Advertisement

ಜನರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಕ್ರಮ : ಶಾಸಕಿ ರೂಪಾಲಿ ಎಸ್.ನಾಯ್ಕ

07:03 PM May 14, 2021 | Team Udayavani |

ಕಾರವಾರ: ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕಿನ ಪ್ರಕರಣಗಳ ನಿಯಂತ್ರಣಕ್ಕೆ ತರಲು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸುವಂತೆ ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪ ಅವರನ್ನು ಶಾಸಕರಾದ ರೂಪಾಲಿ ಎಸ್.ನಾಯ್ಕ ಒತ್ತಾಯಿಸಿದ್ದಾರೆ.

Advertisement

ಉತ್ತರ ಕನ್ನಡ ಜಿಲ್ಲೆಯ ಇತರೆಡೆಗಳಂತೆ ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲೂ ಕೋವಿಡ್-19 ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ. ಪಟ್ಟಣ ಪ್ರದೇಶದಲ್ಲಿ ಹೆಚ್ಚಿದ್ದ ಸೋಂಕಿನ ಪ್ರಕರಣಗಳು ಈಗ ಹಳ್ಳಿಹಳ್ಳಿಯನ್ನೂ ವ್ಯಾಪಿಸಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಶಾಸಕರು, ಈ ಹಿನ್ನೆಲೆಯಲ್ಲಿ ಕೆಲ ತುರ್ತು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯ ಇದೆ ಎಂದು ಒತ್ತಾಯಿಸಿದ್ದಾರೆ.

ಪ್ರತಿಯೊಂದು ಗ್ರಾಮ ಪಂಚಾಯತ್ ಮಟ್ಟದಲ್ಲಿ ಕ್ವಾರೆಂಟೈನ್ ಸೆಂಟರ್ ಗಳನ್ನು ತೆರೆಯಬೇಕು. ಇದಕ್ಕಾಗಿ ಹಾಸ್ಟೇಲ್, ಸಭಾಭವನ, ಇತರ ಕಟ್ಟಡವನ್ನು ಬಳಸಿಕೊಳ್ಳಬೇಕು. ಸೋಂಕಿತರು ಮನೆಯಲ್ಲೇ ಇರುವುದರಿಂದ ಯಾರು ಸೋಂಕಿತರು ಎನ್ನುವುದು ಗೊತ್ತಾಗದೆ ಅವರ ಮನೆಗಳಿಗೂ ಕೆಲವರು ಹೋಗುವುದರಿಂದ ಅವರಿಗೂ ಸೋಂಕು ಹರಡುವ ಸಾಧ್ಯತೆ ಇದೆ. ಕೆಲ ಸೋಂಕಿತರು ಅಲ್ಲಿಲ್ಲಿ ತಿರುಗಾಡುತ್ತಿರುವುದೂ ಬೆಳಕಿಗೆ ಬಂದಿದೆ. ಇದರಿಂದ ಸೋಂಕಿತರ ಮನೆಗೆ ಬೋರ್ಡ್ ಅಂಟಿಸಬೇಕು.

ಚಿಕ್ಕ ಮಕ್ಕಳಿಗೆ ಕೊರೋನಾ ಸೋಂಕು ಕಂಡುಬಂದಲ್ಲಿ ಅವರ ಆರೈಕೆಗೆ ಪ್ರತ್ಯೇಕ ಕೇಂದ್ರವನ್ನು ಆರಂಭಿಸಬೇಕು. ಮಕ್ಕಳ ಜತೆ ಪಾಲಕರೂ ಇರುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದರು.

ಆರೋಗ್ಯ ಸಮೀಕ್ಷೆ ನಡೆಸಲಿ:

Advertisement

ಈ ಹಿಂದೆ ಜಿಲ್ಲಾದ್ಯಂತ ನಡೆಸಿದಂತೆ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಈಗ ಆರೋಗ್ಯ ಸಮೀಕ್ಷೆ ನಡೆಯಬೇಕಿದೆ. ನಮ್ಮ ಕ್ಷೇತ್ರದ ಜನತೆ ನೆಮ್ಮದಿಯಿಂದ ಇರಬೇಕಾದರೆ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಅನಿವಾರ್ಯವಾಗಿ ಕೈಗೊಳ್ಳಲೇಬೇಕಾಗಿದೆ. ಈಗಾಗಲೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗಿದೆ. ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್, ಉಸ್ತುವಾರಿ ಕಾರ್ಯದರ್ಶಿ  ಮೋಹನರಾಜ್ ಹಾಗೂ ಇತರ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ನಮ್ಮ ಜನತೆಯ ಆರೋಗ್ಯ ಸುರಕ್ಷತೆಗಾಗಿ ಸದ್ಯದಲ್ಲೇ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ರೂಪಾಲಿ ಎಸ್.ನಾಯ್ಕ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next