ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಲಿಡ್ಕರ್ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಶನಿವಾರ ವಾರ್ಡ್ 60-61ರ ವಿವಿಧೆಡೆ ಪ್ರಚಾರ ನಡೆಸಿ ಮತಯಾಚಿಸಿದರು. ಹಳೇ ಹುಬ್ಬಳ್ಳಿ ಭಾಗದ ಮಸ್ತಾನ್ ಸೋಫಾ, ಜಂಗ್ಲಿಪೇಟೆ, ಅಕ್ಕಿಪೇಟೆ, ಅಕ್ಕಸಾಲಿಗರ ಓಣಿ, ಬಾಗಾರಪೇಟೆ, ಜುಮ್ಮಾ ಮಸೀದಿ ರಸ್ತೆ, ಬೀರಬಂದ ಓಣಿ ಸುತ್ತಲಿನ ಪ್ರದೇಶಗಳ ಮನೆ ಮನೆಗೆ ತೆರಳಿ ಪ್ರಚಾರ ಕೈಗೊಂಡ ಅವರು ಅಭ್ಯರ್ಥಿ ವಿನಯ ಕುಲಕರ್ಣಿ ಪರ ಮತಯಾಚಿಸಿದರು. ದಶರಥ ವಾಲಿ, ಮೆಹಮೂದ ಕೋಳೂರು, ಬಸವರಾಜ ಮೆಣಸಗಿ, ಅಮಟೂರು, ಇಮಾಮ್
ಹುಸೇನ್ ಮಡಕಿ, ಮುನ್ನಾ ಮಾರ್ಕರ್, ಶಪೀ ಯಾದಗಿರಿ ಇನ್ನಿತರರು ಇದ್ದರು.
ಮೈತ್ರಿ ಅಭ್ಯರ್ಥಿಗಳಿಗೆ ಬೆಂಬಲ: ಡಾ| ನಾಡಗೌಡ
ಹುಬ್ಬಳ್ಳಿ: ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಗಳನ್ನು ಸಂಯುಕ್ತ ಜನತಾದಳ (ಶರದ್ ಯಾದವ ಬಣ) ಬೆಂಬಲಿಸಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಡಾ| ಎಂ.ಪಿ. ನಾಡಗೌಡ ತಿಳಿಸಿದರು.
ಹುಬ್ಬಳ್ಳಿ: ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಗಳನ್ನು ಸಂಯುಕ್ತ ಜನತಾದಳ (ಶರದ್ ಯಾದವ ಬಣ) ಬೆಂಬಲಿಸಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಡಾ| ಎಂ.ಪಿ. ನಾಡಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಪ್ರತಿ ಬಾರಿ ಒಂದೊಂದು ಬಗೆಯ ಗಾಳಿಯಲ್ಲಿ ಚುನಾವಣೆಗಳಲ್ಲಿ ಆರಿಸಿ ಬರುತ್ತಿದ್ದಾರೆ. ಈ ಬಾರಿ ಮೋದಿ ನೋಡಿ ಮತ ಹಾಕಿ ಎಂದು 3-4 ಬಾರಿ ಆರಿಸಿ ಬಂದವರು ಸಹಿತ ಹೇಳಿಕೊಂಡು ಹೋಗುತ್ತಿರುವುದು ದುರ್ದೈವ. ದೇಶದ ಜನಕ್ಕೆ ಬೇಕಾಗಿರುವುದು ಚಾಯ್ ವಾಲಾ ಹಾಗೂ ಚೌಕಿದಾರ ಅಲ್ಲ. ಬದಲಾಗಿ ಜಾತ್ಯತೀತ ಮನೋಭಾವನೆಯುಳ್ಳ, ಬಡವರ, ರೈತರ ಪರವಾಗಿರುವ ಅತ್ಯುತ್ತಮ ಪ್ರಧಾನಿ ಎಂದರು.
