂಪಾಂತರಿ ವಿರುದ್ಧ ಸದ್ದಿಲ್ಲದೇ ಹೋರಾಟಕ್ಕೆ ಧುಮುಕಿದ್ದಾರೆ.
ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಕೋವಿಡ್ ವೇಗವಾಗಿ ಹರಡಿದ್ದಾಗ ಆ ರಾಜ್ಯದೊಂದಿಗೆ ಕೌಟುಂಬಿಕ ಬಾಂಧವ್ಯ ಹಾಗೂ ವ್ಯವಹಾರಿಕ ಸಂಬಂಧ ಹೊಂದಿರುವ ಇಂಡಿ ತಾಲೂಕಿನ ಜನ ಮುಕ್ತ ಓಡಾಟದಲ್ಲೇ ತೊಡಗಿದ್ದರು. ಈ ಹಂತದಲ್ಲಿ ಜಿಲ್ಲೆಯಲ್ಲೂ ಕೋವಿಡ್ ಅಬ್ಬರ ಹೆಚ್ಚಾಗಿ, ಹಳ್ಳಿ ಹಳ್ಳಿಗಳೂ ಸೋಂಕಿನ ಆಗರವಾದವು. ಸೋಂಕಿತರಿಗೆ ಆಸ್ಪತ್ರೆಯಲ್ಲಿ ಪ್ರವೇಶ ಸಿಗಲಿಲ್ಲ, ಸಿಕ್ಕರೂ ಹಾಸಿಗೆ ಅಭಾವ, ಆಮ್ಲಜನಕದ, ವೆಂಟಿಲೇಟರ್, ರೆಮ್‌ಡೆಸಿವಿಯರ್ ಹೀಗೆ ಚಿಕಿತ್ಸೆಯ ಪ್ರತಿ ಹಂತದಲ್ಲೂ ಕೊರತೆ ಆಹಾಕಾರ ಕಂಡು ಬಂತು.
ಕೋವಿಡ್ ಎರಡನೇ ಅಲೆ ಸೃಷ್ಟಿಸಿದ ಸಂಕಷ್ಟದ ಭೀಕರ ಹಂತದಲ್ಲಿ ಕಾಣಿಸಿಕೊಂಡ ಸಮಸ್ಯೆಗಳಿಗೆ ತಕ್ಷಣ ಸ್ಪಂದನೆಗೆ ಮುಂದಾದವರು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ. ಕೋವಿಡ್ ಸಂಕಷ್ಟದ ಎಲ್ಲ ಪರಿಹಾರಕ್ಕೂ ಪ್ರತ್ಯೇಕವಾಗಿ ಪರಿಹಾರ ಕಂಡುಕೊಂಡ ಶಾಸಕರು, ತಮ್ಮ ಕ್ಷೇತ್ರದಲ್ಲಿ ಸೋಂಕು ವ್ಯಾಪಕವಾಗದಂತೆ ಅ ಧಿಕಾರಿಗಳ ನಿರಂತರ ಸಭೆ, ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಸ್ವಂತ ಹಣದಲ್ಲಿ ನೀಡಿರುವ ಸೇವೆಗಳ ಅನುಷ್ಠಾನಕ್ಕೆ ಪ್ರತ್ಯೇಕವಾಗಿ ತಮ್ಮದೇ ಕಾರ್ಯಕರ್ತ-ಅಭಿಮಾನಿಗಳ ಅನುಷ್ಠಾನ ತಂಡಗಳನ್ನು ರಚಿಸಿ ಯುದ್ದೋಪಾದಿಯಲ್ಲಿ ಸೇವೆ ನೀಡುತ್ತಿದ್ದಾರೆ.
ಸ್ವಯಂ ಜಾಗೃತಿ: ಕೋವಿಡ್ ಸೋಂಕು ಹರಡುವಿಕೆ ತಡೆಗೆ ಶಾಸಕ ಯಶಂವತರಾಯಗೌಡ ಹಳ್ಳಿಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸ್ವಯಂ ಜಾಗೃತಿ ಮೂಡಿಸುತ್ತಿದ್ದಾರೆ. ಕ್ಷೇತ್ರ ವ್ಯಾಪ್ತಿಯ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಜನರಿಗೆ ಲಸಿಕೆ ಪಡೆತಯುವ ಕುರಿತು ಸ್ಥಳೀಯ ಪ್ರಮುಖರಿಂದ ಜಾಗೃತಿ ಮೂಡಿಸುವ ವಿನೂತನ ಪ್ರಯತ್ನ ನಡೆಸಿದ್ದಾರೆ. ಇಂಡಿ ಕ್ಷೇತ್ರದಲ್ಲಿ ಕೋವಿಡ್ ಸೋಂಕಿತರ ಆರೈಕೆಗಾಗಿ 9 ಕಡೆಗಳಲ್ಲಿ ಕೋವಿಡ್ ಕೇರ್ ಕೇಂದ್ರ ತೆರೆದಿದ್ದು, ನಿತ್ಯವೂ ಪ್ರತಿ ಕೇಂದ್ರದ ಮಾಹಿತಿ ಪಡೆಯುವ ಮೂಲಕ ನಿಗಾ ಇರಿಸಿದ್ದಾರೆ.