ಬನಹಟ್ಟಿ: ಕೊರೊನಾಗೆ ಹೆದರಿ ಬೆಂಗಳೂರಿನ ಮನೆಯಲ್ಲಿ ಕುಳಿತು ಅದೇಗೆ ನೇಕಾರರ ಪರ ಕಾಳಜಿ ವಹಿಸಿದ್ದೀರಿ? ನೇಕಾರರ ಕಾರ್ಯ ಮಾಡಿದ್ದೀರಿ? ಸಚಿವರಿದ್ದಾಗಲೇ ಏನು ಮಾಡದ ನೀವು, ಈಗ ಹೇಗೆ ಮಾಡುತ್ತೀರಿ, ಇಂತಹ ತೀವ್ರ ಸಂಕಷ್ಟದ ಸಮಯದಲ್ಲಿ ಮಾಡಿದ್ದಾದರೂ ಏನು. ನಿಮ್ಮ ಹಣೆಬರಹ ಜನರಿಗೆ ತಿಳಿದಿದೆ ಎಂದು ಮಾಜಿ ಸಚಿವೆ ಉಮಾಶ್ರೀ ವಿರುದ್ಧ ತೇರದಾಳ ಶಾಸಕ ಸಿದ್ದು ಸವದಿ ಹರಿಹಾಯದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿ ವೇಶನದಲ್ಲಿಯೂ ಆಡಳಿತ ಸರ್ಕಾರವಿದ್ದರೂ ನೇಕಾರರಿಗೆ ಅನ್ಯಾಯವಾದ ಸಂದರ್ಭದಲ್ಲಿ ನಮ್ಮದೇ ಸರಕಾರವಿದ್ದರೂ ಸರಕಾರದ ನಿರ್ಲಕ್ಷ್ಯತನವನ್ನು ಖಂಡಿಸಿ ಸಭೆಯ ಗಮನ ಸೆಳೆದಿದ್ದೇನೆ. ಸಮುದಾಯಕ್ಕೆ ಅನ್ಯಾಯವಾದರೆ ಸಹಿಸೋಲ್ಲ. ಇದೀಗ ಮುಖ್ಯಮಂತ್ರಿಯವರೊಂದಿಗೆ ಅನೇಕ ಬಾರಿ ಮನವಿ ಮಾಡಿಕೊಂಡು ಡಿಸಿಎಂ ಗೋವಿಂದ ಕಾರಜೋಳರೊಂದಿಗೆ ಮಾತುಕತೆ ಮೂಲಕ ಪ್ರತಿ ನೇಕಾರನಿಗೆ 3 ಸಾವಿರ ರೂ. ಸಹಾಯ ಧನ ಒದಗಿಸಿದ್ದೇನೆ. ಆದರೆ, ಅದನ್ನು ನಾವೇ ಮಾಡಿಸಿದ್ದು ಎಂದು ಸುಳ್ಳು ಹೇಳಿಕೆ ನೀಡುತ್ತಿರುವ ಉಮಾಶ್ರೀಯವರ ಧೋರಣೆಯನ್ನು ಖಂಡಿಸಿದರು.
ಕ್ಷೇತ್ರದಲ್ಲಿ ನೇಕಾರರ ಸೇವಾ ಕಾರ್ಯ ಮಾಡುತ್ತೇವೆ. ಮಾನವೀಯತೆ ದೃಷ್ಟಿಯಿಂದ ದೇವರು ಮೆಚ್ಚುವಂತಹ ಕೆಲಸ ಮಾಡುತ್ತೇವೆ. ಕೈ ಮಗ್ಗ ನೇಕಾರ ಪರಸ್ಥಿತಿ ಗಂಭೀರವಾಗಿದೆ. ಅವರಿಗೆ ಎರಡು ಸಾವಿರ ಕೊಟ್ಟಿದ್ದು ನಮಗೆ ಸಮಾಧಾನವಿಲ್ಲ. ಆದರೆ ಕೋವಿಡ್ ಸಂಕಷ್ಟದಲ್ಲಿ ಸರಕಾರದ ಸ್ಥಿತಿ ಗಂಭೀರವಾಗಿದೆ. ಎಲ್ಲ ನೇಕಾರರಿಗೆ ಕನಿಷ್ಠ 5 ಸಾವಿರ ನೀಡಬೇಕು ಎನ್ನುವುದು ನಮ್ಮ ಬೇಡಿಕೆ ಬಹುದಿನಗಳಿಂದ ಇದೆ ಎಂದರು.
ಸಾಲಮನ್ನಾಕ್ಕೆ ನೇಕಾರರ ಮುಂಗಡ ಸಾಲ (ಕ್ಯಾಶ್ ಕ್ರೆಡಿಟ್)ದವರಿಗೂ ಶೀಘ್ರವೇ 1 ಲಕ್ಷ ರೂ. ಸಾಲ ಮನ್ನಾ ಕಾರ್ಯ ನಡೆಯುತ್ತಿದೆ. ನೇಕಾರರಲ್ಲಿ ಅನುಮಾನಬೇಡ. ಈ ಕುರಿತು ಶೀಘ್ರ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳ ಜತೆ ಹಾಗೂ ಇಲಾಖೆಯ ಕಾರ್ಯದರ್ಶಿಯವರ ಜತೆ ಮಾತನಾಡಿ ಶೀಘ್ರ ಇತ್ಯರ್ಥ ಪಡಿಸುವುದಾಗಿ ತಿಳಿಸಿದರು.
50 ಲಕ್ಷ ಶಾಸಕರ ನಿಧಿ ಕ್ಷೇತ್ರದ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಟ್ಟಿದ್ದು, ಕ್ಷೇತ್ರದಲ್ಲಿನ ರಬಕವಿ- ಬನಹಟ್ಟಿ, ಮಹಾಲಿಂಗಪುರ, ತೇರದಾಳದಲ್ಲಿನ ಆಸ್ಪತ್ರೆಗಳಲ್ಲಿನ ಮೂಲಭೂತ ಸೌಲಭ್ಯ ಅಭಿವೃದ್ಧಿ ಪಡಿಸಲು ಹಣ ಬಳಸುವುದಾಗಿ ಶಾಸಕ ಸವದಿ ತಿಳಿಸಿದರು. ರಬಕವಿ-ಬನಹಟ್ಟಿ ನಗರಾಧ್ಯಕ್ಷ ಶ್ರೀಶೈಲ ಬೀಳಗಿ ಮಾತನಾಡಿ, ನೀಚ ಹಾಗೂ ನಾಲಾಯಕ ರಾಜಕೀಯ ನಡೆಸುತ್ತಿರುವ ಕಾಂಗ್ರೆಸ್ ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಾದರೂ ಪ್ರಾಮಾಣಿಕವಾಗಿ ಸಾರ್ವಜನಿಕರ ಸಹಾಯಕ್ಕೆ ಬರಲಿ ಬದಲಾಗಿ ಅಪಪ್ರಚಾರ ನಡೆಸುತ್ತಿರುವದು ಬೇಸರ ತರುವಂಥದ್ದು ಎಂದರು.
ಶ್ರೀಶೈಲ ದಭಾಡಿ, ಸಿದ್ಧನಗೌಡ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ ಅಂಬಲಿ, ಗೋವಿಂದ ಡಾಗಾ, ಸೋಮನಾಥ ಗೊಂಬಿ, ರಮೇಶ ಕೊಣ್ಣೂರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸವಿತಾ ಹೊಸೂರ, ಸುವರ್ಣಾ ಕೊಪ್ಪದ, ಪ್ರವೀಣ ಕೋಲಾರ ಇದ್ದರು.