ಪ್ರಧಾನಿ ಮೋದಿ 2014ರಲ್ಲಿ ಚುನಾವಣೆಗೂ ಮುನ್ನ ಜನರಿಗೆ ನೀಡಿದ್ದ ಯಾವುದೇ ಆಶ್ವಾಸನೆ ಈಡೇರಿಸಿಲ್ಲ. ಕಪ್ಪು ಹಣ ತಂದು ಜನರ ಖಾತೆಗೆ ಜಮಾ ಮಾಡಲಿಲ್ಲ, ಉದ್ಯೋಗ ಸೃಷ್ಟಿಸಲಿಲ್ಲ. ಈ ಬಾರಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲ್ಲ. ಕಳೆದ ಬಾರಿಗಿಂತ 100ಕ್ಕೂ ಅಧಿಕ ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಮೋದಿ ಮತ್ತೂಮ್ಮೆ ಪ್ರಧಾನಿಯಾಗಲ್ಲವೆಂದು ಭವಿಷ್ಯ ನುಡಿದರು.
ಈ ಬಾರಿ ತಮ್ಮ ಪಕ್ಷ ಅಧಿಕಾರಕ್ಕೆ ಬರುವುದಿಲ್ಲವೆಂಬುದು ಅವರಿಗೂ ಗೊತ್ತಾಗಿದೆ. ಅದಕ್ಕಾಗಿ ತಮ್ಮ ಪ್ರಣಾಳಿಕೆಯಲ್ಲಿ ಬಡವರ, ರೈತರ, ಕಾರ್ಮಿಕರು ಸೇರಿದಂತೆ ಆರು ಹೊಸ ನಿರ್ಣಯಗಳನ್ನು ಕೈಗೊಂಡಿದ್ದಾರೆ.
ಮೋದಿಗೆ ತಾವೇ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ತಾವೇ ಉತ್ತರ ಬರೆಯುವಂತಾಗಿದೆ. ಬಿಜೆಪಿಯವರು ಶತಾಯಗತಾಯವಾಗಿ ಪ್ರಯತ್ನಿಸಿದರೂ ಅವರು ಮತ್ತೆ ಅಧಿಕಾರಕ್ಕೆ ಬರಲ್ಲ ಎಂದರು.
ಪುಲ್ವಾಮಾ ಘಟನೆಯಲ್ಲಿ 40ಕ್ಕೂ ಅಧಿಕ ಯೋಧರು ಮೃತರಾದರು. ಅಲ್ಲಿಗೆ 350 ಕೆಜಿಯಷ್ಟು ಆರ್ ಡಿಎಕ್ಸ್ ಹೇಗೆ ಬಂತು. ಇದರಲ್ಲಿ ಗುಪ್ತಚರ ಇಲಾಖೆ ವೈಫಲ್ಯವೇ ಕಾರಣ. ಈ ಘಟನೆ ಬಗ್ಗೆ ಪ್ರಧಾನಿ ಏಕೆ ತನಿಖೆ ನಡೆಸಲಿಲ್ಲ. ತಪ್ಪಿತಸ್ಥರ ಮೇಲೆ ಏಕೆ ಕ್ರಮಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದರು. ಕುಟುಂಬ ರಾಜಕಾರಣಕ್ಕೆ ನನ್ನ ವಿರೋಧವಿದೆ. ಆದರೆ, ರಾಜಕಾರಣದಲ್ಲಿ ಸ್ವ-ಬಲದಿಂದ ಆರಿಸಿ ಬರುವವರು ಹಾಗೂ ಉತ್ತಮರು ಬಂದರೆ ಅದರಲ್ಲಿ ತಪ್ಪೇನಿಲ್ಲ. ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳಲ್ಲಿ ಕುಟುಂಬ ರಾಜಕಾರಣ ನಡೆಯುತ್ತಲೇ ಇದೆ. ಜೆಡಿಎಸ್ ಅಪ್ಪ-ಮಕ್ಕಳ ಪಕ್ಷವೆಂದು ಈ ಹಿಂದೆ ನಾನೇ ಹೇಳಿದ್ದೆ. ಆದರೆ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಅವರ ಕುಟುಂಬದ ಜನರೇ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವುದರಲ್ಲಿ ತಪ್ಪಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಸಾವಿತ್ರಿ ಗುಂಡಿ, ಶ್ರೀಶೈಲಗೌಡ ಕಮತರ, ರತ್ನಾ ಗಂಗಣ್ಣವರ, ಶೇಖರ ಹೈಬತ್ತಿ, ಫಿರೋಜಖಾನ ಹವಾಲ್ದಾರ, ಸವದತ್ತಿಯ ಗದ್ದಿಗೌಡರ ಇದ್ದರು.