Advertisement
ಚೈತ್ರಾ ಕುಂದಾಪುರ, ಶ್ರೀಕಾಂತ್ ನಾಯಕ್ ಹಾಗೂ ಗಗನ್ ಕಡೂರು ಬಂಧಿತರು. ಘಟನೆಗೆ ಸಂಬಂಧಿಸಿದಂತೆ ಬೈಂದೂರಿನ ಉದ್ಯಮಿ, ಬಿಜೆಪಿ ಮುಖಂಡ ಗೋವಿಂದ ಬಾಬು ಪೂಜಾರಿ ಸೆ. 8ರಂದು ಬೆಂಗಳೂರು ನಗರದ ಬಂಡೇಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಬಿಜೆಪಿ ಕೇಂದ್ರದ ನಾಯಕರು, ಸಂಘ-ಪರಿಹಾರದ ಪ್ರಮುಖರ ಹೆಸರನ್ನು ಮುಂದಿಟ್ಟು ಬಿಜೆಪಿಯಿಂದ ಬೈಂದೂರು ಕ್ಷೇತ್ರಕ್ಕೆ ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ನಂಬಿಸಿದ್ದ ಚೈತ್ರಾ ಕುಂದಾಪುರ 7 ಮಂದಿಯ ತಂಡವೊಂದನ್ನು ಕಟ್ಟಿಕೊಂಡು ಕೃತ್ಯ ಎಸಗಿದ್ದಳು. ಸುಮಾರು 5 ಕೋ.ರೂ. ವಂಚನೆ ಮಾಡಿರುವ ಬಗ್ಗೆ ಕಳೆದ ಕೆಲವು ದಿನಗಳಿಂದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ನಡುವೆ ವಂಚನೆಗೊಳಗಾಗಿದ್ದ ಉದ್ಯಮಿ ದೂರು ನೀಡಿದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಕೆಲವು ದಿನಗಳಿಂದ ಉಡುಪಿಯಲ್ಲಿಯೇ ಬೀಡುಬಿಟ್ಟಿದ್ದ ಸಿಸಿಬಿ ಪೊಲೀಸರು ಆರೋಪಿಗಳ ಚಲನವಲನಗಳನ್ನು ಗಮನಿಸುತ್ತಿದ್ದರು. ಲೊಕೇಷನ್ ಆಧಾರದಲ್ಲಿ ಎಲ್ಲ ಆರೋಪಿಗಳನ್ನು ಬಂಧಿಸಿದ್ದರೂ ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್ ನಾಯಕ್ ಪೊಲೀಸರ ಕಣ್ತಪ್ಪಿಸಿ ತಿರುಗಾಡಿಕೊಂಡಿದ್ದರು. ಮಂಗಳವಾರ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಆರೋಪಿಗಳ ಪೈಕಿ ಗಗನ್ ಕಡೂರು ಎಂಬಾತನನ್ನು ಒಂದು ದಿನದ ಹಿಂದೆಯಷ್ಟೇ ಬಂಧಿಸಲಾಗಿತ್ತು. ಚೈತ್ರಾ ಮಂಗಳೂರು ವಿ.ವಿ.ಯ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು, ಅನಂತರ ಹಿಂದೂ ಸಂಘಟನೆಗಳ ಕಾರ್ಯಕ್ರಮದಲ್ಲಿ ಸಕ್ರಿಯೆಯಾಗಿದ್ದಳು ಮಾತ್ರವಲ್ಲದೇ ವೇದಿಕೆಯಲ್ಲಿ ಮುಖ್ಯ ಭಾಷಣ ಮಾಡುವ ಮಟ್ಟಕ್ಕೆ ಬೆಳೆದಿದ್ದಳು. ಈ ಹಿಂದೆ ಕೆಲವು ಪ್ರಕರಣಗಳಲ್ಲಿಯೂ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಳು. ಸಂಘ ಪರಿವಾರದಿಂದಲೂ ಈಕೆಯನ್ನು ದೂರ ಇಟ್ಟಿದ್ದರು.
