ವಿಜಯಪುರ: ಜಿಲ್ಲೆಯ ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.
ತಮಗೆ ಕೋವಿಡ್ ಸೋಂಕು ತಗುಲಿದ ಕುರಿತು ಸ್ವಯಂ ಶಾಸಕ ಸೋಮನಗೌಡ ತಮ್ಮ ಫೇಸಬುಕ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಹಾಕಿದ್ದಾರೆ.
ಶಾಸಕ ಸೋಮನಗೌಡ ಕಳೆದ ಶುಕ್ರವಾರ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಹಾಗೂ ಕೋವಿಡ್ ಟೆಸ್ಟ್ ಮಾಡಿಸಿದ್ದರು. ಪರೀಕ್ಷೆಯಲ್ಲಿ ಕೋವಿಡ್-19 ಸೋಂಕು ದೃಢವಾಗಿದೆ. ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಶಾಸಕರು ಹೇಳಿದ್ದಾರೆ.
ಇದನ್ನೂ ಓದಿ: ಸಿಗ್ನಲ್ ಸಿಗದೆ ಒಂದು ಗಂಟೆಗೂ ಹೆಚ್ಚು ಕಾಲ ಆಗಸದಲ್ಲೇ ಸುತ್ತಿದ ಅನಂತ್ ಹೆಗಡೆ ಇದ್ದ ವಿಮಾನ
ನನ್ನ ಆರೋಗ್ಯದಲ್ಲಿ ಯಾವುದೇ ತೊಂದರೆಯಿಲ್ಲ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಬೇಗನೇ ಗುಣಮುಖನಾಗಿ ಕ್ಷೇತ್ರದ ಸೇವೆಗೆ ಮರಳುತ್ತೇನೆ. ನನ್ನ ಸಂಪರ್ಕಕ್ಕೆ ಬಂದವರು ಮುಂಜಾಗೃತಾ ಕ್ರಮವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಸಾಮಾಜಿಕ ಅಂತರ ಕಾಪಾಡಿಕೊಂಡು ಮನೆಯಲ್ಲಿ ಇರಬೇಕು ಎಂದು ಶಾಸಕ ಸೋಮನಗೌಡ ಸಾಸನೂರ ಮನವಿ ಮಾಡಿದ್ದಾರೆ.