ಕಾರವಾರ: ನನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದೀರಿ. 2018 ರಿಂದಲೂ ನನ್ನ ಪ್ರವಾಸೋದ್ಯಮ ದಿನಕ್ಕೆ ಕರೆದಿಲ್ಲ. ಇಲಾಖೆಯ ಸಭೆಯಾಗಿಲ್ಲ. ಸಚಿವೆ ಜೊಲ್ಲೆ ಇದ್ದಾಗಲೂ ನಿರ್ಲಕ್ಷ್ಯ ಮಾಡಲಾಗಿತ್ತು ಎಂದು ಶಾಸಕಿ ರೂಪಾಲಿ ನಾಯ್ಕ ಗುಡುಗಿದರು.
ಕಾರವಾರದಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕಿ ರೂಪಾಲಿ ನಾಯ್ಕ ಅಕ್ಷರಶಃ ಉಗ್ರರೂಪ ತಾಳಿದರು. ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಬೆವರಿಳಿಸಿದರು.
ಮೂರು ವರ್ಷದಿಂದ ಸಭೆ ನಡೆದಿಲ್ಲ. ಹೀಗೆ ಮುಂದೆ ಹೀಗಾಗಬಾರದು. ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೊರಗಿನವರೇ ಬೇಕಾ? ನಮ್ಮ ಜನ ಇಲ್ಲವೇ? 2014 ರಲ್ಲಿ ತಿಳುಮಾತಿ ಅಭಿವೃದ್ಧಿ ಗೆ ಬಂದ ಹಣ 2017 ರಲ್ಲಿ ವಾಪಾಸ್ ಹೋಗಿದೆ. ಇದಕ್ಕೆ ಯಾರು ಹೊಣೆ ಎಂದು ಶಾಸಕಿ ಪ್ರೇಕ್ಷಕರ ಎದುರೇ ಅಧಿಕಾರಿಗಳನ್ನು ಜಾಡಿಸಿದರು.
ಇದನ್ನೂ ಓದಿ:ತರಬೇತಿ ಕಾಲೇಜಿನಲ್ಲಿ ಮಹಿಳಾ ಅಧಿಕಾರಿ ಮೇಲೆ ಅತ್ಯಾಚಾರ; ವಾಯುಪಡೆ ಅಧಿಕಾರಿ ಬಂಧನ
ಅಧಿಕಾರಿಗಳು ಇದಕ್ಕೆ ಉತ್ತರ ಕೊಡಬೇಕು. ರಾಕ್ ಗಾರ್ಡನ್ ಯಾರು ನೋಡುತ್ತಿದ್ದಾರೆ. ಅಲ್ಲಿ ಕಾರ್ಮಿಕರಿಗೆ ವೇತನ ಆಗಿಲ್ಲ. ರಾಕ್ ಗಾರ್ಡನ್ ಮುಚ್ಚಲು ಕಾರಣ ಯಾರು? ರಾಕ್ ಗಾರ್ಡನ್ ಪಕ್ಕದ ಹೋಟೆಲ್ ಹೇಗೆ ನಡೆಯುತ್ತಿದೆ? ಬೀಚ್ ಜಾಗ ಕೆಲವರಿಗೆ 20 ವರ್ಷ ಲೀಜ್ ಕೊಡೋದು. ಕೆಲವರಿಗೆ ಅದೇ ಬೀಚ್ ಜಾಗ 2 ವರ್ಷ ಲೀಜ್ ಕೊಡೋದು ಯಾವ ನ್ಯಾಯ ಇದು. ಅಧಿಕಾರಿಗಳು ಮನಸ್ಸಿಗೆ ಬಂದ ಹಾಗೆ ಮಾಡಲಾಗದು. ಇದನ್ನು ಸಹಿಸಲ್ಲ. ಇದನ್ನು ಹೇಗೆ ನಿಯಂತ್ರಣ ಮಾಡಬೇಕೆಂದು ನನಗೆ ಗೊತ್ತಿದೆ ಎಂದು ಶಾಸಕಿ ರೂಪಾಲಿ ನಾಯ್ಕ ಗುಡುಗಿದರು.
ಪ್ರವಾಸೋದ್ಯಮ ಹಿನ್ನಡೆಯಾಗಲು ಬಿಡಲ್ಲ. ದಕ್ಷಿಣ ಕನ್ನಡ, ಉಡುಪಿಯಿಂದ ಕಲಿಯಬೇಕಿದೆ ಎಂದರು. ವಿಶ್ವ ಪ್ರವಾಸೋದ್ಯಮ ದಿನಕ್ಕೆ ಸ್ಥಳೀಯ ಶಾಸಕರನ್ನು ನಿರ್ಲಕ್ಷಿಸಿದರೆ ಸುಮ್ಮನಿರಲ್ಲ ಎಂದು ಎಚ್ಚರಿಸಿದರು.