Related Articles
ಬಂಧನ ವೇಳೆ ಸ್ಥಳದಲ್ಲಿ ಹೈಡ್ರಾಮ ನಡೆಯಿತು. ತಡರಾತ್ರಿ ಆದ್ದರಿಂದ ಆರೋಪಿಗಳನ್ನು ಪ್ರತ್ಯೇಕವಾಗಿ ಅಜ್ಞಾತ
ಸ್ಥಳದಲ್ಲಿರಿಸಲಾಗಿತ್ತು. ಚೈತ್ರಾಳನ್ನು ಕರೆದುಕೊಂಡು ಹೋಗುವ ವೇಳೆ ಆಕೆ ತಾನು ಧರಿಸಿದ್ದ ಬಳೆಗಳನ್ನು ಒಡೆದುಹಾಕಿ ಕೈಬೆರಳಲ್ಲಿದ್ದ ಉಂಗುರ ವನ್ನು ನುಂಗಲು ವಿಫಲ ಯತ್ನ ನಡೆಸಿ ರಾದ್ಧಾಂತ ನಡೆಸಿದಳು. ಈ ವೇಳೆ ಪೊಲೀಸರು ಆಕೆಯನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಬೆಳ್ಳಂಬೆಳಗ್ಗೆ ಸಿಸಿಬಿ ಪೊಲೀಸರು ಆರೋಪಿಗಳನ್ನು ಬೆಂಗಳೂರಿಗೆ ಕರೆದುಕೊಂಡು ಹೋದರು.
Advertisement
ಮುಸ್ಲಿಂ ಮಹಿಳೆಯಿಂದ ಆಶ್ರಯ?ಚೈತ್ರಾಗೆ ಕಾಂಗ್ರೆಸ್ ಕಾರ್ಯಕರ್ತೆ, ಮುಸ್ಲಿಂ ಮಹಿಳೆಯೊಬ್ಬರು ಕೆಲವು ದಿನಗಳ ಹಿಂದೆ ಉಡುಪಿಯಲ್ಲಿ ಆಶ್ರಯ ಒದಗಿಸಿದ್ದರು ಎಂಬ ಬಗ್ಗೆ ದೃಶ್ಯಮಾಧ್ಯಮಗಳಲ್ಲಿ ವರದಿಯಾ ಯಿತು. ಈ ಬಗ್ಗೆ “ಉದಯವಾಣಿ’ ಆ ಮಹಿಳೆಯನ್ನು ಸಂಪರ್ಕಿಸಿದಾಗ ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. 7 ದಿನಗಳಿಂದ ನಾನು ಚೈತ್ರಾಗೆ ಆಶ್ರಯ ಕೊಟ್ಟಿದ್ದೇನೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ವಂಚನೆ ಪ್ರಕರಣದ ಎಫ್‌ಐಆರ್ ದಾಖಲಾಗಿರುವುದೇ ಸೆ. 8ರಂದು. ಮತ್ತೆ ಹೇಗೆ 7 ದಿನಗಳಿಂದ ಆಶ್ರಯ ನೀಡುವುದಕ್ಕೆ ಸಾಧ್ಯ? ಈ ಹಿಂದೆ ಖಾಸಗಿ ಸುದ್ದಿವಾಹಿನಿ ಯೊಂದರಲ್ಲಿ ನಾವಿಬ್ಬರೂ ಕೆಲಸ ಮಾಡಿದ್ದೆವು. ಆಕೆಯ ಸಂಪರ್ಕ ಸಂಖ್ಯೆ ಇದೆ. ಆ ಬಳಿಕ ನಮ್ಮ ನಡುವೆ ಬೇರೆ ಯಾವ ರೀತಿಯ ಸಂಬಂಧವೂ ಇಲ್ಲ. ಸಿಸಿಬಿ ಪೊಲೀಸರು ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ವಶಕ್ಕೆ ಪಡೆದಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ನನಗೆ ಪೊಲೀಸರಿಂದ ಯಾವ ನೋಟಿಸ್ ಬಂದಿಲ್ಲ ಎಂದಿದ್ದಾರೆ.