Advertisement

ಮೈಸೂರು ಡಿಸಿಯಾಗಿ ವರ್ಗಾವಣೆ ರೋಹಿಣಿ ಸಿಂಧೂರಿಗೆ ನೀಡಿದ ಗಿಫ್ಟ್: ಸಾ.ರಾ.ಮಹೇಶ್ ಆರೋಪ

01:38 PM Oct 01, 2020 | keerthan |

ಮೈಸೂರು: ಈ ಮೊದಲು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾಗಿದ್ದ ರೋಹಿಣಿ ಸಿಂಧೂರಿಯವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಿರುವುದು ಗಿಫ್ಟ್ ನೀಡಿದಂತಾಗಿದೆ ಎಂದು ಶಾಸಕ ಸಾ. ರಾ. ಮಹೇಶ್ ಆರೋಪಿಸಿದ್ದಾರೆ.

Advertisement

ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾಗಿದ್ದ ರೋಹಿಣಿ ಸಿಂಧೂರಿ ನೆರೆಯ ಆಂಧ್ರಪ್ರದೇಶಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಆಂಧ್ರಪ್ರದೇಶದ ತಿರುಮಲದಲ್ಲಿನ ಕರ್ನಾಟಕ ರಾಜ್ಯದ ಛತ್ರಕ್ಕೆ ಸೇರಿದ ಜಾಗದಲ್ಲಿ ವಸತಿ ಗೃಹ, ಕಲ್ಯಾಣ ಮಂಟಪ ಇತ್ಯಾದಿ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸುವ ಕಾಮಗಾರಿಗಳ ಅಂದಾಜುಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ವಿಚಾರದಲ್ಲಿ ಕರ್ನಾಟಕದ ಹಣವನ್ನು ಆಂಧ್ರದ ಪಾಲಾಗುವಂತೆ ರೋಹಿಣಿ ಸಿಂಧೂರಿ ಮಾಡಿದ್ದಾರೆ ಎಂದು ಹೇಳಿದರು.

ಕರ್ನಾಟಕದ ಛತ್ರಕ್ಕೆ ಸೇರಿದ 7.05 ಎಕರೆ ಜಾಗದಲ್ಲಿ ಕಲ್ಯಾಣಮಂಟಪ ಅಭಿವೃದ್ಧಿಗೆ ಸಂಬಂಧಿಸಿದ 200 ಕೋಟಿಗಳ ವೆಚ್ಚದ ಕಾಮಗಾರಿಯ ವಿನ್ಯಾಸವನ್ನು ಮೆಸರ್ಸ್ ಗಾಯತ್ರಿ ಅಂಡ್ ನಮಿತ್ ಆರ್ಕಿಟೆಕ್ಟ್ಸ್ ಅವರು ತಯಾರಿಸಲಿದ್ದಾರೆ. ಇದರ ಇಂಜಿನಿಯರಿಂಗ್ ವಿನ್ಯಾಸ ಮತ್ತು ತಾಂತ್ರಿಕ ಸೇವೆಗಳನ್ನು ಮೆಸರ್ಸ್ ಡಿಸೈನ್ ವೆಂಚರ್ ಕನ್ಸಲ್ಟೆಂಟ್ ಪ್ರೈವೇಟ್ ಲಿಮಿಟೆಡ್ ಅವರಿಗೆ ಯೋಜನೆಯ ವೃತ್ತಿ ಶುಲ್ಕ 2.5% ರಂತೆ ಎರಡೂ ಸೇರಿ ಅಂದಾಜು ಮೊತ್ತಕ್ಕೆ 5% ರಂತೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆಯಡಿ ವಿನಾಯಿತಿ ನೀಡುವ ಪ್ರಸ್ತಾವನೆಯಾಗಿರುತ್ತದೆ. ಇದಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಮೂಲಕ ಆಂಧ್ರಪ್ರದೇಶಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಜಾಗ ನಮ್ಮದು, ಹಣ ನಮ್ಮದಾಗಿದ್ದು, ನಮ್ಮಲ್ಲೂ ವಿನ್ಯಾಸಕಾರರು ಇರಲಿಲ್ಲವಾ? ನಮ್ಮ ಲೋಕೋಪಯೋಗಿ ಇಲಾಖೆ ಇರಲಿಲ್ವಾ ಎಂದು ಪ್ರಶ್ನಿಸಿದರು.

ಸದರಿ ಕಾಮಗಾರಿಯನ್ನು ರಾಜ್ಯದ ಲೋಕೋಪಯೋಗಿ ಇಲಾಖೆಗೆ ವಹಿಸಬಹುದಿತ್ತು. ಆದರೆ ಎಲ್ಲವನ್ನೂ ಟಿಟಿಡಿ ಮೇಲ್ವಿಚಾರಣೆ ಮೂಲಕ ಆಂಧ್ರಪ್ರದೇಶದ ಖಾಸಗಿ ಸಂಸ್ಥೆಗೆ ರೋಹಿಣಿ ಸಿಂಧೂರಿ ಅನುಕೂಲ ಮಾಡಿಕೊಟ್ಟಿದ್ದಾರೆ. ಅದರ ಪ್ರತಿಫಲವಾಗಿ ರೋಹಿಣಿ ಸಿಂಧೂರಿಯವರಿಗೆ ಮೈಸೂರು ಜಿಲ್ಲಾಧಿಕಾರಿ ಸ್ಥಾನ ಗಿಫ್ಟ್ ನಂತೆ ಸಿಕ್ಕಿದೆ ಸಾ.ರಾ. ಮಹೇಶ್ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next