ಬೆಳಗಾವಿ: ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳ ವಿಳಂಬಕ್ಕೆ ವಿವಿಧ ಇಲಾಖೆಯ ಅಧಿಕಾರಿಗಳ ಸಮನ್ವಯ ಕೊರತೆಯೇ ಮುಖ್ಯ ಕಾರಣವಾಗಿದೆ. ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಿ ಕಾಮಗಾರಿ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಶಾಸಕ ಅಭಯ ಪಾಟೀಲ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಇಲ್ಲಿಯ ಸ್ಮಾರ್ಟ್‌ಸಿಟಿ ಕಚೇರಿಯಲ್ಲಿ ಗುರುವಾರ ನಡೆದ ಸ್ಮಾರ್ಟ್‌ಸಿಟಿ ಅಧಿಕಾರಿಗಳು, ಹೆಸ್ಕಾಂ, ನಗರ ನೀರು ಸರಬರಾಜು ಇಲಾಖೆ, ಗ್ಯಾಸ್ ಪೈಪ್ ಲೈನ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸ್ಮಾರ್ಟ್‌ಸಿಟಿ ಕಾಮಗಾರಿ ವೇಳೆ ಇತರ ಇಲಾಖೆಯ ಕೆಲಸಗಳು ನಡೆದಿವೆ. ಎಲ್ಲಿ ನೋಡಿದರಲ್ಲಿ ರಸ್ತೆಗಳನ್ನು ಅಗೆಯಲಾಗಿದೆ. ಇದರಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಎಂದು ಹೇಳಿದರು.
ರಸ್ತೆ ಅಗೆಯುವ ಕೆಲಸ ತಕ್ಷಣ ಪೂರ್ಣಗೊಳಿಸಬೇಕು. ಸ್ಮಾರ್ಟ್ ಸಿಟಿ ಕೆಲಸಗಳು ಮುಗಿದ ನಂತರ ಮತ್ತೆ ಅಗೆಯಲು ಅವಕಾಶವಿಲ್ಲ. ಈಗಲಾದರೂ ಅಗೆಯುವ ಮುನ್ನ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಇಲಾಖೆಗಳ ಮಧ್ಯೆ ಸರಿಯಾಗಿ ಮಾಹಿತಿ ವಿನಿಮಯ ಮಾಡಿಕೊಂಡು ಯೋಜನೆ ಕೈಗೆತ್ತಿಕೊಳ್ಳಬೇಕು ಎಂದರು. ಗ್ಯಾಸ್ ಪೈಪ್‌ಲೈನ್ ಅಳವಡಿಸಲು ರಸ್ತೆ ಅಗೆಯುವವರು ಮಹಾನಗರ ಪಾಲಿಕೆಗೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ ಎಂದು ಮಹಾನಗರ ಪಾಲಿಕೆ ಆಯುಕ್ತ ಜಗದೀಶ ಕೆ.ಎಚ್. ಅವರು ಶಾಸಕರ ಗಮನಕ್ಕೆ ತಂದರು.
ಸ್ಮಾರ್ಟ್‌ಸಿಟಿ ಕೆಲಸದ ಪ್ರಗತಿಯನ್ನು ಶಾಸಕರು ಪರಾಮರ್ಶಿಸಿದರು. ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ಅವರು ವಿವಿಧಯೋಜನೆಗಳ ಪ್ರಗತಿ ವಿವರಿಸಿದರು. ಸದ್ಯ ಯೋಜನೆಗಳು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಇದೇ ಮಾದರಿಯಲ್ಲಿಮುಂದುವರಿಸಬೇಕು. ನಿಗದಿತ ಅವ ಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಬೇಕು ಎಂದು ಅಭಯ ಪಾಟೀಲ ಸೂಚಿಸಿದರು.
ಹೆಸ್ಕಾಂನವರು ಅಂಡರ್ ಗ್ರೌಂಡ್ ಕೇಬಲಿಂಗ್, ಬಿಎಸ್‌ಎನ್‌ಎಲ್‌ನವರು ಕೇಬಲ್ ಶಿಫ್ಟಿಂಗ್, ಗ್ಯಾಸ್ ಪೈಪ್‌ಲೈನ್ ಕಾಮಗಾರಿ ನಿಗದಿತ ಸಮಯದಲ್ಲಿ ಮಾಡದಿರುವುದರಿಂದ ಸ್ಮಾರ್ಟ್‌ಸಿಟಿ ಕಾಮಗಾರಿಗಳ ವಿಳಂಬಕ್ಕೆ ಕಾರಣವಾಗುತ್ತಿದೆ. ಹೀಗಾಗಿ ವಾರದ ಬಳಿಕ ಕಾಮಗಾರಿ ವೀಕ್ಷಣೆಮಾಡುವುದಾಗಿ ತಿಳಿಸಿದ ಶಾಸಕರು, ಲೋಪ ಕಂಡು ಬಂದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.